
ಬೆಂಗಳೂರು ಮತ್ತು ಮಂಗಳೂರು ಮೂಲಕ ಕಣ್ಣೂರುವರೆಗೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಇದೀಗ ಕೇರಳದ ಕೋಯಿಕ್ಕೋಡ್ವರೆಗೆ ವಿಸ್ತರಿಸಲಾಗಿದೆ. ಮಾರ್ಚ್ 15 ರಿಂದ ಜಾರಿಗೆ ಬರುವ ಈ ವಿಸ್ತರಣೆಯು, ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.
ಮಂಗಳೂರು: ಬೆಂಗಳೂರು ಮತ್ತು ಮಂಗಳೂರು ಮೂಲಕ ಕೇರಳದ ಕಣ್ಣೂರುವರೆಗೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್ಪ್ರೆಸ್ ರಾತ್ರಿ ರೈಲು ಸೇವೆಯನ್ನು ಇದೀಗ ಕೇರಳದ ಕೋಯಿಕ್ಕೋಡ್ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಕರಾವಳಿ ಕರ್ನಾಟಕ ಹಾಗೂ ಉತ್ತರ ಕೇರಳದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲಾಗಿದೆ.
ದಕ್ಷಿಣ ಪಶ್ಚಿಮ ರೈಲ್ವೆ ಹುಬ್ಬಳ್ಳಿ ಪ್ರಧಾನ ಕಚೇರಿಯಿಂದ ಅಧಿಕೃತ ಅಧಿಸೂಚನೆ
ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ಪ್ರಧಾನ ಕಚೇರಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇದುವರೆಗೆ ರೈಲು ಸಂಖ್ಯೆ 16511/16512 ಕೆಎಸ್ಆರ್ ಬೆಂಗಳೂರು ನಗರ–ಕಣ್ಣೂರು ನಡುವೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್ಪ್ರೆಸ್ ರೈಲು ಇನ್ನುಮುಂದೆ ಕೋಯಿಕ್ಕೋಡ್ವರೆಗೆ ವಿಸ್ತರಿಸಿ ಸಂಚರಿಸಲಿದೆ. ರೈಲ್ವೆ ಮಂಡಳಿಯ ಅನುಮೋದನೆಯೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅಧಿಸೂಚನೆಯ ಪ್ರಕಾರ, ಮಾರ್ಚ್ 15ರಿಂದ ಕೆಎಸ್ಆರ್ ಬೆಂಗಳೂರು ನಗರದಿಂದ ಹೊರಡುವ 16511 ಎಕ್ಸ್ಪ್ರೆಸ್ ರೈಲು ತನ್ನ ಪ್ರಯಾಣವನ್ನು ಕಣ್ಣೂರಿನಲ್ಲೇ ಅಂತ್ಯಗೊಳಿಸುವ ಬದಲು ಕೋಯಿಕ್ಕೋಡ್ವರೆಗೆ ಮುಂದುವರಿಸಲಿದೆ. ಅದೇ ರೀತಿ, ಮಾರ್ಚ್ 16ರಿಂದ ಕೋಯಿಕ್ಕೋಡ್ನಿಂದ ಹೊರಡುವ 16512 ಎಕ್ಸ್ಪ್ರೆಸ್ ರೈಲು ಬೆಂಗಳೂರು ನಗರಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.
ರೈಲು ಸೇವೆ ವಿಸ್ತರಣೆಗೊಂಡಿರುವ ಹೊಸ ಮಾರ್ಗದಲ್ಲಿ ಕಣ್ಣೂರಿನ ನಂತರ ತಲಶ್ಶೇರಿ, ವಡಕರ ಮತ್ತು ಕೊಯಿಲಾಂಡಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಮಧ್ಯಾಹ್ನ 12.40ಕ್ಕೆ ಕೋಯಿಕ್ಕೋಡ್ ರೈಲು ನಿಲ್ದಾಣಕ್ಕೆ ತಲುಪಲಿದೆ.
ಮರಳಿ ಪ್ರಯಾಣದ ವೇಳೆ ರೈಲು ಸಂಜೆ 3.30ಕ್ಕೆ ಕೋಯಿಕ್ಕೋಡ್ನಿಂದ ಹೊರಟು ಮಂಗಳೂರು ಸೆಂಟ್ರಲ್ ಮಾರ್ಗವಾಗಿ ಬೆಂಗಳೂರಿನತ್ತ ತನ್ನ ಪ್ರಯಾಣವನ್ನು ಮುಂದುವರಿಸಲಿದೆ.
ಬೆಂಗಳೂರು ಟು ಕಣ್ಣೂರು ಪ್ರಯಾಣ ಇನ್ನಷ್ಟು ಸುಲಭ
ರೈಲ್ವೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕೆಎಸ್ಆರ್ ಬೆಂಗಳೂರು ನಗರದಿಂದ ಪಯ್ಯನ್ನೂರುವರೆಗೆ ಈಗಿರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ವಿಸ್ತರಣೆ ಭಾಗಕ್ಕೆ ಕೂಡ ಈಗಿರುವ ರೇಕ್ ಹಾಗೂ ರೈಲು ಸಂಯೋಜನೆಯನ್ನೇ ಬಳಸಲಾಗುತ್ತದೆ.
ಈ ವಿಸ್ತರಣೆಯಿಂದ ಬೆಂಗಳೂರು, ಮಂಗಳೂರು, ಕಣ್ಣೂರು ಹಾಗೂ ಕೋಯಿಕ್ಕೋಡ್ ನಡುವಿನ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ವಿಶೇಷವಾಗಿ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.