Shivamogga News: ಪ್ರೇಮದ ಗಾಯಕ್ಕೆ ಮದ್ದಾಗದ ಮದ್ಯ; ಮರೆಯಲಾಗದ ಪ್ರೀತಿ ನೆನಪಲ್ಲೇ ಮಸಣ ಸೇರಿದ ಮಗ ಶ್ರೀಜಿತ್! | Shivamogga Hosanagara Youth Srijith Naik Died For Love Failure Case Sat

Shivamogga News: ಪ್ರೇಮದ ಗಾಯಕ್ಕೆ ಮದ್ದಾಗದ ಮದ್ಯ; ಮರೆಯಲಾಗದ ಪ್ರೀತಿ ನೆನಪಲ್ಲೇ ಮಸಣ ಸೇರಿದ ಮಗ ಶ್ರೀಜಿತ್! | Shivamogga Hosanagara Youth Srijith Naik Died For Love Failure Case Sat



Shivamogga News: ಪ್ರೇಮದ ಗಾಯಕ್ಕೆ ಮದ್ದಾಗದ ಮದ್ಯ; ಮರೆಯಲಾಗದ ಪ್ರೀತಿ ನೆನಪಲ್ಲೇ ಮಸಣ ಸೇರಿದ ಮಗ ಶ್ರೀಜಿತ್! | Shivamogga Hosanagara Youth Srijith Naik Died For Love Failure Case Sat

ಶಿವಮೊಗ್ಗದ ಹೊಸನಗರದಲ್ಲಿ ಯುವಕನೊಬ್ಬ ಪ್ರೇಮ ವೈಫಲ್ಯದಿಂದ ಉಂಟಾದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಜೈಲಿನಿಂದ ಬಂದ ನಂತರ ಸಮಾಜದ ಅವಮಾನ ಮತ್ತು ಪ್ರೇಮದ ನೆನಪುಗಳಿಂದ ಬಳಲುತ್ತಿದ್ದ ಆತ, ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ.

ಶಿವಮೊಗ್ಗ (ಮಾ.12): ಬದುಕು ಹಸನಾಗಿರಬೇಕಿದ್ದ ವಯಸ್ಸಿನಲ್ಲೇ ಯುವಕನೊಬ್ಬ ಪ್ರೇಮ ವೈಫಲ್ಯದ ನೋವಿಗೆ ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗಂದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಕೇವಲ 26 ವರ್ಷದ ಶ್ರೀಜಿತ್ ನಾಯ್ಕ ಎಂಬ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನದ ಯಾತನೆಗೆ ಅಂತ್ಯ ಹಾಡಿದ್ದಾನೆ.

ಮನದ ನೋವಿಗೆ ಮದ್ದಾಗದ ಮದ್ಯ:

ಮೃತ ಶ್ರೀಜಿತ್ ಅವರ ಜೀವನ 3 ವರ್ಷಗಳ ಹಿಂದೆಯೇ ಹಳಿ ತಪ್ಪಿತ್ತು. ಒಂದು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಅವರಿಗೆ ಸಮಾಜ ಮತ್ತು ಮನೆಯಲ್ಲಿ ಮೊದಲಿನಂತೆ ಇರಲು ಸಾಧ್ಯವಾಗಲಿಲ್ಲ. ಆ ಪ್ರೇಮದ ನೆನಪುಗಳು ಮತ್ತು ಜೈಲಿಗೆ ಹೋಗಿ ಬಂದೆ ಎಂಬ ಅವಮಾನದ ಭಾವನೆ ಅವರನ್ನು ಒಳಗೊಳಗೇ ಕೊರೆಯುತ್ತಿತ್ತು. ಈ ಮಾನಸಿಕ ಯಾತನೆಯಿಂದ ಹೊರಬರಲು ಶ್ರೀಜಿತ್ ಮದ್ಯದ ಮೊರೆ ಹೋಗಿದ್ದರು. ಹಗಲು ರಾತ್ರಿ ಕುಡಿತದಲ್ಲೇ ಮಗ್ನರಾಗುತ್ತಿದ್ದ ಅವರು, ಮಾನಸಿಕವಾಗಿ ತೀವ್ರ ಕುಸಿದು ಹೋಗಿದ್ದರು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೊನೆಯ ಆ ರಾತ್ರಿ ನಡೆದಿದ್ದೇನು?

ಸಾವಿನ ಹಿಂದಿನ ರಾತ್ರಿ ಶ್ರೀಜಿತ್ ಮನೆಗೆ ಬಂದಾಗ ತಾಯಿ ಮತ್ತು ಸಹೋದರರು ಪ್ರೀತಿಯಿಂದ ಊಟ ಮಾಡುವಂತೆ ಕರೆದಿದ್ದರು. ಆದರೆ, ‘ನಾನು ಆಗಲೇ ಊಟ ಮಾಡಿದ್ದೇನೆ, ನನಗೆ ಹಸಿವಿಲ್ಲ’ ಎಂದು ಹೇಳಿ ಮಲಗಲು ಹೋಗಿದ್ದರು. ಆ ಮಾತುಗಳು ಅವರ ಬದುಕಿನ ಕೊನೆಯ ಮಾತುಗಳಾಗುತ್ತವೆ ಎಂದು ಮನೆಯವರು ಕನಸಿನಲ್ಲೂ ಯೋಚಿಸಿರಲಿಲ್ಲ. ಮನೆಯವರೆಲ್ಲರೂ ನಿದ್ರೆಗೆ ಜಾರಿದ ಹೊತ್ತಿನಲ್ಲಿ, ಇಡೀ ಜಗತ್ತೇ ಮಲಗಿದ್ದಾಗ ಶ್ರೀಜಿತ್ ತನ್ನ ಮನಸ್ಸಿನ ಭಾರವನ್ನು ಇಳಿಸಿಕೊಳ್ಳಲು ಸಾವಿನ ಹಾದಿ ಹಿಡಿದಿದ್ದರು.

ಬೆಳ್ಳಂಬೆಳಗ್ಗೆ ಕಂಡ ಭೀಕರ ದೃಶ್ಯ:

ಗುರುವಾರ ಮುಂಜಾನೆ ಸುಮಾರು 5.30ರ ವೇಳೆಗೆ ತಾಯಿ ಎದ್ದು ನೋಡಿದಾಗ ಶ್ರೀಜಿತ್ ಬೆಡ್ ಮೇಲೆ ಇರಲಿಲ್ಲ. ಆತಂಕಗೊಂಡ ಕುಟುಂಬದವರು ಸುತ್ತಮುತ್ತ ಹುಡುಕಾಡಿದಾಗ ಮನೆಯ ಎದುರಿನ ಜಾಗದಲ್ಲಿದ್ದ ಮರವೊಂದಕ್ಕೆ ಲುಂಗಿಯಿಂದ ನೇಣು ಬಿಗಿದುಕೊಂಡು ಶ್ರೀಜಿತ್ ಹೆಣವಾಗಿ ನೇತಾಡುತ್ತಿದ್ದರು. ಇದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬದುಕು ಕಟ್ಟಿಕೊಳ್ಳಬೇಕಿದ್ದ ಮಗ ಹೀಗೆ ಅರ್ಧ ದಾರಿಯಲ್ಲೇ ಕೈಕೊಟ್ಟಿದ್ದನ್ನು ಕಂಡು ತಾಯಿ ಮೂರ್ಛೆ ಹೋಗಿದ್ದಾರೆ.

ಪೊಲೀಸ್ ತನಿಖೆ:

ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರೇಮ ವೈಫಲ್ಯ ಮತ್ತು ಅದರಿಂದ ಉಂಟಾದ ಮಾನಸಿಕ ಖಿನ್ನತೆಯೇ ಈ ಆತ್ಮ*ಹತ್ಯೆಗೆ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *