
ಚೀನಾದಲ್ಲಿ “ರಿವರ್ಸ್ ಪೇರೆಂಟಿಂಗ್” ಎಂಬ ಹೊಸ ಪಾಲನಾ ವಿಧಾನವು ಜನಪ್ರಿಯವಾಗುತ್ತಿದೆ. ಇದು ಮಕ್ಕಳಿಗೆ ಉಪದೇಶ ನೀಡುವ ಬದಲು, ಅವರ ನಿರ್ಧಾರಗಳ ಪರಿಣಾಮಗಳನ್ನು ತಾವೇ ಅನುಭವಿಸಿ ಕಲಿಯಲು ಅವಕಾಶ ನೀಡುತ್ತದೆ. ಇದು ಹೇಗೆ? ನೀವೂ ಈ ತಂತ್ರ ಕಲೀರಿ.
ಚಳಿಗಾಲ. ಹೊರಗೆ ಮಂಜು ಸುರೀತಾ ಇದೆ. ಮನೆಯೊಳಗೆ ಮೂರು ವರ್ಷದ ಮಗು ತೆಳುವಾದ ಪ್ರಿನ್ಸೆಸ್ ಉಡುಪು ಧರಿಸಿ ಹೊರಗೆ ಹೋಗಬೇಕು ಅಂತ ಹಠ ಹಿಡೀತಾ ಇದೆ. ಕಾರ್ಟೂನ್‌ನಲ್ಲಿ ಬರೋ ಪ್ರಿನ್ಸೆಸ್‌ಗಳು ಚಳಿಯಲ್ಲೇ ಇರುತ್ತಾರೆ ಎಂದು ಮಗು ನಂಬಿತ್ತು. ಹಾಗೆ ಹೊರಗೆ ಹೋದರೆ ಮಗುವಿಗೆ ಶೀತ ಜ್ವರ ಗ್ಯಾರಂಟಿ. ನೀವೇನು ಮಾಡ್ತೀರಿ? ಜೋರು ಮಾಡಿ, ಗದರಿಸಿ ಸುಮ್ಮನಾಗಿಸ್ತೀರಿ. ಆದರೆ ಮಗು ಬೇಜಾರು ಮಾಡಿಕೊಳ್ಳುತ್ತೆ. ಚೀನಾದಲ್ಲಿ ಒಬ್ಬಳು ತಾಯಿ ಹಾಗೆ ಮಾಡಲಿಲ್ಲ. ಬಲವಂತವಾಗಿ ತಡೆಯಲಿಲ್ಲ. ಬದಲಾಗಿ, ಮಗು ಹೊರಗೆ ಹೋಗಲು ಬಿಟ್ಟು, ತಾನೂ ಮೌನವಾಗಿ ಹಿಂಬಾಲಿಸಿದಳು. ಅಯ್ಯಯ್ಯೋ ಚಳಿ ಅಂತ ಮಗು ವಾಪಸ್ ಬಂತು.
ಯಾರೋ ಇದನ್ನು ವಿಡಿಯೋ ಮಾಡಿದ್ರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. “ಒಮ್ಮೆ ತೊಂದರೆ ಅನುಭವಿಸಿ ಪಡೆಯುವ ಪಾಠ, ನೂರು ಸಲ ಮಾಡುವ ಉಪದೇಶಕ್ಕಿಂತ ಪರಿಣಾಮಕಾರಿ” ಎಂದು ಹಲವರು ಅಭಿಪ್ರಾಯಪಟ್ಟರು. ಈ ಚರ್ಚೆಯಿಂದ “ರಿವರ್ಸ್ ಪೇರೆಂಟಿಂಗ್” ಎಂಬ ಪದ ಮತ್ತೆ ಚಾಲ್ತಿಗೆ ಬಂದಿತು.
ಹೌದು, ಚೀನಾದಲ್ಲಿ “ರಿವರ್ಸ್ ಪೇರೆಂಟಿಂಗ್” ಎಂಬ ಹೊಸ ಮಕ್ಕಳ ಪಾಲನಾ ವಿಧಾನಕ್ಕೆ ಈಗ ಹೆಚ್ಚು ಗಮನ ಸಿಕ್ಕಿದೆ. ವಿಶೇಷವಾಗಿ ಮಿಲ್ಲೇನಿಯಲ್ ಪೋಷಕರಲ್ಲಿ ಈ ವಿಧಾನ ಜನಪ್ರಿಯವಾಗುತ್ತಿದೆ. ಪೋಷಕರು ಮಕ್ಕಳಿಗೆ ಉಪದೇಶ ಮಾಡಿ, ಹೊಡೆದು ಬಡಿದು ಬುದ್ಧಿ ಹೇಳಲ್ಲ. ಅದರ ಶೈಲಿಯೇ ಬೇರೆ. ಇದರಲ್ಲಿ ಸಂವಾದ, ಪರಸ್ಪರ ಗೌರವ ಮತ್ತು ಅರ್ಥೈಸುವಿಕೆ ಮುಖ್ಯ. ಈ ವಿಚಾರವನ್ನು ಮೊದಲು ವರದಿ ಮಾಡಿದ್ದು South China Morning Post ಪತ್ರಿಕೆ. 2022ರ ನವೆಂಬರ್‌ನಲ್ಲಿ ಚೀನಾದ ಹೈಲೋಂಗ್ಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ಒಂದು ಘಟನೆ ಆ ಚರ್ಚೆಗೆ ಕಾರಣವಾಯಿತು.
ಮೂರು ವಿಧಾನಗಳು
ರಿವರ್ಸ್ ಪೇರೆಂಟಿಂಗ್‌ನಲ್ಲಿ ಮೂರು ವಿಧಾನಗಳಿವೆ. ಮೊದಲನೆಯದು “ರೋಲ್ ರಿವರ್ಸ್” ವಿಧಾನ. ಇಲ್ಲಿ ಪೋಷಕರು ತಾವೇ ಮಗುವಿನಿಂದ ಸಹಾಯ ಬೇಕಿರುವವರಂತೆ ವರ್ತಿಸಿ, ಮಕ್ಕಳಲ್ಲಿ ಜವಾಬ್ದಾರಿ, ಕರುಣೆ, ಸಹಾಯದ ಗುಣ ಬೆಳೆಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಸುಸ್ತಾಗ್ತಿದೆ, ತನಗೆ ಒಂದು ಗ್ಲಾಸ್ ನೀರು ತಂದುಕೊಡು ಎಂದು ಮಗುವಿಗೆ ಹೇಳಿದರೆ ಕರುಣೆಯಿಂದಲಾದರೂ ಮಗು ಹಾಗೆ ಮಾಡುತ್ತೆ.
ಎರಡನೆಯದು “ಪರಿಣಾಮ ಅನುಭವ” ವಿಧಾನ. ಮಕ್ಕಳ ನಿರ್ಧಾರಗಳ ಪರಿಣಾಮವನ್ನು ಅವರಿಗೇ ನೇರವಾಗಿ ಅನುಭವಿಸಲು ಅವಕಾಶ ನೀಡಲಾಗುತ್ತದೆ. ಉದಾಹರಣೆಗೆ, ಹುಬೆ ಪ್ರಾಂತ್ಯದ ವುಹಾನ್ ನಗರದಲ್ಲಿ ಎಂಟು ವರ್ಷದ ಬಾಲಕ ಶಾಲೆ ಬಿಟ್ಟು ಗೇಮರ್ ಆಗುತ್ತೇನೆ ಅಂತ ಹಠ ಹಿಡಿದ. ಪೋಷಕರು ಒಪ್ಪಿಕೊಂಡರು. ದಿನಕ್ಕೆ 16 ಗಂಟೆ ವಿಡಿಯೋ ಗೇಮ್ ಆಡಬೇಕು ಮತ್ತು ವರದಿ ನೀಡಬೇಕು ಎಂದು ಷರತ್ತು ಹಾಕಿದರು. ಮೂರೇ ದಿನಗಳಲ್ಲಿ ಬಾಲಕ ದಣಿದುಹೋದ. ತನ್ನ ನಿರ್ಧಾರವನ್ನು ವಾಪಸ್ ತಗೊಂಡ.
ಮೂರನೆಯದು “ಮಿರರ್ ಪ್ರತಿಕ್ರಿಯೆ” ವಿಧಾನ. ಮಗು ಕೋಪದಿಂದ ಅತ್ತರೆ, ಪೋಷಕರೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿ ಮಗುವಿಗೆ ಅರಿವು ಮೂಡಿಸುತ್ತಾರೆ. ಝಾಂಗ್ ಯು ಎಂಬ ತಾಯಿ, ಮಗಳು ಐಸ್ ಕ್ರೀಮ್ ಕೊಡದಿದ್ದಕ್ಕೆ ಅತ್ತಾಗ ತಾನೂ ನೆಲಕ್ಕೆ ಬಿದ್ದು ಜೋರಾಗಿ ಅತ್ತಳು. ತಾಯಿಯ ಅವತಾರ ನೋಡಿ ಮಗು ಬೆಚ್ಚಿಬಿದ್ದು ಅಳುವುದನ್ನು ನಿಲ್ಲಿಸಿತು ಎಂದು ಅವರು ಹೇಳಿದ್ದಾರೆ.
ಮಾನಸಿಕ ಸಲಹೆಗಾರ ಹಾನ್ ಸಾನ್ಕಿ ಅವರ ಪ್ರಕಾರ, ಇದು “ಪರಿಣಾಮ ಆಧಾರಿತ ಶಿಕ್ಷಣ” ರೀತಿ. ಚಿಕ್ಕ ಮಕ್ಕಳಿಗೆ ಇದು ಸಹಾಯಕ. ಆದರೆ ಎಂಟು-ಒಂಬತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದು ನಡೆಯೊಲ್ಲ. ತಾರ್ಕಿಕವಾಗಿ ವಿವರಿಸುವುದು ಅಗತ್ಯ ಎಂದು ಅವರು ಎಚ್ಚರಿಸಿದ್ದಾರೆ. ಮಕ್ಕಳ ಬೆಳವಣಿಗೆ ಹಂತ ಮತ್ತು ಭಾವನಾತ್ಮಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಹೊಸ ವಿಧಾನ ಅನುಸರಿಸಬೇಕು ಅಂತಾರೆ ತಜ್ಞರು.