
ಜನವಸತಿ ಪ್ರದೇಶಗಳ ಮೇಲಿನ ದಾಳಿ ಮುಂದುವರಿಸಿರುವ ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಲಾಗುವುದು, ಇನ್ನಷ್ಟು ಪ್ರದೇಶಗಳನ್ನು ಗುರಿ ಮಾಡಲಾಗುವುದು ಎಂದು ಇಸ್ರೇಲ್ ಎಚ್ಚರಿಸಿದೆ. ಈ ಮೂಲಕ ಅಮೆರಿಕದ ಕದನವಿರಾಮ ಇಂಗಿತದ ಹೊರತಾಗ್ಯೂ ಇರಾನ್ ಜತೆಗಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸುಳಿವನ್ನು ಇಸ್ರೇಲ್ ನೀಡಿದೆ.
ಜೆರುಸಲೇಂ: ಜನವಸತಿ ಪ್ರದೇಶಗಳ ಮೇಲಿನ ದಾಳಿ ಮುಂದುವರಿಸಿರುವ ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಲಾಗುವುದು, ಇನ್ನಷ್ಟು ಪ್ರದೇಶಗಳನ್ನು ಗುರಿ ಮಾಡಲಾಗುವುದು ಎಂದು ಇಸ್ರೇಲ್ ಎಚ್ಚರಿಸಿದೆ. ಈ ಮೂಲಕ ಅಮೆರಿಕದ ಕದನವಿರಾಮ ಇಂಗಿತದ ಹೊರತಾಗ್ಯೂ ಇರಾನ್ ಜತೆಗಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸುಳಿವನ್ನು ಇಸ್ರೇಲ್ ನೀಡಿದೆ.
ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ಶುಕ್ರವಾರ ಮಾತನಾಡಿ, ‘ನಾಗರಿಕರ ಮೇಲೆ ಕ್ಷಿಪಣಿ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ಇರಾನ್‌ನ ಭಯೋತ್ಪಾದಕ ಆಡಳಿತಕ್ಕೆ ನಾನು ಮತ್ತು ಪ್ರಧಾನಿ ನೆತನ್ಯಾಹು ಎಚ್ಚರಿಸಿದ್ದೇವೆ. ಈ ಎಚ್ಚರಿಕೆಗಳ ಹೊರತಾಗಿಯೂ ನಾಗರಿಕರನ್ನು ಗುರಿಯಾಗಿರಿಸಿ ದಾಳಿ ನಡೆಯುತ್ತಿದೆ. ಹೀಗಾಗಿ ಇರಾನ್ ಮೇಲಿನ ಇಸ್ರೇಲ್ ಸೇನಾ ದಾಳಿಯು ಇನ್ನಷ್ಟು ತೀವ್ರಗೊಳ್ಳಲಿದೆ ಮತ್ತು ಈ ದಾಳಿಯು ಆಯುಧಗಳನ್ನು ಉತ್ಪಾದಿಸುವ ಇನ್ನಷ್ಟು ಗುರಿಗಳು ಹಾಗೂ ಪ್ರದೇಶಗಳ ಮೇಲೂ ವಿಸ್ತರಿಸಲಿದೆ’ ಎಂದಿದ್ದಾರೆ.
‘ನಾಗರಿಕರ ಮೇಲೆ ದಾಳಿ ನಡೆಸುವ ಮೂಲಕ ಅವರು ಯುದ್ಧಾಪರಾಧ ಎಸಗಿದ್ದಾರೆ. ಇದಕ್ಕಾಗಿ ಅವರು ಭಾರೀ ಬೆಲೆ ತೆರಲಿದ್ದಾರೆ’ ಎಂದು ಕಾಟ್ಜ್ ಹೇಳಿದ್ದಾರೆ.
ನಿಲ್ಲದ ಯುದ್ಧ: ದಾಳಿ-ಪ್ರತಿದಾಳಿ ತೀವ್ರ
ದುಬೈ: ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಹೊರತಾಗಿಯೂ, ಕೊಲ್ಲಿ ಯುದ್ಧ 28ನೇ ದಿನ ಮುಂದುವರಿದಿದೆ.
ಟ್ರಂಪ್ ಮಾತಿಗೆ ಓಗೊಡದೆ ಇರಾನ್ ಮೇಲೆ ಇಸ್ರೇಲ್ ದಾಳಿಯನ್ನು ಮುಂದುವರಿಸಿದೆ. ಶುಕ್ರವಾರ ರಾಜಧಾನಿ ಟೆಹ್ರಾನ್‌ನಲ್ಲಿರುವ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ತಯಾರಿಕಾ ಘಟಕಕ್ಕೆ ದಾಳಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ.‘ಶುಕ್ರವಾರ ಟೆಹ್ರಾನ್‌ನ ಹೃದಯಭಾಗದಲ್ಲಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಬಳಸುವ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ. ಪಶ್ಚಿಮ ಇರಾನ್‌ನಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು ಮತ್ತು ಸಂಗ್ರಹಣಾ ತಾಣಗಳನ್ನು ಸಹ ಹೊಡೆದಿದ್ದೇವೆ’ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.
ಇನ್ನು ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಸ್ಫೋಟ ಸಂಭವಿಸಿ, ದಟ್ಟ ಹೊಗೆ ಆವರಿಸಿದೆ. ಆದರೆ ಈ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲ್‌ನಲ್ಲಿಯೂ ವಾಯುದಾಳಿಯ ಸೈರನ್‌ಗಳು ಮೊಳಗಿವೆ. ಆದರೆ ಇರಾನ್‌ನ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇನ್ನು ಸೌದಿ ಅರೇಬಿಯಾ ಮೇಲೂ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ಹಾರಿಸಿದೆ. ಆದರೆ ಕ್ಷಿಪಣಿಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಸೌದಿ ಹೇಳಿದೆ.===
ಇರಾನ್‌ನಲ್ಲಿ 1,900 ಜನ ಸಾವು:
ಯುದ್ಧ ಪ್ರಾರಂಭವಾದಾಗಿನಿಂದ ಇರಾನ್‌ನಲ್ಲಿ 1,900, ಇಸ್ರೇಲ್‌ನಲ್ಲಿ 18, ಲೆಬನಾನ್‌ನಲ್ಲಿ 1,100 ಜನ ಸಾವನ್ನಪ್ಪಿದ್ದಾರೆ. ಇರಾಕ್‌ನಲ್ಲಿ 80 ಭದ್ರತಾ ಪಡೆ ಸಿಬ್ಬಂದಿ, ಲೆಬನಾನ್‌ನಲ್ಲಿ ಕನಿಷ್ಠ 3 ಇಸ್ರೇಲ್ ಸೈನಿಕರು, 13 ಅಮೆರಿಕ ಯೋಧರು, ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ನಾಲ್ವರು ಮತ್ತು ಕೊಲ್ಲಿ ದೇಶಗಳಲ್ಲಿ 20 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಕತಾರ್‌ನಂತೆ ಸುಮ್ಮನಿರಲ್ಲ: ಇಸ್ರೇಲ್‌ಗೆ ಪಾಕ್ ಎಚ್ಚರಿಕೆ
ಇಸ್ಲಾಮಾಬಾದ್: ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಸಮೀಪ ಇಸ್ರೇಲ್-ಅಮೆರಿಕ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಪಾಕ್ ಆಕ್ರೋಶ ವ್ಯಕ್ತಪಡಿಸಿದ್ದು, ‘ನಾವು ಕತಾರ್‌ನಂತೆ ಸುಮ್ಮನಿರಲ್ಲ’ ಎಂದು ಎಚ್ಚರಿಸಿದೆ.‘ಇರಾನ್ ಅಥವಾ ಯಾವುದೇ ಪ್ರದೇಶದಲ್ಲಿ ನಮ್ಮ ಅಧಿಕಾರಿಗಳಿಗೆ ಹಾನಿ ಉಂಟುಮಾಡಿದರೆ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ. ಜಗತ್ತಿನ ಯಾವುದೇ ಪ್ರದೇಶದಲ್ಲಿ ನಮ್ಮ ರಾಜತಾಂತ್ರಿಕರಿಗೆ ಯಾವುದೇ ಹಾನಿ ಸಂಭವಿಸಿದಲ್ಲಿ ನಾವು ಅವರನ್ನು ಸೋಲಿಸುತ್ತೇವೆ ಎಂಬುದನ್ನು ಇಸ್ರೇಲ್ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಪಾಕಿಸ್ತಾನ ಸರ್ಕಾರದ ಅಧೀನದ ಸ್ಟ್ರಾಟೆಜಿಕ್ ಫೋರಂ ಹೇಳಿಕೆ ನೀಡಿದೆ.