
ಪತಿ ಸೊಹೇಲ್ ಖತೂರಿಯಾ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯಕ್ಕೆ ನಟಿ ಹನ್ಸಿಕಾ ಮೋಟ್ವಾನಿ ಅಂತ್ಯ ಹಾಡಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ವಿಚ್ಛೇದನಕ್ಕೆ ಕಾರಣವಾಗಿದ್ದು, ಹನ್ಸಿಕಾ ಯಾವುದೇ ಜೀವನಾಂಶ ಪಡೆದಿಲ್ಲ ಎಂದು ವರದಿಯಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಬಿಂದಾಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು ಪತಿ ಸೊಹೇಲ್ ಖತೂರಿಯಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. 2022ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಇದೀಗ, ಡಿವೋರ್ಸ್ ಆದ ನಂತರ ಹನ್ಸಿಕಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ‘ಚರ್ದಿ ಕಲಾ’ ಎಂಬ ಪಂಜಾಬಿ ಪದವನ್ನು ಹಂಚಿಕೊಂಡಿದ್ದಾರೆ. ಕಷ್ಟದ ಸಮಯದಲ್ಲೂ ಪ್ರೀತಿಯಿಂದ ಮುನ್ನುಗ್ಗಿ ಅನ್ನೋದು ಈ ಮಾತಿನ ಅರ್ಥ. ಕಳೆದ ವರ್ಷದಿಂದಲೇ ಹನ್ಸಿಕಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಈ ಬಗ್ಗೆ ಹನ್ಸಿಕಾ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಭಿನ್ನಾಭಿಪ್ರಾಯಗಳು ಮೂಡಿದ್ದವು
ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿದೆ. ಅಚ್ಚರಿಯ ವಿಷಯ ಅಂದ್ರೆ, ಹನ್ಸಿಕಾ ವಿಚ್ಛೇದನಕ್ಕಾಗಿ ಯಾವುದೇ ಜೀವನಾಂಶವನ್ನು ಪಡೆದಿಲ್ಲ. ವರದಿಗಳ ಪ್ರಕಾರ, ಮದುವೆಯಾದ ನಂತರ ಇಬ್ಬರೂ ಸ್ವಲ್ಪ ಕಾಲ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಸಣ್ಣಪುಟ್ಟ ವಿಷಯಗಳೂ ಕೂಡ ದೊಡ್ಡ ಜಗಳಕ್ಕೆ ಕಾರಣವಾಗುತ್ತಿದ್ದವು. ಇದರಿಂದಾಗಿ ದಂಪತಿಗೆ ಒಂದೇ ಮನೆಯಲ್ಲಿ ವಾಸಿಸುವುದು ಕಷ್ಟಕರವಾಗಿತ್ತು ಎಂದು ಹೇಳಲಾಗುತ್ತಿದೆ.
2022ರಲ್ಲಿ ಹನ್ಸಿಕಾ ಮತ್ತು ಸೊಹೇಲ್ ವಿವಾಹವಾಗಿದ್ದರು. ಹನ್ಸಿಕಾ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಬಿ. ಉಣ್ಣಿಕೃಷ್ಣನ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ ‘ವಿಲ್ಲನ್’ ಚಿತ್ರದ ಮೂಲಕ ಅವರು ಮಲಯಾಳಂಗೂ ಎಂಟ್ರಿ ಕೊಟ್ಟಿದ್ದರು. 2024ರಲ್ಲಿ ತೆರೆಕಂಡ ತಮಿಳಿನ ‘ಗಾರ್ಡಿಯನ್’ ಚಿತ್ರ ಹನ್ಸಿಕಾ ನಟನೆಯ ಇತ್ತೀಚಿನ ಸಿನಿಮಾ.