
ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು, ಮಂಪರು ಔಷಧ ನೀಡಿ ದೋಚುತ್ತಿದ್ದ ಜೋಡಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಕವಿಪ್ರಿಯಾ ಮತ್ತು ಆಕೆಯ ಬಾಯ್ಫ್ರೆಂಡ್ ಹರ್ಷವರ್ಧನ್, ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು: ಪ್ರೀತಿಯ ನೆಪದಲ್ಲಿ ಯುವಕರನ್ನು ಬಲೆಗೆ ಬೀಳಿಸಿ ಕಳ್ಳತನ ಮಾಡುತ್ತಿದ್ದ ಜೋಡಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ಗಳ ಮೂಲಕ ಪರಿಚಯವಾಗಿ, ಮಂಪರು ಔಷಧ ನೀಡಿ, ಯುವಕರಿಂದ ಲಕ್ಷಾಂತರ ಮೌಲ್ಯದ ಆಭರಣ ಮತ್ತು ನಗದು ದೋಚುತ್ತಿದ್ದ ಖತರ್ನಾಕ್ ಜೋಡಿ ಕವಿಪ್ರಿಯಾ ಹಾಗೂ ಆಕೆಯ ಬಾಯ್ಫ್ರೆಂಡ್ ಹರ್ಷವರ್ಧನ ಬಂಧಿತರು.
ಡೇಟಿಂಗ್ ಆ್ಯಪ್ನಲ್ಲಿ ಕಳ್ಳತನಕ್ಕೆ ರೂಪಿಸಿದ ಪ್ಲಾನ್
ಆ್ಯಪ್ಗಳ ಮೂಲಕ ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ ಕವಿಪ್ರಿಯಾ–ಹರ್ಷವರ್ಧನ್ ಜೋಡಿ, ಸಾಲ ತೀರಿಸಲು ಕಳ್ಳತನ ಮಾಡುವ ಪ್ಲಾನ್ ರೂಪಿಸಿದ್ದರು. ಈ ಬಗ್ಗೆ ಅವಕಾಶ ಹುಡುಕುತ್ತಿದ್ದ ಕವಿಪ್ರಿಯಾ ತನ್ನ ಫೋಟೊವನ್ನು ಡೇಟಿಂಗ್ ಆ್ಯಪ್ Happn ನಲ್ಲಿ ಹಾಕಿ ಯುವಕರನ್ನು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಳು. ಫೋಟೊ ನೋಡಿದ ಓರ್ವ ಯುವಕ ಆಕೆಯನ್ನು ಸಂಪರ್ಕಿಸಿದ್ದು, ಇಬ್ಬರ ನಡುವಿನ ಸಂಭಾಷಣೆ ನಿಧಾನವಾಗಿ ಸ್ನೇಹಕ್ಕೆ ತಿರುಗಿತು.
ನವೆಂಬರ್ 1ರ ಭೇಟಿ – ರೆಸ್ಟೋರೆಂಟ್ನಿಂದ ಲಾಡ್ಜ್ಗೆ
ಇಬ್ಬರೂ ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾದರು. ಮಾತುಕತೆ ನಡುವೆ ಮದ್ಯಪಾನ ಮಾಡಿದ ನಂತರ ಕವಿಪ್ರಿಯಾ ಆ ಯುವಕನನ್ನು ಸಮೀಪದ ಲಾಡ್ಜ್ವೊಂದಕ್ಕೆ ಕರೆದೊಯ್ದಳು. ಮಧ್ಯರಾತ್ರಿ ಊಟವನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ ತರಿಸಿ, ಬಳಿಕ ಯುವಕನಿಗೆ ನೀರು ಕುಡಿಯಲು ಕೊಟ್ಟಳು. ಆ ನೀರಿನಲ್ಲಿ ಆಕೆ ಮಂಪರು ಔಷಧ ಬೆರೆಸಿದ್ದರಿಂದ ಕವಿಪ್ರಿಯಾ ಕೊಟ್ಟ ನೀರನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಕವಿಪ್ರಿಯಾ, ಯುವಕನ ಬಳಿಯಿದ್ದ ಅಮೂಲ್ಯ ವಸ್ತುಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ದೋಚಲಾದ ವಸ್ತುಗಳು:
₹6.89 ಲಕ್ಷ ಮೌಲ್ಯದ ಚಿನ್ನಾಭರಣಗಳು
₹12,000 ಮೌಲ್ಯದ ಹೆಡ್ಸೆಟ್
₹10,000 ನಗದು
ಬೆಳಗ್ಗೆ ಎಚ್ಚರವಾದ ಯುವಕ ಲಾಡ್ಜ್ನಲ್ಲಿ ಕವಿಪ್ರಿಯಾ ಇಲ್ಲದಿರುವುದನ್ನು ಗಮನಿಸಿ ತಕ್ಷಣ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ತನಿಖೆ ನಡೆಸಿದ ನಂತರ, ಯುವಕನಿಗೆ ನೀರಿನಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿರುವುದು ಸ್ಪಷ್ಟವಾಗಿದೆ. ಸಿಸಿಟಿವಿ ಫೂಟೇಜ್, ಮೊಬೈಲ್ ಡೇಟಾ ಹಾಗೂ ಆ್ಯಪ್ ವಿವರಗಳನ್ನು ಆಧಾರವಾಗಿ ಪಡೆದು, ಪೊಲೀಸರು ಕವಿಪ್ರಿಯಾ ಮತ್ತು ಹರ್ಷವರ್ಧನರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ, ಇಬ್ಬರೂ ಹಲವು ಆ್ಯಪ್ಗಳಲ್ಲಿ ಅನೇಕ ಯುವಕರನ್ನು ಬಲೆಗೆ ಬೀಳಿಸಲು ಯತ್ನಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಾಲ ತೀರಿಸುವ ಹೆಸರಿನಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಲು ಹೊರಟ ಇವರ ಪ್ಲಾನ್ ಮೊದಲ ಪ್ರಯತ್ನದಲ್ಲಿಯೇ ವಿಫಲವಾಗಿದೆ.
ಇಬ್ಬರು ಆರೋಪಿ ಜೋಡಿಯನ್ನು ವಶಕ್ಕೆ ಪಡೆದು, ಕಳ್ಳತನಕ್ಕೆ ಬಳಸಿದ ವಿಧಾನ, ಮಂಪರು ಔಷಧದ ಮೂಲ ಮತ್ತು ಇತರ ದಾಖಲೆಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.