
ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ, ಯೋಗ ಮಾಡುವ ಸ್ಥಳಕ್ಕೆ ನಾಯಿಯನ್ನು ಕರೆತಂದು ಗಲೀಜು ಮಾಡಿಸಿದ ವಿಚಾರವಾಗಿ ಹಿರಿಯ ನಾಗರಿಕರು ಮತ್ತು ಇನ್ನೊಬ್ಬ ನಿವಾಸಿಯ ನಡುವೆ ಜಗಳವಾಗಿದೆ. ಈ ಗಲಾಟೆಯು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಬೆಂಗಳೂರು (ಮಾ.7): ಯೋಗ ಮಾಡುವ ಸ್ಥಳಕ್ಕೆ ನಾಯಿಯನ್ನು ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸಿದ ವಿಚಾರಕ್ಕೆ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ಹಿರಿಯ ನಾಗರಿಕರ ನಡುವೆ ಗಲಾಟೆಯಾಗಿ ಕೈಕೈ ಮಿಲಾಯಿಸಿಕೊಂಡಿದ್ದು, ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಶಶಿಬಾಲಾ (59) ಎಂಬುವರು ನೀಡಿದ ದೂರಿನ ಮೇರೆಗೆ ತರುಣ್ ಅರೋರಾ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಶಶಿಬಾಲಾ ಅವರು ಪತಿ ಓಂಪ್ರಕಾಶ್ ಬಾಜಪೈ ಅವರ ಜತೆ ವರ್ತೂರಿನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಇವರ ಇಬ್ಬರು ಪುತ್ರಿಯರು ವಿದೇಶದಲ್ಲಿದ್ದಾರೆ. ಓಂಪ್ರಕಾಶ್ ದಂಪತಿ ನಿತ್ಯ ಅಪಾರ್ಟ್‌ಮೆಂಟ್ ಆವರಣದಲ್ಲಿರುವ ಪ್ರತ್ಯೇಕವಾದ ಸ್ಥಳದಲ್ಲಿ ಯೋಗ ಮಾಡುತ್ತಾರೆ. ಆದರೆ, ಆರೋಪಿ ತರುಣ್ ಅರೋರಾ, ಈ ಸ್ಥಳಕ್ಕೆ ತನ್ನ ಶ್ವಾನವನ್ನು ಕರೆದುಕೊಂಡು ಬಂದು ಅಶುದ್ಧ ಮಾಡಿಸುತ್ತಿದ್ದ.
ನಾಯಿಗಳ ಓಡಾಟಕ್ಕೆ ಪ್ರತ್ಯೇಕ ಸ್ಥಳವಿರುವಾಗ ಇಲ್ಲಿಗೆ ಏಕೆ ಕರೆತರುತ್ತಿರಾ ಎಂದು ಓಂಪ್ರಕಾಶ್ ಈ ಹಿಂದೆ ಪ್ರಶ್ನಿಸಿದ್ದರು. ಮಾ.3ರಂದು ಮತ್ತೆ ಅದೇ ರೀತಿ ನಾಯಿ ಕರೆತಂದು ಗಲೀಜು ಮಾಡಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ಓಂಪ್ರಕಾಶ್ ಅವರ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾನೆ. ಅದನ್ನು ತಡೆಯಲು ಹೋದಾಗ ಶಶಿಬಾಲಾ ಅವರನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆರೋಪಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಹೀಗಾಗಿ ತಮ್ಮ ಮೇಲೆ ಹಲ್ಲೆ ನಡೆಸಿದ ತರುಣ್ ಅರೋರಾ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಶಿಬಾಲಾ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.