who is my mother: ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ | Danish Boy Came To India With Adopted Parents To Search His Real Mom

who is my mother: ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ | Danish Boy Came To India With Adopted Parents To Search His Real Mom



who is my mother: ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ | Danish Boy Came To India With Adopted Parents To Search His Real Mom

ಎಷ್ಟೇ ಎತ್ತರಕ್ಕೆ ಬೆಳೆಯಲಿ ಎಷ್ಟೇ ದೂರ ಸಾಗಲಿ ತನ್ನ ಮೂಲದ ಬಗ್ಗೆ ತಿಳಿಯದೇ ಇದ್ದರೆ ಆ ಮಗುವಿಗೆ/ ನೂರೆಂಟು ಪ್ರಶ್ನೆಗಳು ಕಾಡುತ್ತದೆ. ನಾನು ಯಾರು? ಹೇಗೆ ಜನಿಸಿದೆ ಎಂಬ ಪ್ರಶ್ನೆ ಆ ಮಗುವನ್ನು ಕಾಡದೇ ಇರದು, ಹಾಗೆಯೇ ಇಲ್ಲೊಂದು ಮಗು ತನ್ನ ಮೂಲ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದಿದೆ.

ದತ್ತು ಪಡೆದ ಪೋಷಕರೊಂದಿಗೆ ಹೆತ್ತ ತಾಯಿಯ ಅರಸಿ ಬಂದ ಬಾಲಕ

ಎಷ್ಟೇ ಎತ್ತರಕ್ಕೆ ಬೆಳೆಯಲಿ ಎಷ್ಟೇ ದೂರ ಸಾಗಲಿ ತನ್ನ ಮೂಲದ ಬಗ್ಗೆ ತಿಳಿಯದೇ ಇದ್ದರೆ ಆ ಮಗುವಿಗೆವ್ಯಕ್ತಿಗೆ ನೂರೆಂಟು ಪ್ರಶ್ನೆಗಳು, ಗೊಂದಲಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತದೆ. ನಾನು ಯಾರು? ಹೇಗೆ ಜನಿಸಿದೆ? ನನ್ನ ಅಮ್ಮ ಹೇಗಿದ್ದಿರಬಹುದು ಎಂಬ ಪ್ರಶ್ನೆ ಆ ಮಗುವನ್ನು ಕಾಡದೇ ಇರುವುದಿಲ್ಲ, ಹಾಗೆಯೇ ಇಲ್ಲೊಂದು ಮಗು ತನ್ನ ದತ್ತು ಪಡೆದ ಪೋಷಕರ ಜೊತೆ ತನ್ನ ಮೂಲವನ್ನು ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದಿದೆ.

ಹೌದು ತೆಲಂಗಾಣದ ಆದಿಲಾಬಾದ್ ಇಂತಹದೊಂದು ಅರಸುವಿಕೆಗೆ ಸಾಕ್ಷಿಯಾಯ್ತು. ಆದಿಲಾಬಾದ್ ಜಿಲ್ಲೆಯ ಒಂದು ಹಳ್ಳಿಯ ಮೂಲೆಗೆ ಡೆನ್ಮಾರ್ಕ್‌ನ ದಂಪತಿಗಳಾದ ಲೂಯಿಸ್ ಮತ್ತು ರಾಸ್ಮಸ್, ತಮ್ಮ ದತ್ತುಪುತ್ರನಾದ ಅರ್ಜುನ್ (ಪ್ರಸ್ತುತ ಡ್ಯಾನಿಶ್)ನ ತಾಯಿಯನ್ನು ಅರಸಿ ಸಾವಿರಾರು ಕಿಲೋ ಮೀಟರ್ ಪ್ರಯಾಣಿಸಿ ಅಲ್ಲಿಗೆ ಬಂದಿದ್ದರು. ಈ ಡ್ಯಾನಿಶ್ ದಂಪತಿ ತಮ್ಮ ಮಗನ ನಿಜವಾದ ಜೈವಿಕ ಅಮ್ಮನನ್ನು ಕಂಡುಹಿಡಿಯಲು ಆದಿಲಾಬಾದ್‌ನ ಚಿಲ್ಲಟಿಗುಡ, ಟೆಕಿಡಿಗುಡ, ಚೋರ್ಗಾಂವ್, ಸುಂಗಾಪುರ್ ಮತ್ತು ಹತ್ತಿರದ ಇತರ ಪ್ರದೇಶಗಳಂತಹ ಬುಡಕಟ್ಟು ಗ್ರಾಮಗಳಿಗೆ ಭೇಟಿ ನೀಡಿದರು.

ಆದರೆ ಜನರಿಗೆ ವಿದೇಶಿಯರನ್ನು ನೋಡಿದರೆ ಅದೇನೋ ವಿಶೇಷ ಖುಷಿ, ಹೀಗಾಗಿ ಅವರು ಹೋದಲೆಲ್ಲಾ ಜನರು ಅವರನ್ನು ವಾದ್ಯದೊಂದಿಗೆ ಶಾಳು ಹೊದಿಸಿ ಸನ್ಮಾನಿಸುತ್ತಾ ಸ್ವಾಗತಿಸಿದರು. ಈ ವಿದೇಶಿ ದಂಪತಿ ದತ್ತು ಪಡೆದ ಮಗು ಅರ್ಜುನ್‌ನನ್ನು 2016 ರಲ್ಲಿ ಆದಿಲಾಬಾದ್‌ನ ರಿಮ್ಸ್ ಆಸ್ಪತ್ರೆಯಲ್ಲಿ ಪೋಷಕರು ತೊರೆದು ಹೋಗಿದ್ದರು. ಅವನ ಬೆರಳುಗಳು ಸರಿ ಇರಲಿಲ್ಲ, ಹೀಗಾಗಿ ಅವನ ಹೆತ್ತವರು ಅಸಹಾಯಕ ಮತ್ತು ಭಯಭೀತರಾಗಿ ಅವನನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದರು, ನಂತರ ಅಧಿಕಾರಿಗಳು ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದ್ದರು. ಇದಾದ ನಂತರ ಭಾರತದ ಕಾನೂನುಬದ್ಧ ದತ್ತು ವ್ಯವಸ್ಥೆಯ ಮೂಲಕ, ಡ್ಯಾನಿಶ್ ಮೂಲದ ಲೂಯಿಸ್ ಮತ್ತು ರಾಸ್ಮಸ್ ಅರ್ಜುನ್‌ನನ್ನು ಆತ ಎರಡು ವರ್ಷದ ಮಗುವಾಗಿದ್ದಾಗ ದತ್ತು ಪಡೆದರು. ಅಂದಿನಿಂದಲೂ ಆ ಮಗು ಡೆನ್ಮಾರ್ಕ್‌ನಲ್ಲಿ ತನ್ನ ದತ್ತು ಪೋಷಕರ ಪ್ರೀತಿ, ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ.

ಆದರೆ ಮಗು ಅರ್ಜುನ್ ದೊಡ್ಡವನಾಗುತ್ತಿದ್ದಂತೆ ಈ ದತ್ತು ಪೋಷಕರಲ್ಲಿ ನನ್ನ ತಾಯಿ ಯಾರು? ಎಂದು ಕೇಳಲು ಶುರು ಮಾಡಿದ್ದಾನೆ. ಪೋಷಕರಿಗೂ ಹಾಗೂ ಆ ಬಾಲಕನ ದೇಹದ ಚರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಕೂಡ ಬಾಲಕನಿಗೆ ಬಹುಶಃ ತಾನು ಇವರ ನಿಜವಾದ ಮಗು ಅಲ್ಲ ಎಂದು ಅನುಮಾನ ಮೂಡುವುದಕ್ಕೆ ಕಾರಣವಿದ್ದಿರಬಹುದು. ಹೀಗಾಗಿ ಮಗು ಪದೇ ಪದೇ ತನ್ನ ಪೋಷಕರ ಬಗ್ಗೆ ಕೇಳುವುದಕ್ಕೆ ಶುರು ಮಾಡಿದಾಗ, ಈ ದತ್ತು ಪೋಷಕರು ಆತನಿಗೆ ಆತನ ದತ್ತು ಪಡೆದ ವಿಚಾರ ತಿಳಿಸಿದ್ದಾರೆ. ಈ ವೇಳೆ ಬಾಲಕ ತಾನು ಜೀವನದಲ್ಲಿ ಒಮ್ಮೆಯಾದರೂ ತನ್ನ ಹೆತ್ತ ತಾಯಿಯನ್ನು ಭೇಟಿಯಾಗಬೇಕೆಂಬ ಬಯಕೆಯ ತನ್ನ ದತ್ತು ಪೋಷಕರ ಬಳಿ ಆಗಾಗ ಹೇಳುತ್ತಿದ್ದ. ಹೀಗಾಗಿ ಮಗುವಿನ ಈ ಭಾವನೆಯನ್ನು ಕೇಳಿದ ಲೂಯಿಸ್ ಮತ್ತು ರಾಸ್ಮಸ್ ದಂಪತಿಗೆ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾವಿಸಿ ಅವನ ಮೂಲವನ್ನು ಪತ್ತೆ ಮಾಡುವುದಕ್ಕೆ ಭಾರತಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಹದಿಹರೆಯದ ಇಬ್ಬರು ಮಕ್ಕಳ ಕರೆತಂದು ಜೊತೆಗೆ ರೈಲಿಗೆ ತಲೆಕೊಟ್ಟ ಸಾಫ್ಟ್‌ವೇರ್ ತಾಯಿ

ವಿದೇಶಿಗರು ದತ್ತು ಪಡೆದ ಅನೇಕ ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಒಂದುಗೂಡಿಸಿದ ಸ್ವಯಂಸೇವಾ ಸಂಸ್ಥೆಯಾದ ಅಡಾಪ್ಟ್ ರೈಟ್ ಕೌನ್ಸಿಲ್‌ನ ಬೆಂಬಲದೊಂದಿಗೆ ಈ ದಂಪತಿಗಳು ತಮ್ಮ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಕೌನ್ಸಿಲ್‌ನ ನಿರ್ದೇಶಕಿ ವಕೀಲೆ ಅಂಜಲಿ ಪವಾರ್ ಮಾತನಾಡಿ, ಅರ್ಜುನ್‌ನನ್ನು ದತ್ತು ಪಡೆದ ಪೋಷಕರಿಂದ ದೂರ ಮಾಡುವುದು ಇದರ ಉದ್ದೇಶವಲ್ಲ. ಅವನು ಅವರೊಂದಿಗೆ ವಾಸಿಸುವುದನ್ನು ಮುಂದುವರಿಸುತ್ತಾನೆ. ಅವನು ಎಲ್ಲಿಂದ ಬಂದಿದ್ದಾನೆಂದು ಅವನಿಗೆ ತಿಳಿಸುವುದು ಮಾತ್ರ ಇದರ ಉದ್ದೇಶ. ಇದರಿಂದ ಆ ಬಾಲಕ ತನ್ನ ಹೃದಯದಲ್ಲಿ ಭಾವನಾತ್ಮಕ ನೋವಿನೊಂದಿಗೆ ಬೆಳೆಯುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ಇದನ್ನೂ ಓದಿ: ಕುಟುಂಬದ ವಿರೋಧದ ನಡುವೆ ತನಗೊಂದು ಸುಂದರ ಬದುಕು ನೀಡಿದ ದತ್ತು ತಂದೆಗೆ ಭಾವುಕವಾಗಿ ಕೃತಜ್ಞತೆ ಸಲ್ಲಿಸಿದ ಮಗಳು

ದಂಪತಿಗಳು ಒಂದು ವಾರದ ಕಾಲ ಆದಿಲಾಬಾದ್‌ನಲ್ಲಿ ಉಳಿದುಕೊಂಡು ಗ್ರಾಮಸ್ಥರನ್ನು ಭೇಟಿಯಾಗಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಎಲ್ಲಾ ವಿವರಗಳನ್ನು ಖಾಸಗಿಯಾಗಿ ಮತ್ತು ಗೌರವಯುತವಾಗಿ ಇಡುವುದಾಗಿ ಅವರು ಭರವಸೆ ನೀಡಿದ್ದಾರೆ. ಅರ್ಜುನ್‌ನ ತಾಯಿ ಸಿಕ್ಕರೆ, ಅವರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತೇವೆ ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂದು ಲೂಯಿಸ್ ಮತ್ತು ರಾಸ್ಮಸ್ ಹೇಳಿದ್ದಾರೆ. ಎರಡು ಲೋಕಗಳ ನಡುವೆ ನಂಬಿಕೆ ಮತ್ತು ಪ್ರೀತಿಯ ಸೇತುವೆಯನ್ನು ನಿರ್ಮಿಸಲು ಅವರು ಬಯಸಿದ್ದಾರೆ. ಸದ್ಯಕ್ಕೆ, ಹುಡುಕಾಟ ಮುಂದುವರೆದಿದೆ.



Source link

Leave a Reply

Your email address will not be published. Required fields are marked *