ಬಾಂಗ್ಲಾದೇಶ ಮನವಿ ಒಪ್ಪಿಕೊಳ್ತಾ ಐಸಿಸಿ? ಬಾಂಗ್ಲಾ ಟಿ20 ವಿಶ್ವಕಪ್ ಮ್ಯಾಚ್ ಲಂಕಾಗೆ ಶಿಫ್ಟ್? | Mustafizur Controversy Bangladesh Seeks Shift Of World Cup Matches From India

ಬಾಂಗ್ಲಾದೇಶ ಮನವಿ ಒಪ್ಪಿಕೊಳ್ತಾ ಐಸಿಸಿ? ಬಾಂಗ್ಲಾ ಟಿ20 ವಿಶ್ವಕಪ್ ಮ್ಯಾಚ್ ಲಂಕಾಗೆ ಶಿಫ್ಟ್? | Mustafizur Controversy Bangladesh Seeks Shift Of World Cup Matches From India



ಬಾಂಗ್ಲಾದೇಶ ಮನವಿ ಒಪ್ಪಿಕೊಳ್ತಾ ಐಸಿಸಿ? ಬಾಂಗ್ಲಾ ಟಿ20 ವಿಶ್ವಕಪ್ ಮ್ಯಾಚ್ ಲಂಕಾಗೆ ಶಿಫ್ಟ್? | Mustafizur Controversy Bangladesh Seeks Shift Of World Cup Matches From India

ಐಪಿಎಲ್‌ನಿಂದ ಮುಸ್ತಾಫಿಜುರ್ ರೆಹಮಾನ್‌ರನ್ನು ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆಟಗಾರರ ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಅಧಿಕೃತವಾಗಿ ಮನವಿ ಮಾಡಿದೆ.  

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ಕೈಬಿಟ್ಟ ನಂತರ ಕ್ರಿಕೆಟ್ ಜಗತ್ತಿನಲ್ಲಿ ಹೊಸ ವಿವಾದವೊಂದು ಶುರುವಾಗಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಮನವಿ ಮಾಡಿದೆ. ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬಾಂಗ್ಲಾದೇಶ ಈ ಕಠಿಣ ನಿಲುವು ತೆಗೆದುಕೊಂಡಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ವಿರೋಧಿಸಿ ಭಾರತದ ಕೆಲವು ತೀವ್ರಗಾಮಿ ಸಂಘಟನೆಗಳು ಬಿಸಿಸಿಐ ಮೇಲೆ ಒತ್ತಡ ಹೇರಿದ್ದವು. ಇದರ ಪರಿಣಾಮವಾಗಿ ಮುಸ್ತಾಫಿಜುರ್ ಅವರನ್ನು ಕೈಬಿಡಲು ಬಿಸಿಸಿಐ ಸೂಚಿಸಿತ್ತು. 9.20 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿದ ಆಟಗಾರನನ್ನು ಕೈಬಿಟ್ಟಿದ್ದು ಬಾಂಗ್ಲಾದೇಶಕ್ಕೆ ಮಾಡಿದ ಅವಮಾನಕ್ಕೆ ಸಮ ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಸ್ರುಲ್ ಹೇಳಿದ್ದಾರೆ. ‘ಒಪ್ಪಂದವಿದ್ದರೂ ಬಾಂಗ್ಲಾ ಆಟಗಾರನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ವಿಶ್ವಕಪ್‌ಗಾಗಿ ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದು ಸುರಕ್ಷಿತವಲ್ಲ’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸಭೆ ಬಳಿಕ ಮಾತನಾಡಿರುವ ಬಿಸಿಬಿ ಅಧಿಕಾರಿಯೊಬ್ಬರು, ‘ನಮ್ಮ ಒಬ್ಬ ಆಟಗಾರನಿಗೆ ಐಪಿಎಲ್‌ ವೇಳೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿರುವಾಗ, ವಿಶ್ವಕಪ್‌ನಲ್ಲಿ ಆಡಲು ನಮ್ಮ ಇಡೀ ತಂಡವನ್ನು ಕಳುಹಿಸಲು ಹೇಗೆ ಸಾಧ್ಯ’ ಎಂದಿದ್ದಾರೆ. ಆದರೆ, ಮುಸ್ತಾಫಿಜುರ್‌ರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್‌ಗೆ ಸೂಚಿಸುವಾಗ ಬಿಸಿಸಿಐ ಎಲ್ಲೂ ರಕ್ಷಣೆ ನೀಡುವ ಬಗ್ಗೆ ಉಲ್ಲೇಖಿಸಿಲ್ಲ.

ಗ್ರೂಪ್‌ ಹಂತದ ನಾಲ್ಕು ಪಂದ್ಯಗಳು ಭಾರತದಲ್ಲಿ ನಿಗದಿ

ವಿಶ್ವಕಪ್‌ನಲ್ಲಿ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶದ ನಾಲ್ಕು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬುದು ಅವರ ಬೇಡಿಕೆಯಾಗಿದೆ. ಇದಕ್ಕೆ ಐಸಿಸಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ವರದಿಯಾಗಿದೆ. ಪ್ರತಿಭಟನೆಯ ಸಂಕೇತವಾಗಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವ ಬಗ್ಗೆ ಅಲ್ಲಿನ ಸರ್ಕಾರ ಚಿಂತನೆ ನಡೆಸುತ್ತಿದೆ. ಬಾಂಗ್ಲಾದೇಶದ ಬೇಡಿಕೆಯನ್ನು ಐಸಿಸಿ ಒಪ್ಪಿಕೊಂಡರೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಮ್ಮ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿವೆ.

ಟೂರ್ನಿ ಆರಂಭಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಸ್ಥಳ ಬದಲಾವಣೆ ಮಾಡುವುದು ಕಷ್ಟ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಹಿಂದೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಭಾರತದ ಮನವಿಯ ಮೇರೆಗೆ ಐಸಿಸಿ ಸ್ಥಳಾಂತರಿಸಿತ್ತು. ಅದೇ ರೀತಿ ಬಾಂಗ್ಲಾದೇಶದ ವಿಷಯದಲ್ಲೂ ಐಸಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಫೆಬ್ರವರಿ 7 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶದ ಮೊದಲ ವಿಶ್ವಕಪ್ ಪಂದ್ಯ ನಿಗದಿಯಾಗಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದ ವೇಳಾಪಟ್ಟಿ:

ಬಾಂಗ್ಲಾದೇಶ-ವೆಸ್ಟ್‌ ಇಂಡೀಸ್: ಫೆಬ್ರವರಿ 07- ಈಡನ್ ಗಾರ್ಡನ್ಸ್‌, ಕೋಲ್ಕತಾ

ಬಾಂಗ್ಲಾದೇಶ-ಇಟಲಿ: ಫೆಬ್ರವರಿ 09 – ಈಡನ್ ಗಾರ್ಡನ್ಸ್, ಕೋಲ್ಕತಾ

ಬಾಂಗ್ಲಾದೇಶ-ಇಂಗ್ಲೆಂಡ್: ಫೆಬ್ರವರಿ 14 – ಈಡನ್ ಗಾರ್ಡನ್ಸ್‌, ಕೋಲ್ಕತಾ

ಬಾಂಗ್ಲಾದೇಶ-ನೇಪಾಳ: ಫೆಬ್ರವರಿ 17 -ವಾಂಖೆಡೆ ಸ್ಟೇಡಿಯಂ, ಮುಂಬೈ.



Source link

Leave a Reply

Your email address will not be published. Required fields are marked *