
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳು ತಮ್ಮ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ದಾವಣಗೆರೆ/ಬಾಗಲಕೋಟೆ: ಏ.9ರಂದು ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಣ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಸೋಮವಾರ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯಿಂದ ಪಕ್ಷದ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ ಹಾಗೂ ಕಾಂಗ್ರೆಸ್‌ನಿಂದ ಶಾಮನೂರು ಕುಟುಂಬದ ಮೂರನೇ ತಲೆಮಾರಿನ ಸಮರ್ಥ ಎಂ.ಶಾಮನೂರು ನಾಮಪತ್ರ ಸಲ್ಲಿಸಿದರೆ, ಬಾಗಲಕೋಟೆಯಲ್ಲಿ ಬಿಜೆಪಿಯಿಂದ ವೀರಭದ್ರಯ್ಯ ಚರಂತಿಮಠ ಹಾಗೂ ಕಾಂಗ್ರೆಸ್‌ನಿಂದ ಎಚ್.ವೈ.ಮೇಟಿ ಅವರ ಕಿರಿಯ ಪುತ್ರ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ ಮಾಡಿದರು. ಶಕ್ತಿ ಪ್ರದರ್ಶನ:
ನಾಮಪತ್ರ ಸಲ್ಲಿಕೆ ವೇಳೆ ಉಭಯ ಪಕ್ಷಗಳ ಅಭ್ಯರ್ಥಿಗಳು ಬೃಹತ್ ಮೆರವಣಿಗೆ ನಡೆಸಿ, ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವರು, ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಾಥ್ ನೀಡಿದರು. ಈ ಮಧ್ಯೆ, ನಾಮಪತ್ರ ಸಲ್ಲಿಕೆ ವೇಳೆ ಎರಡೂ ಕಡೆ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿದರೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಭಿನ್ನಮತ ಬಹಿರಂಗವಾಯಿತು. ದಾವಣಗೆರೆಯಲ್ಲಿ ‘ಕೈ’ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಜಮೀರ್ ಅಹಮ್ಮದ್ ಗೈರು ಹಾಜರಾದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್ ಮತ್ತೊಮ್ಮೆ ನಾಮಪತ್ರ ಸಲ್ಲಿಸುವ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆದರು.
ಈ ಮಧ್ಯೆ, ಬಾಗಲಕೋಟೆಯಲ್ಲಿ ಈವರೆಗೆ ಒಟ್ಟು 13 ಅಭ್ಯರ್ಥಿಗಳಿಂದ 19 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಗುರುವಾರ ಅಂತಿಮ ದಿನವಾಗಿದೆ.
ದೇವರಿಗೆ ಪೂಜೆ, ಮೆರವಣಿಗೆ:
ಟಿಕೆಟ್ ವಂಚಿತ ಮುಸ್ಲಿಮರ ಬಂಡಾಯದ ಕಾವಿನ ಮಧ್ಯೆಯೇ ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ರೋಡ್ ಶೋದಲ್ಲಿ ಭಾಗಿಯಾಗಿ, ಶಕ್ತಿ ಪ್ರದರ್ಶಿಸಿದರು. ರೋಡ್ ಶೋಗೂ ಮುನ್ನ ಸಮರ್ಥ ಅವರು, ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಹಜರತ್ ಷಾವಲಿ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ, ರೋಡ್ ಶೋ ಮೂಲಕ ಮಹಾನಗರ ಪಾಲಿಕೆ ಆವರಣಕ್ಕೆ ತೆರಳಿ, ನಾಮಪತ್ರ ಸಲ್ಲಿಸಿದರು. ಆದರೆ, ನಾಮಪತ್ರ ಸಲ್ಲಿಕೆ ವೇಳೆ ವಸತಿ ಸಚಿವ ಜಮೀರ್ ಅಹಮ್ಮದ್ ಗೈರಾಗಿದ್ದುದು, ಭಿನ್ನಮತದ ಚಿತ್ರಣ ಹೊರಹಾಕಿತು.
ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರು ಬೆಳಗ್ಗೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ತೆರೆದ ಕ್ಯಾಂಟರ್‌ಗಳಲ್ಲಿ ಬೃಹತ್ ಶೋಭಾಯಾತ್ರೆ ಮೂಲಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ, ತಮ್ಮ ನಾಮಪತ್ರ ಸಲ್ಲಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿ.ಎಂ.ಸಿದ್ದೇಶ್ವರ, ರೇಣುಕಾಚಾರ್ಯ ಮತ್ತಿತರ ನಾಯಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಯಲ್ಲಿ ಭಾರತ್ ಮಾತಾ ಕೀ ಜೈ, ನರೇಂದ್ರ ಮೋದಿಯವರಿಗೆ ಜಯವಾಗಲಿ, ಹರ ಹರ ಹರ ಮಹಾದೇವ್, ಜೈ ಜೈ ಶಿವಾಜಿ, ದಕ್ಷಿಣದಲ್ಲಿ ಈ ಬಾರಿ ಬಿಜೆಪಿ ಎಂಬ ಘೋಷಣೆಗಳು ಮೊಳಗಿದವು. ಯಾತ್ರೆ ವೇಳೆ, ಬಿಜೆಪಿ ನಾಯಕರ ಮೇಲೆ ಪುಷ್ಪವೃಷ್ಟಿಗೈಯ್ಯಲಾಯಿತು.
ಬಾಗಲಕೋಟೆಯಲ್ಲಿ ತಲಾ ಮೂರು ಸೆಟ್ ಸಲ್ಲಿಕೆ:
ಈ ಮಧ್ಯೆ, ಬಾಗಲಕೋಟೆಯಲ್ಲಿ ಕೂಡ ನಾಮಪತ್ರ ಸಲ್ಲಿಕೆ ವೇಳೆ, ಕೈ-ಕಮಲ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಬೆಳಗ್ಗೆ ತಮ್ಮ ಹುಟ್ಟೂರಾದ ತಿಮ್ಮಾಪುರದಲ್ಲಿ ಅವರ ತಂದೆಯವರಾದ ದಿ.ಎಚ್.ವೈ.ಮೇಟಿಯವರ ಸಮಾಧಿಯ ದರ್ಶನ ಪಡೆದು, ಮನೆಯಲ್ಲಿ ಗೋಪೂಜೆ ನೆರವೇರಿಸಿ, ನಂತರ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್ ನಾಮಪತ್ರ ಸಲ್ಲಿಸುವಾಗ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, 2ನೇ ಬಾರಿಗೆ ಸಚಿವ ಸತೀಶ ಜಾರಕಿಹೊಳಿ, ಮೂರನೇ ಬಾರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವ ಶಿವಾನಂದ ಪಾಟೀಲ ಸಾಥ್ ನೀಡಿದರು.
ಇನ್ನೊಂದೆಡೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಬೆಳಗ್ಗೆ ಮುಚಖಂಡಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್ ನಾಮಪತ್ರ ಸಲ್ಲಿಸುವಾಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಜಗದೀಶ ಶೆಟ್ಟರ, 2ನೇ ಬಾರಿಗೆ ಸಂಸದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ಎಂಎಲ್‌ಸಿ ಪಿ.ಎಚ್. ಪೂಜಾರ, 3ನೇ ಬಾರಿಗೆ ಮಾಜಿ ಸಚಿವ ಮುರುಗೇಶ ನಿರಾಣಿ ಸಾಥ್ ನೀಡಿದರು.
ನಂತರ ಬಿಜೆಪಿ ಹಳೇ ಬಾಗಲಕೋಟೆಯಲ್ಲಿ ತನ್ನ ಶಕ್ತಿ ಪ್ರದರ್ಶನದ ಭವ್ಯ ಮೆರವಣಿಗೆ ನಡೆಸಿದರೆ, ಕಾಂಗ್ರೆಸ್ ವಿದ್ಯಾಗಿರಿ ಹಾಗೂ ನವನಗರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿತು. ಹಳೇ ಬಾಗಲಕೋಟೆಯ ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಸಿದ ಬಿಜೆಪಿ ನಾಯಕರು, ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು. ಜೋಶಿ, ವಿಜಯೇಂದ್ರ, ಮತ್ತಿತರ ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇನ್ನೊಂದೆಡೆ, ವಿದ್ಯಾಗಿರಿಯ ಕಾಲೇಜು ಸರ್ಕಲ್‌ನಿಂದ ಬೃಹತ್ ಮೆರವಣಿಗೆ ನಡೆಸಿದ ಕಾಂಗ್ರೆಸ್ ನಾಯಕರು, ತಾ.ಪಂ.ಕಚೇರಿ ಸರ್ಕಲ್‌ನಲ್ಲಿ ಬಹಿರಂಗ ಸಭೆ ನಡೆಸಿತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಚಿವರು, ಹಾಲಿ-ಮಾಜಿ ಶಾಸಕರು ಇದರಲ್ಲಿ ಪಾಲ್ಗೊಂಡಿದ್ದರು. ಹಳೇ ಬಾಗಲಕೋಟೆಯಲ್ಲಿ ಬಿಜೆಪಿಯ ಕೇಸರಿ ಶಾಲು, ಬ್ಯಾನರ್‌ಗಳು ಹಾರಾಡಿದರೆ, ವಿದ್ಯಾಗಿರಿ, ನವನಗರದಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳು ಹಾರಾಡಿದವು. ಎರಡೂ ಪಕ್ಷಗಳು ತಲಾ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸುವ ಮೂಲಕ ಚುನಾವಣೆಗೆ ನಾವು ರೆಡಿ ಎಂಬ ಸಂದೇಶ ಸಾರಿದವು.
13 ಅಭ್ಯರ್ಥಿಗಳ ನಾಮಪತ್ರ
ಎರಡೂ ಕ್ಷೇತ್ರಗಳಲ್ಲಿ ಒಟ್ಟು 13 ಅಭ್ಯರ್ಥಿಗಳು 19 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಗುರುವಾರ ಕಡೆ ದಿನ.
ಗಮನ ಸೆಳೆದ ಜಮೀರ್ ಗೈರು
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್‌ಗೆ ಯತ್ನಿಸಿ ವಿಫಲರಾಗಿದ್ದ ಸಚಿವ ಜಮೀರ್ ಅಹ್ಮದ್ ಅವರು ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಗೈರಾಗಿದ್ದು ಎಲ್ಲರ ಗಮನ ಸೆಳೆಯಿತು.
ಕಾಂಗ್ರೆಸ್‌ಗೆ ಬಂಡಾಯದ ಬಿಸಿ
ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಸಾದಿಕ್ ಪೈಲ್ವಾನ್ ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸುವ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆದರು.