
India vs South Africa 2nd T20: SA Wins by 51 Runs ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 51 ರನ್‌ಗಳ ಸೋಲು ಕಂಡಿದೆ. ಕ್ವಿಂಟನ್ ಡಿ ಕಾಕ್ ಅವರ 90 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಚಂಡೀಗಢ (ಡಿ.11): ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಅಬ್ಬರದ ಬ್ಯಾಟಿಂಗ್ ಎದುರು ಟೀಮ್ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ ಥಂಡಾ ಹೊಡೆದಿದೆ. ಅನುಭವಿ ಕ್ವಿಂಟನ್ ಡಿ ಕಾಕ್ ಸ್ಫೋಟಕ ಇನ್ನಿಂಗ್ಸ್‌ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಸೂಪರ್ ಇನ್ನಿಂಗ್ಸ್ ನೆರವಿನಿಂದ ಭಾರೀ ಮೊತ್ತ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 162 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ 2ನೇ ಟಿ20 ಪಂದ್ಯದಲ್ಲಿ 51 ರನ್‌ಗಳ ಗೆಲುವು ಕಂಡಿದೆ. ಅದರೊಂದಿಗೆ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಗುರುವಾರ ಮಹಾರಾಜಾ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗೆ 213 ರನ್‌ಗಳ ಭರ್ಜರಿ ಮೊತ್ತ ಪೇರಿಸಿತು. ಇದಕ್ಕೆ ಕಾರಣರಾದವರು ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್. 46 ಎಸೆತಗಳ ಇನ್ನಿಂಗ್ಸ್ ಆಡಿದ ಮಾಜಿ ಕ್ಯಾಪ್ಟನ್ 5 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 90 ರನ್ ಬಾರಿಸಿದರು. ಅವರಿಗೆ ಸಾಥ್ ನೀಡಿದ ಏಡೆನ್ ಮಾರ್ಕ್ರಮ್ (29 ರನ್, 26 ಎಸೆತ, 1 ಬೌಂಡರಿ, 2 ಸಿಕ್ಸರ್) ತಾಳ್ಮೆಯ ಆಟವಾಡಿದರೆ, ಡವಾಲ್ಡ್ ಬ್ರೇವಿಸ್ (14 ರನ್, 10 ಎಸೆತ, 1 ಬೌಂಡರಿ, 1 ಸಿಕ್ಸರ್), ಡೊನೊವನ್ ಫೆರಿರಾ (30 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (20 ರನ್, 12 ಎಸೆತ, 2 ಬೌಂಡರಿ, 1 ಸಿಕ್ಸರ್) ನೆರವಿನಿಂದ ತಂಡ ದೊಡ್ಡ ಮೊತ್ತ ಪೇರಿಸಿತು.