
ಕೃಷಿ ಬೆಳೆ ರಕ್ಷಣೆಗೆ ಸಂಬಂಧಿಸಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ರೈತರಿಗೆ ಕೋವಿ ಪರವಾನಗಿ ನೀಡಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ವಿಧಾನಸಭೆ (ಮಾ.11): ಕೃಷಿ ಬೆಳೆ ರಕ್ಷಣೆಗೆ ಸಂಬಂಧಿಸಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ರೈತರಿಗೆ ಕೋವಿ ಪರವಾನಗಿ ನೀಡಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಅವರ ಪ್ರಶ್ನೆಗೆ ಉತ್ತರಿಸಿದ ಅವರು,
ಮಾನಸಿಕ ಅಸ್ವಸ್ಥತೆ, ದೈಹಿಕ ನ್ಯೂನ್ಯತೆ ಇದ್ದರೆ ಪರವಾನಗಿ ಕೊಡುವುದು ಅಥವಾ ನವೀಕರಣ ಮಾಡುವುದು ಸಾಧ್ಯವಿಲ್ಲ. ಜತೆಗೆ ಕ್ರಿಮಿನಲ್ ಪ್ರಕರಣಗಳಿದ್ದವರಿಗೂ ನೀಡುವುದಿಲ್ಲ. ಒಂದು ಮನೆಗೆ ಒಂದಕ್ಕಿಂತ ಹೆಚ್ಚು ಪರವಾನಗಿಯೂ ನೀಡಲ್ಲ. ಕೃಷಿ ಜಮೀನು ಒಂದು ಕಡೆ ಇದ್ದು, ವಾಸ ಮತ್ತೊಂದು ಕಡೆ ಇದ್ದರೆ ಬಂದೂಕು ಪರವಾನಗಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇವೆಲ್ಲಾ ಸಮಸ್ಯೆ ಇಲ್ಲದಿದ್ದರೂ ಅರ್ಹರಿಗೆ ಕೋವಿ ಪರವಾನಗಿ ನೀಡದಿರುವುದನ್ನು ನಾನು ಸಹಿಸುವುದಿಲ್ಲ. ಪೊಲೀಸ್ ಇಲಾಖೆಯಿಂದ ಯಾವ ಅರ್ಜಿಯೂ ಬಾಕಿ ಇಲ್ಲ ಎಂದು ಹೇಳಿದ್ದಾರೆ. ಪರವಾನಗಿ ನವೀಕರಣ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದು. ಅರ್ಹ ಅರ್ಜಿದಾರರಿಗೆ ಕೋವಿ ಪರವಾನಗಿ ಕೊಡಿಸಲು ಸಂಬಂಧಪಟ್ಟವರಿಗೆ ನಾನೇ ಮಾತನಾಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಒಂಟಿಮನೆಗಳು ಹೆಚ್ಚು
ಇದಕ್ಕೂ ಮೊದಲು ಮಾತನಾಡಿದ ಅಶೋಕ್ ಕುಮಾರ್ ರೈ, ನಮ್ಮ ಭಾಗದಲ್ಲಿ ಒಂಟಿ ಮನೆಗಳು ಹೆಚ್ಚು. ಕಳ್ಳತನದ ಜತೆಗೆ ಕಾಡು ಹಂದಿ, ಆನೆ, ಕೋತಿಗಳ ಕಾಟ ಹೆಚ್ಚಾಗಿದೆ. ಹಲವು ವರ್ಷಗಳಿಂದ ಬಂದೂಕು ಹೊಂದಿರುವವರಿಗೂ ಪರವಾನಗಿ ನವೀಕರಣ ಮಾಡುತ್ತಿಲ್ಲ. ಪರವಾನಗಿ ಕೇಳಿದರೆ ನಿಮ್ಮ ಬೆಳೆಯನ್ನು ವನ್ಯಜೀವಿ ಹಾನಿ ಮಾಡುತ್ತಿವೆ ಎಂಬುದರ ಬಗ್ಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿರುವ ದಾಖಲೆ ತನ್ನಿ ಎನ್ನುತ್ತಾರೆ. ಕ್ರಿಮಿನಲ್ ಕೇಸ್ ಇದ್ದರೆ ಕೊಡಬೇಡಿ. ನೈಜ ರೈತರಿಗೆ ಯಾಕೆ ನೀಡುವುದಿಲ್ಲ? ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿಯ ಸಿಮೆಂಟ್ ಮಂಜುನಾಥ್, ಕೋವಿ ಪರವಾನಗಿ ನವೀಕರಣಕ್ಕೆ ಕೋವಿಯನ್ನು ಜಿಲ್ಲಾಧಿಕಾರಿ ಬಳಿಗೆ ಕೊಂಡೊಯ್ಯಬೇಕು. ಇದರ ಬದಲಿಗೆ ತಾಲೂಕು ಮಟ್ಟದಲ್ಲೇ ಪರವಾನಗಿ ನವೀಕರಣಕ್ಕೆ ಅವಕಾಶ ಕೊಡಬೇಕು ಎಂದು ಕೋರಿದರು. ಇದಕ್ಕೆ ಡಾ.ಜಿ. ಪರಮೇಶ್ವರ್, ಅದು ಪಾಲಿಸಿ ವಿಷಯ. ಈ ಬಗ್ಗೆ ನಿಯಮಗಳಲ್ಲಿ ಅವಕಾಶವಿದ್ದರೆ ಪರಿಶೀಲಿಸಲಾಗುವುದು ಎಂದರು.