
ದೆಹಲಿ ಕರ್ನಾಟಕ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಜೂಮ್ ಮೀಟಿಂಗ್‌ಗೆ ಅವಕಾಶ ನೀಡುವ ವಿಚಾರವಾಗಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ವಿರೋಧದಿಂದಾಗಿ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಿಂದ ಹೊರನಡೆದರು.
ನವದೆಹಲಿ : ಜೂಮ್ ಮೀಟಿಂಗ್ ಗಾಗಿ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದ ಘಟನೆ ದೆಹಲಿ ಕರ್ನಾಟಕ ಸಂಘದಲ್ಲಿ ನಡೆಯಿತು. ಸದ್ಯರ ಪಟ್ಟು ಹಿಡಿದ ಹಿನ್ನೆಲೆ ಎಜಿಎಂ ಮುಂದೂಡಲಾಯಿತು.
ಭಾನುವಾರ ಸಂಘದ ಚುನಾವಣೆ ಹಿನ್ನಲೆ ಇಂದು ವಾರ್ಷಿಕ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸದಸ್ಯರಿಗೆ ಅನುಕೂಲದ ಸಲುವಾಗಿ ಸಭೆಯ ಫೇಸ್ಬುಕ್ ಮೂಲಕ ಲೈವ್ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದರೆ ಇದಕ್ಕೆ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಆಕ್ಷೇಪಿಸಿ ನಮ್ಮ ಸಂಘದ ಬೈಲಾ ನಲ್ಲಿ ಇಲ್ಲ ಎಂದರು.
ಅಧ್ಯಕ್ಷರ ಆಕ್ಷೇಪದ ನಡುವೆ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಹೊರಗಿರುವ ಸದಸ್ಯರಿಗಾಗಿ ಜೂಮ್ ಮೀಟಿಂಗ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಇದಕ್ಕೂ ಸಂಘದ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಇದರಿಂದ ಕುಪಿತಗೊಂಡ ಕಾರ್ಯಕಾರಿ ಸದಸ್ಯರೇ ಸಭೆಯಿಂದ ಹೊರನಡೆದರು.
ಫೇಸ್ಬುಕ್ ಅಥವಾ ಯೂಟ್ಯೂಬ್ ಲೈವ್
ಜೂಮ್ ಮೀಟಿಂಗ್ ಅಥವಾ ಫೇಸ್ಬುಕ್ ಲೈವ್ ಮಾಡುವುದು ಸಂಘದ ನಿಯಮಗಳಲ್ಲಿ ಉಲ್ಲೇಖವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳ ಲೈವ್ ಆದ್ರೆ ಬೇರೆ ವಿಚಾರ. ಇತರೆ ಕಾರ್ಯಕಾರಿ ಸದಸ್ಯರು ಹೊರನಡೆದರೇನು ನಾನು ಏಕಾಂಗಿಯಾಗಿ ಸಭೆಯನ್ನು ಮುಂದುವರಿಸುತ್ತೇನೆ. ಸಭೆಗೆ ಹಾಜರಾದ ಸದಸ್ಯರು ಕೇಳುವು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿದ್ದೇನೆ, ಫೇಸ್ಬುಕ್ ಅಥವಾ ಯೂಟ್ಯೂಬ್ ಲೈವ್ ಮಾಡಿದರೆ ಇಲ್ಲಿ ನಡೆಯುವ ಗಲಾಟೆಗಳಿಂದ ಸಂಘದ ಘನತೆಗೆ ದಕ್ಕೆಯಾಗಲಿದೆ ಎಂದು ಅಧ್ಯಕ್ಷರು ವಾದಿಸಿದರು.
ಇದಕ್ಕೆ ವಿರೋಧಿಸಿದ ಕೆಲವು ಸದಸ್ಯರು ಲೈವ್ ಸಾಧ್ಯವಾಗದಿದ್ದರೂ ಕನಿಷ್ಠ ಸಂಘದ ಸದಸ್ಯರಿಗಾಗಿ ಜೂಮ್ ಮೀಟಿಂಗ್ ಮಾಡಬೇಕು, ಸಂಘದ ಸಭೆಯ ಮಾಹಿತಿ ಅವರಿಗೂ ತಲುಪಬೇಕು ಹಾಗೂ ಅವರ ಪ್ರಶ್ನೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಸಂಘದ ಅಧ್ಯಕ್ಷರು ಒಪ್ಪದಿದ್ದಾಗ ಕೆಲವು ಸದಸ್ಯರು ಭ್ರಷ್ಟಚಾರದ ಆರೋಪಗಳು ಬಯಲಿಗೆ ಬರುವ ಭಯವೇ ಎಂದು ಕುಟಿಕಿದರು.
ಸಭೆಯನ್ನು ಮುಂದೂಡುವ ಪ್ರಸ್ತಾಪ
ಈ ಆರೋಪವನ್ನು ನಿರಾಕರಿಸಿದ ಅಧ್ಯಕ್ಷರು ಯಾವುದೇ ಪ್ರಶ್ನೆಗೆ ಉತ್ತರಿಸಲು ಸಿದ್ಧ ಎಂದು ವೇದಿಕೆಯ ಮೇಲೆ ಏಕಾಂಗಿ ಕೂತಿದ್ದರು. ಪರಿಸ್ಥಿತಿ ತಿಳಿಯಾಗದ ಹಿನ್ನಲೆ ಚುನಾವಣಾ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಭೆಯನ್ನು ಮುಂದೂಡುವ ಪ್ರಸ್ತಾಪ ಇರಿಸಿದರು, ಬಳಿಕ ಎಲ್ಲರ ಒಪ್ಪಿಗೆ ಮೇರೆಗೆ ಮತ್ತೊಮ್ಮೆ ಸಭೆ ನಡೆಸುವ ಇಂಗಿತ ವ್ಯಕ್ತಪಡಿಸಿದರು. ಇದಾದ ಬಳಿಕ ಭಾನುವಾರ ಚುನಾವಣೆ ನಡೆಸಲು ಸದಸ್ಯರು ಅನುಮತಿ ಸೂಚಿಸಿದರು.
ದೆಹಲಿ ಕರ್ನಾಟಕ ಸಂಘ ಕನ್ನಡಿಗರ ಹಿತಕ್ಕಾಗಿ ಸ್ಥಾಪಿಸಲಾಗಿದ್ದು, ಚುನಾವಣೆ ಮುನ್ನ ನಡೆದ ಈ ಬೆಳವಣಿಗಳು ಸಾಮಾನ್ಯ ಸದಸ್ಯರಲ್ಲಿ ಆಕ್ರೋಶ, ಬೇಸರಕ್ಕೆ ಕಾರಣವಾದವು. ಇನ್ನು ಭಾನುವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಲಿದ್ದು ಅಧ್ಯಕ್ಷ ಸ್ಥಾನಕ್ಕೆ ಸಿಎಂ ನಾಗರಾಜ್ ಮತ್ತು ರೇಣುಕುಮಾರ್ ತಂಡಗಳು ಮಾಖಾಮುಖಿಯಾಗಲಿವೆ.