
ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ತಂದುಕೊಟ್ಟ ಸಂಭ್ರಮದಲ್ಲಿ ಹೆಲ್ಮೆಟ್ ಬಿಸಾಡಿದ ಸಂಜು ಸ್ಯಾಮ್ಸನ್ ಐಸಿಸಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆಯಿದೆ. ಇದು ‘ಲೆವೆಲ್ 1’ ಅಪರಾಧವಾದ್ದರಿಂದ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ನಿಷೇಧ ಹೇರುವ ಸಾಧ್ಯತೆ ಕಡಿಮೆ.
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್, ಐಸಿಸಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪಂದ್ಯ ಗೆದ್ದ ಬಳಿಕ ಸಂಜು ತೋರಿದ ಸಂಭ್ರಮಾಚರಣೆಯನ್ನು ಐಸಿಸಿ ಶಿಸ್ತು ಸಮಿತಿ ಪರಿಶೀಲಿಸುತ್ತಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಅವರಿಗೆ ನಿಷೇಧ ಹೇರುವ ಸಾಧ್ಯತೆಯಿದೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
ಸಂಜು ಸ್ಯಾಮ್ಸನ್ ಮಾಡಿದ್ದೇನು?
ವೆಸ್ಟ್ ಇಂಡೀಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿನ್ನಿಂಗ್ ಶಾಟ್ ಬಾರಿಸಿದ ಕೂಡಲೇ ಸಂಜು ತಮ್ಮ ಹೆಲ್ಮೆಟ್ ತೆಗೆದು ನೆಲಕ್ಕೆ ಬಿಸಾಡಿದ್ದರು. ಆ ಬಳಿಕ ಮಂಡಿಯೂರಿ ಕುಳಿತು ದೇವರಿಗೆ ಧನ್ಯವಾದ ಅರ್ಪಿಸಿದ್ದರು. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2ರ ಪ್ರಕಾರ, ಕ್ರಿಕೆಟ್ ಉಪಕರಣಗಳಿಗೆ (ಬ್ಯಾಟ್, ಹೆಲ್ಮೆಟ್, ಸ್ಟಂಪ್) ಅಗೌರವ ತೋರುವುದು ಅಥವಾ ಎದುರಾಳಿ ಆಟಗಾರರಿಗೆ ಅಪಾಯವಾಗುವಂತೆ ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದೆ.
ಕೋಪ ಅಥವಾ ಅತಿಯಾದ ಸಂಭ್ರಮದಿಂದ ಹೆಲ್ಮೆಟ್ ಬಿಸಾಡುವುದನ್ನು ಐಸಿಸಿ ‘ಲೆವೆಲ್ 1’ ಅಪರಾಧ ಎಂದು ಪರಿಗಣಿಸುತ್ತದೆ. ಈ ಹಿಂದೆ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ಆಟಗಾರ ಜಾರ್ಜ್ ಮುನ್ಸಿ ಕೂಡ ಇದೇ ರೀತಿ ಹೆಲ್ಮೆಟ್ ಎಸೆದಿದ್ದಕ್ಕೆ ಡಿಮೆರಿಟ್ ಪಾಯಿಂಟ್ ಪಡೆದಿದ್ದರು. ಸಾಮಾನ್ಯವಾಗಿ ಲೆವೆಲ್ 1 ಅಪರಾಧಗಳಿಗೆ ನಿಷೇಧ ಹೇರುವುದಿಲ್ಲ. ಪಂದ್ಯದ ಶುಲ್ಕದ ಶೇ. 50ರಷ್ಟು ದಂಡ ಹಾಗೂ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದು.
ಆಟಗಾರನೊಬ್ಬ ‘ಲೆವೆಲ್ 2’ ಅಪರಾಧ ಎಸಗಿದರೆ ಅಥವಾ 24 ತಿಂಗಳೊಳಗೆ ಲೆವೆಲ್ 1 ಅಪರಾಧವನ್ನು ಪುನರಾವರ್ತಿಸಿ 4 ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಮಾತ್ರ ನಿಷೇಧ ಶಿಕ್ಷೆ ಎದುರಿಸಬೇಕಾಗುತ್ತದೆ. ಸಂಜು ಈ ಹಿಂದೆ ಇಂತಹ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅವರಿಗೆ ನಿಷೇಧ ಹೇರುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಗಳು ಹೇಳುತ್ತಿವೆ. ಅಂಪೈರ್ ತೀರ್ಪಿಗೆ ವಿರೋಧ ವ್ಯಕ್ತಪಡಿಸುವುದು ಅಥವಾ ಎದುರಾಳಿ ಆಟಗಾರರಿಗೆ ಅಪಾಯ ಉಂಟುಮಾಡುವುದು ಸಂಜು ಉದ್ದೇಶವಾಗಿರಲಿಲ್ಲ. ಈ ಅಂಶವನ್ನು ಮ್ಯಾಚ್ ರೆಫರಿ ಪರಿಗಣಿಸುವ ಸಾಧ್ಯತೆ ಇದೆ.
Scroll to load tweet…
Scroll to load tweet…
ಏಕಾಂಗಿಯಾಗಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್:
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸುವಂತೆ ಮಾಡಿದ್ದ ಸಂಜು ಸ್ಯಾಮ್ಸನ್, ಸೂಪರ್-8 ಹಂತದ ವೆಸ್ಟ್ ಇಂಡೀಸ್ ಎದುರಿನ ನಿರ್ಣಾಯಕ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಭಾರತ ಸೆಮಿಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೆಲ್ಲಲು ಬರೋಬ್ಬರಿ 196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಆದರೆ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸುವ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆಯೇ ಅನಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೀಗ ಮಾರ್ಚ್ 05ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.