
ಮೂಗಿನ ತುದಿಯಲ್ಲಿ ಗಂಡನ ಕೋಪಕ್ಕೆ ಹೆಂಡತಿ ಮೂಗು ಮಾಯ, 12 ಹೊಲಿಗೆ ಜೊತೆ ಐಸಿಯುನಲ್ಲಿ ಚಿಕಿತ್ಸೆ, ಗಂಡನ ಕೋಪ ಆಕ್ರೋಶಕ್ಕೆ ಹೆಂಡತಿ ಆರೋಗ್ಯ ಗಂಭೀರವಾಗಿದೆ. ಮುಖ ವಿಕಾರಗೊಂಡಿದೆ. ಪೋಷಕರು ಕಂಗಾಲಾಗಿದ್ದಾರೆ.
ಹಮೀರ್‌ಪುರ್ (ಏ.02) ಹಲವರಿಗೆ ಮೂಗಿನ ತುದಿಯಲ್ಲಿ ಕೋಪ ಇರುತ್ತೆ ಅನ್ನೋ ಮಾತು ಹಲವು ಬಾರಿ ಕೇಳಿರುತ್ತಿರಿ. ಒಂದೆರಡು ಮಾತಿಗೆ ಸಿಟ್ಟು ನೆತ್ತಿಗೇರಿ ಆಕ್ರೋಶವಾಗಿ ಹೊರಬಂದಿರುತ್ತದೆ. ಹೀಗೆ ಇಲ್ಲೊಬ್ಬ ಪತ್ನಿ ಜೊತೆ ಪ್ರತಿ ದಿನ ಒಂದಲ್ಲಾ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದ. ಹೀಗೆ ಮನೆಗೆ ಬಂದ ಗಂಡ ಸಂಜೆ ವೇಳೆ ಪತ್ನಿ ಜೊತೆ ಜಗಳವಾಡಿದ್ದಾನೆ. ಇಷ್ಟೇ ಆಗಿದ್ದರೆ ಪರ್ವಾಗಿರ್ಲಿಲ್ಲ. ಆದರೆ ಈತ ಕೆರಳಿ ಕೆಂಡವಾಗಿದ್ದಾನೆ. ಬಂದ ಕೋಪದಲ್ಲಿ ಹೆಂಡತಿ ಮೂಗು, ಕೆನ್ನೆಯನ್ನೇ ಕಚ್ಚಿದ್ದಾನೆ. ಈತನ ಆಕ್ರೋಶದಲ್ಲಿ ಹೆಂಡತಿಯ ಮೂಗೇ ಇಲ್ಲದಾಗಿದೆ. ಒಂದು ಕೆನ್ನೆಯನ್ನೇ ಕಚ್ಚಿ ತೆಗೆದ ಘಟನೆ ಉತ್ತರ ಪ್ರದೇಶಧ ಹಮೀರ್‌ಪುರ್‌ನಲ್ಲಿ ನಡೆದಿದೆ.
12 ಹೊಲಿಗೆ ಹಾಕಿದ ವೈದ್ಯರು
ಇವರ ಮದುವೆಯಾಗಿ ಕೆಲ ವರ್ಷಗಳೇ ಉರುಳಿದೆ. ಪ್ರತಿ ದಿನ ಹೆಂಡತಿ ಜೊತೆ ಜಗಳವಾಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿಯ ಜಗಳಕ್ಕೆ ಹೆಂಡತಿ ಪರಿಸ್ಥಿತಿ ಗಂಭೀರವಾಗಿದೆ. ಗಂಡ ನಾಯಿಯಂತೆ ಉಗ್ರ ಸ್ವರೂಪಗೊಂಡ ಕಾರಣ ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು 12 ಹೊಲಿಗೆ ಹಾಕಿ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಯ ಮೆಡಿಕಲ್ ಕಾಲೇಜಿಗೆ ಸೂಚಿಸಿದ್ದಾರೆ.
ಪ್ಲಾಸ್ಟಿಕ್ ಸರ್ಜರಿಗೆ ಸೂಚನೆ
ಇದರಂತೆ ಮೆಡಿಕಲ್ ಕಾಲೇಜಿನಲ್ಲಿ ದಾಖಲಾದ ಈಕೆಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಮಹಿಳೆಯ ಮೂಗು ಕಚ್ಚಿ ತೆಗೆಯಲಾಗಿದೆ. ಇತ್ತ ಕೆನ್ನೈಯ ಮಾಂಸಖಂಡಗಳೇ ಇಲ್ಲದಾಗಿದೆ. ಹೀಗಾಗಿ ಮುಖ ವಿರೂಪಗೊಂಡಿದೆ. ಮತ್ತೊಂದೆಡೆ ಆರೋಗ್ಯವೂ ಗಂಭೀರವಾಗಿದೆ. ಕೆಲ ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಇದೇ ವೇಳೆ ಮುಖ ವಿರೂಪಗೊಂಡಿರುವ ಕಾರಣ ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸೂಚಿಸಿದ್ದಾರೆ. ಇತ್ತ ಇಷ್ಟು ದುಬಾರಿ ಚಿಕಿತ್ಸೆಗೆ ಈಕೆಯ ಕುಟುಂಬಸ್ಥರು ಹೆಣಗಾಡುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಈಕೆಯ ಪರಿಸ್ಥಿತಿ ಗಂಭೀರವಾಗಿದೆ. ಚೇತರಿಕೆ ನಿಧಾನವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಗಳ ಪರಿಸ್ಥಿತಿ ನೋಡಿ ಪೋಷಕರು ಕಣ್ಣೀರಿಟ್ಟಿದ್ದಾರೆ.
ಸಹೋದರನಿಂದ ದೂರು
ಈಕೆಯ ಸಹೋದರ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ಕೈಕೆತ್ತಿಕೊಂಡಿದ್ದಾರೆ. ಇತ್ತ ಹೆಂಡತಿ ಮೂಗು, ಕೆನ್ನೆಗೆ ಕಚ್ಚಿದ ಬೆನ್ನಲ್ಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಫೋನ್ ಮನೆಯಲ್ಲಿಟ್ಟು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.