
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಪ್ರಸಿದ್ಧ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಈ ದುರ್ಘಟನೆಯಿಂದ ಅಪರೂಪದ ಸಸ್ಯ ಸಂಪತ್ತು ನಾಶವಾಗಿದ್ದು, ಕೃಷ್ಣಮೃಗ ಸೇರಿದಂತೆ ಅನೇಕ ವನ್ಯಜೀವಿಗಳು ಪ್ರಾಣಭಯದಲ್ಲಿವೆ.
ಹಾವೇರಿ (ಮಾ.21): ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಅರಣ್ಯ ಪ್ರದೇಶವಾದ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ರಾಣೇಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರ ಹಾಗೂ ಐರಣಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೇಸಿಗೆಯ ಬಿಸಿಲಿಗೆ ಒಣಗಿದ್ದ ಗಿಡಗಂಟೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಅರಣ್ಯಧಾಮವನ್ನು ಆವರಿಸಿದೆ. ಈ ಗುಡ್ಡವು ಅಪರೂಪದ ವನಸ್ಪತಿ ಗಿಡಮೂಲಿಕೆಗಳಿಂದ ಸಂಪದ್ಭರಿತವಾಗಿದ್ದು, ಬೆಂಕಿಯ ಅಬ್ಬರಕ್ಕೆ ಅಮೂಲ್ಯ ಸಸ್ಯಸಂಪತ್ತು ನಾಶವಾಗಿದೆ.
ವನ್ಯಜೀವಿಗಳಿಗೆ ಆಪತ್ತು
ಈ ಭಾಗವು ಕೃಷ್ಣಮೃಗಗಳು ಸೇರಿದಂತೆ ಹತ್ತಾರು ಪ್ರಾಣಿ-ಪಕ್ಷಿಗಳ ವಾಸಸ್ಥಾನವಾಗಿರುವ ಅಭಯಾರಣ್ಯವಾಗಿದೆ. ಧಗಧಗನೆ ಉರಿಯುತ್ತಿರುವ ಬೆಂಕಿಯಿಂದಾಗಿ ವನ್ಯಜೀವಿಗಳು ಪ್ರಾಣಭಯದಲ್ಲಿ ದಿಕ್ಕಾಪಾಲಾಗಿ ಓಡುತ್ತಿವೆ. ವಿಶೇಷವೆಂದರೆ, ಸರ್ಕಾರವು ಇತ್ತೀಚೆಗಷ್ಟೇ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಆದರೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಪರಿಸರ ಪ್ರೇಮಿಗಳಲ್ಲಿ ಆಕ್ರೋಶ ಮೂಡಿದೆ.
ಪ್ರಸ್ತುತ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.