
ಮೈಸೂರಿನ ಶಿಕ್ಷಕಿ ಜ್ಯೋತಿ ಅವರು, ಪತಿಯ ನಿಧನದ ದುಃಖದ ನಡುವೆಯೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗಣಿತ ಪರೀಕ್ಷಾ ಸಿದ್ಧತೆಗಾಗಿ ಶಾಲೆಗೆ ಹಾಜರಾಗಿದ್ದಾರೆ. ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆದ್ಯತೆ ನೀಡಿದ ಅವರ ಈ ಕರ್ತವ್ಯನಿಷ್ಠೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಮೈಸೂರು (ಮಾ. 27): ಶಿಕ್ಷಕ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಅದೊಂದು ಪವಿತ್ರ ಜವಾಬ್ದಾರಿ ಎಂಬುದನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರು ತಮ್ಮ ನಡೆ ಮೂಲಕ ಜಗತ್ತಿಗೆ ಸಾರಿದ್ದಾರೆ. ಪತಿಯ ಸಾವಿನ ಅತೀವ ನೋವಿನ ನಡುವೆಯೂ ಅವರು ಶಾಲೆಗೆ ಹಾಜರಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗಣಿತದ ಪಾಠ ಮಾಡುವ ಮೂಲಕ ಅಪಾರ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಯಾಗಿರುವ ಜ್ಯೋತಿ ಅವರ ಪತಿ, ಸಾಫ್ಟ್ವೇರ್ ಎಂಜಿನಿಯರ್ ಕಿರಣ್ ಕುಮಾರ್ (47) ಅವರು ಮಾರ್ಚ್ 25ರ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಪತಿಯ ಅಗಲಿಕೆಯಿಂದ ಕುಟುಂಬವೇ ಶೋಕಸಾಗರದಲ್ಲಿ ಮುಳುಗಿದ್ದರೂ, ಜ್ಯೋತಿ ಅವರು ತಮ್ಮ ವೈಯಕ್ತಿಕ ನೋವಿಗಿಂತ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ ಎಂದು ಭಾವಿಸಿದರು.
ವಿದ್ಯಾರ್ಥಿಗಳಿಗಾಗಿ ದೃಢ ನಿರ್ಧಾರ
ಮಾರ್ಚ್ 28ರಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ನಡೆಯಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯವು ಕೊಂಚ ಕಠಿಣವೆನಿಸುವುದರಿಂದ, ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಕ್ಕಳಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ಜ್ಯೋತಿ ಅವರು ಪತಿಯ ಮರಣದ ಮರುದಿನವೇ (ಗುರುವಾರ) ಶಾಲೆಗೆ ಹಾಜರಾದರು. ಗಣಿತ ಶಿಕ್ಷಕಿಯೂ ಆಗಿರುವ ಅವರು, ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಕಠಿಣ ಸಮಸ್ಯೆಗಳನ್ನು ಬಿಡಿಸುವ ಕುರಿತು ಮಕ್ಕಳಿಗೆ ಧೈರ್ಯ ತುಂಬಿದರು.
ಸಾಂತ್ವನ ನೀಡಿದ ಬಿಇಒ
ಈ ವಿಷಯ ತಿಳಿದ ತಕ್ಷಣ ಎಚ್.ಡಿ.ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸಿ.ಎನ್. ರಾಜು ಅವರು ಶಾಲೆಗೆ ಭೇಟಿ ನೀಡಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. “ನಿಮ್ಮ ಪತಿ ನಿನ್ನೆಯಷ್ಟೇ ಅಗಲಿದ್ದಾರೆ, ನೀವು ಅತೀವ ದುಃಖದಲ್ಲಿದ್ದೀರಿ. ನಿಮ್ಮ ಬದಲಿಗೆ ಎರಡು ದಿನಗಳ ಮಟ್ಟಿಗೆ ಬೇರೆ ಶಿಕ್ಷಕರನ್ನು ನಿಯೋಜಿಸುತ್ತೇವೆ, ನೀವು ಮನೆಗೆ ತೆರಳಿ ವಿಶ್ರಾಂತಿ ಪಡೆಯಿರಿ” ಎಂದು ಸಲಹೆ ನೀಡಿದರು.
ಆದರೆ ಇದನ್ನು ವಿನಯದಿಂದಲೇ ನಿರಾಕರಿಸಿದ ಜ್ಯೋತಿ ಅವರು, “ಗಣಿತ ವಿಷಯವನ್ನು ಸಂಪೂರ್ಣವಾಗಿ ನಾನೇ ಬೋಧಿಸಿದ್ದೇನೆ. ನನ್ನ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂಬುದು ನನ್ನ ಆಸೆ. ನಾಳೆಯೂ ಬಂದು ಮಕ್ಕಳ ಪರೀಕ್ಷಾ ಸಿದ್ಧತೆಗೆ ಬೆಂಬಲವಾಗಿರುತ್ತೇನೆ” ಎಂದು ಹೇಳುವ ಮೂಲಕ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದರು.
ವೈಯಕ್ತಿಕ ಸಂಕಷ್ಟದ ಸಮಯದಲ್ಲಿಯೂ ವೃತ್ತಿ ಬದ್ಧತೆ ಮೆರೆದ ಜ್ಯೋತಿ ಅವರ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಇಒ ರಾಜು ಅವರು ಮಾತನಾಡಿ, “ಜ್ಯೋತಿ ಅವರು ಮಾನವೀಯತೆ ಮತ್ತು ವೃತ್ತಿನಿಷ್ಠೆಗೆ ಅಪರೂಪದ ಉದಾಹರಣೆಯಾಗಿದ್ದಾರೆ. ಅವರ ಈ ಸೇವಾ ಮನೋಭಾವ ಇಡೀ ಸಮಾಜಕ್ಕೆ ಪ್ರೇರಣೆ” ಎಂದು ಪ್ರಶಂಸಿಸಿದ್ದಾರೆ.