
ಚಿಕ್ಕಮಗಳೂರಿನ ಮಾಣಿಕ್ಯಧಾರದಲ್ಲಿ ನಾಪತ್ತೆಯಾದ ಕೇರಳದ ಬಾಲಕಿ ಶ್ರೀನಂದಾ ಪ್ರಕರಣವು ಹೊಸ ತಿರುವು ಪಡೆದಿದೆ. ಮಗಳು ಆಕಸ್ಮಿಕವಾಗಿ ಬಿದ್ದಿಲ್ಲ, ಅವಳನ್ನು ಅಪಹರಿಸಲಾಗಿದೆ ಎಂದು ತಾಯಿ ಆರೋಪಿಸಿದ್ದು, ಈ ಹೇಳಿಕೆಯು ತನಿಖೆಯ ದಿಕ್ಕನ್ನೇ ಬದಲಿಸಿದೆ. ಪೊಲೀಸರು ಈಗ ಅಪಹರಣದ ಕೋನದಲ್ಲಿ ತನಿಖೆ ಆರಂಭಿಸಿದ್ದಾರೆ.
ಚಿಕ್ಕಮಗಳೂರು (ಏ.09): ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಬಾಬಾಬುಡನ್‌ಗಿರಿಯ ಮಾಣಿಕ್ಯಧಾರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಪ್ರಕರಣ ಈಗ ಮಹತ್ತರ ತಿರುವು ಪಡೆದುಕೊಂಡಿದೆ. ಇದುವರೆಗೆ ಬಾಲಕಿ ಆಕಸ್ಮಿಕವಾಗಿ ಕಣಿವೆಗೆ ಬಿದ್ದಿರಬಹುದು ಎಂದು ಶೋಧ ನಡೆಸುತ್ತಿದ್ದ ಪೊಲೀಸರಿಗೆ, ಮೃತನ ತಾಯಿಯ ಹೇಳಿಕೆ ಈಗ ತನಿಖೆಯ ದಿಕ್ಕನ್ನೇ ಬದಲಿಸುವಂತೆ ಮಾಡಿದೆ.
ಅಪಹರಣದ ಶಂಕೆ ವ್ಯಕ್ತಪಡಿಸಿದ ತಾಯಿ:
ಬಾಲಕಿ ಶ್ರೀನಂದಾ ನಾಪತ್ತೆಯಾಗಿ ಮೂರು ದಿನಗಳ ಕಳೆದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆಕೆಯ ತಾಯಿ ರೋಹಿಣಿ ಆತಂಕಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ‘ನನ್ನ ಮಗಳು ಆಕಸ್ಮಿಕವಾಗಿ ಎಲ್ಲಿಯೂ ಬಿದ್ದಿರಲು ಸಾಧ್ಯವೇ ಇಲ್ಲ. ಅವಳನ್ನು ಯಾರೋ ಸಂಚು ರೂಪಿಸಿ ಅಪಹರಿಸಿದ್ದಾರೆ. ಅವಳು ಒಬ್ಬಳೇ ಇದ್ದ ಸಮಯವನ್ನು ನೋಡಿ, ಯಾವುದೋ ಮಾದಕ ದ್ರವ್ಯ ನೀಡಿ ಅಥವಾ ಬಲವಂತವಾಗಿ ಕರೆದೊಯ್ದಿದ್ದಾರೆ’ ಎಂದು ರೋಹಿಣಿ ಕಣ್ಣೀರು ಹಾಕುತ್ತಾ ಆರೋಪಿಸಿದ್ದಾರೆ. ಈ ಹೇಳಿಕೆಯು ಸ್ಥಳೀಯ ಪೊಲೀಸರು ಹಾಗೂ ಶೋಧನಾ ತಂಡಗಳಲ್ಲಿ ಸಂಚಲನ ಮೂಡಿಸಿದೆ. ಪ್ರವಾಸಿಗರ ದಟ್ಟಣೆ ಇರುವ ಮಾಣಿಕ್ಯಧಾರದಂತಹ ಪ್ರದೇಶದಲ್ಲಿ ಮಗು ನಾಪತ್ತೆಯಾಗಿರುವುದು ಕೇವಲ ಅಪಘಾತವಲ್ಲ, ಇದೊಂದು ವ್ಯವಸ್ಥಿತ ಕಿಡ್ನಾಪ್ ಇರಬಹುದು ಎಂಬ ಅನುಮಾನ ಈಗ ದಟ್ಟವಾಗಿದೆ.
ಹತ್ತು ವರ್ಷದ ಬಳಿಕ ಬಂದಿದ್ದ ಕುಟುಂಬಕ್ಕೆ ಎದುರಾದ ಬರಸಿಡಿಲು:
ಕೇರಳ ಮೂಲದ ಈ ಕುಟುಂಬ ಕಳೆದ ಹತ್ತು ವರ್ಷಗಳಿಂದ ಪ್ರವಾಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ. ಬಹಳ ವರ್ಷಗಳ ನಂತರ ಹರಕೆ ತೀರಿಸಲು ಹಾಗೂ ಪ್ರವಾಸಕ್ಕಾಗಿ ಕಾಫಿನಾಡಿಗೆ ಬಂದಿದ್ದರು. ಆದರೆ, ಕುಟುಂಬದ ಸಂತೋಷದ ಕ್ಷಣಗಳು ಈಗ ಮಗುವಿನ ನಾಪತ್ತೆಯಿಂದಾಗಿ ಸ್ಮಶಾನ ಮೌನಕ್ಕೆ ಶರಣಾಗಿವೆ. “ಹತ್ತು ವರ್ಷದ ನಂತರ ಬಂದ ನಮಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿದ್ದಾರೆ.
ಶೋಧ ಕಾರ್ಯದ ಸ್ಥಿತಿಗತಿ:
ಘಟನೆ ನಡೆದ ದಿನದಿಂದಲೂ ಜಿಲ್ಲಾ ಪೊಲೀಸ್ ತಂಡ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಗೈಡ್‌ಗಳು ಮಾಣಿಕ್ಯಧಾರದ ಸುತ್ತಮುತ್ತಲಿನ ಆಳವಾದ ಕಣಿವೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ದಟ್ಟವಾದ ಮಂಜು ಮತ್ತು ಕಡಿದಾದ ಹಾದಿಗಳು ಶೋಧ ಕಾರ್ಯಕ್ಕೆ ಅಡ್ಡಿಯುಂಟುಮಾಡುತ್ತಿವೆ. ಬಾಲಕಿ ಆಕಸ್ಮಿಕವಾಗಿ ಬಿದ್ದಿದ್ದರೆ ಇಷ್ಟೊತ್ತಿಗಾಗಲೇ ಏನಾದರೂ ಸುಳಿವು ಸಿಗಬೇಕಿತ್ತು. ಆದರೆ ಯಾವುದೇ ಕುರುಹು ಸಿಗದ ಕಾರಣ ಪೋಷಕರ ಅಪಹರಣದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.
ತನಿಖೆಯ ದಿಕ್ಕು ಬದಲಿಸಿದ ಪೊಲೀಸರು:
ತಾಯಿಯ ಗಂಭೀರ ಆರೋಪದ ಬೆನ್ನಲ್ಲೇ ಚಿಕ್ಕಮಗಳೂರು ಪೊಲೀಸರು ಈಗ ಕೇವಲ ಕಣಿವೆಯಲ್ಲಿ ಹುಡುಕಾಟ ನಡೆಸುವುದಷ್ಟೇ ಅಲ್ಲದೆ, ಪ್ರವಾಸಿ ತಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದು ಮಾಣಿಕ್ಯಧಾರಕ್ಕೆ ಬಂದಿದ್ದ ವಾಹನಗಳ ವಿವರ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ‘ಮಗಳನ್ನು ಹುಡುಕಿಕೊಡಿ, ಅವಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ’ ಎಂದು ತಾಯಿ ರೋಹಿಣಿ ಪೊಲೀಸರ ಕಾಲಿಗೆ ಬಿದ್ದು ಪ್ರಾರ್ಥಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಬಾಲಕಿ ಶ್ರೀನಂದಾ ಎಲ್ಲಿ ಹೋದಳು? ನಿಜವಾಗಿಯೂ ಅಪಹರಣವಾಗಿದೆಯೇ? ಅಥವಾ ಕಾಡಿನ ಹಾದಿಯಲ್ಲಿ ದಾರಿ ತಪ್ಪಿದ್ದಾಳೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಪ್ರಸ್ತುತ ಮಾಣಿಕ್ಯಧಾರ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪ್ರತಿಯೊಬ್ಬ ಪ್ರವಾಸಿಯ ಮೇಲೆಯೂ ನಿಗಾ ಇಡಲಾಗುತ್ತಿದೆ. ಬಾಲಕಿಯ ಸುಳಿವು ನೀಡಿದವರಿಗೆ ಬಹುಮಾನ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.