
ವಿಜಯಪುರದ ದೇವರಹಿಪ್ಪರಗಿ ಪಟ್ಟಣದಲ್ಲಿ, ಸಾಲದ ಬಾಧೆ ಮತ್ತು ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಮನೆಯ ಆವರಣದಲ್ಲೇ ಹೂತುಹಾಕಿದ್ದು, 24 ದಿನಗಳ ನಂತರ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ವಿಜಯಪುರ (ಫೆ.18): ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಅತ್ಯಂತ ದುರದೃಷ್ಟಕರ ಹಾಗೂ ಮನಕಲಕುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾಲದ ಬಾಧೆ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮನೆಯೊಳಗೇ ಹೂತುಹಾಕಿದ್ದ ಪ್ರಕರಣ ಈಗ ಬಯಲಾಗಿದೆ. ಘಟನೆ ನಡೆದ ಸುಮಾರು 24 ದಿನಗಳ ನಂತರ ಸತ್ಯಾಂಶ ಹೊರಬಂದಿದ್ದು, ಇಡೀ ಪಟ್ಟಣದಲ್ಲಿ ಆತಂಕ ಹಾಗೂ ಆಶ್ಚರ್ಯ ಮೂಡಿಸಿದೆ.
ಪ್ರಕರಣದ ವಿವರ:
ಹತ್ಯೆಯಾದ ದುರ್ದೈವಿ ಸರೋಜಿನಿ ರತ್ನಾಕರ (45) ಎಂದು ಗುರುತಿಸಲಾಗಿದೆ. ಇವರ ಪತಿ ಪ್ರಭು ರತ್ನಾಕರ (46) ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರಭು ರತ್ನಾಕರ್ ತನ್ನ ಪತ್ನಿ ಸರೋಜಿನಿ ಹೆಸರಿನಲ್ಲಿ ಮಿತಿಮೀರಿ ಸಾಲ ಮಾಡಿದ್ದ ಎನ್ನಲಾಗಿದೆ. ಈ ಹಣದ ವಿಚಾರವಾಗಿಯೇ ದಂಪತಿಗಳ ನಡುವೆ ಕಳೆದ ಕೆಲವು ಸಮಯದಿಂದ ನಿರಂತರವಾಗಿ ಜಗಳ ನಡೆಯುತ್ತಿತ್ತು. ಕಳೆದ ಜನವರಿ 23ರ ರಾತ್ರಿ ಸಾಲದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ಕೋಪೋದ್ರಿಕ್ತನಾದ ಪ್ರಭು, ಜನವರಿ 24ರ ಮುಂಜಾನೆ ಮಾರಕಾಸ್ತ್ರದಿಂದ (ಹಾರಿ) ಪತ್ನಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಯಾರಿಗೂ ಅನುಮಾನ ಬರದಂತೆ ಪತ್ನಿಯ ಮೃತದೇಹವನ್ನು ಮನೆಯ ಕಾಂಪೌಂಡ್ ಒಳಗೇ ಗುಂಡಿ ತೆಗೆದು ಹೂತುಹಾಕಿ ಏನೂ ತಿಳಿಯದವನಂತೆ ನಾಟಕವಾಡಿದ್ದನು.
ಕೊಲೆ ಘಟನೆ ಬಯಲಾದದ್ದು ಹೇಗೆ?
ಸರೋಜಿನಿ ಅವರು ಕಳೆದ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ತಾಯಿ ಕಮಲವ್ವ ಮೇಲಿನಿ ಅವರಿಗೆ ಸಂಶಯ ಮೂಡಿದೆ. ಮಗಳ ಬಗ್ಗೆ ಅಳಿಯ ಸರಿಯಾದ ಉತ್ತರ ನೀಡದಿದ್ದಾಗ ಆತಂಕಗೊಂಡ ತಾಯಿ, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪ್ರಭುವನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಭೀಕರ ಹತ್ಯೆಯ ಸತ್ಯ ಹೊರಬಂದಿದೆ.
ಪೊಲೀಸ್ ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆಯೇ ದೇವರಹಿಪ್ಪರಗಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ತಹಶೀಲ್ದಾರ್ ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮನೆಯಲ್ಲಿ ಹೂತುಹಾಕಿದ್ದ ಮೃತದೇಹವನ್ನು ಹೊರತೆಗೆಯುವ ಪ್ರಕ್ರಿಯೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಕೌಟುಂಬಿಕ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಬದಲು, ಇಂತಹ ಹಿಂಸಾತ್ಮಕ ದಾರಿ ತುಳಿಯುತ್ತಿರುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಆತಂಕಕಾರಿ ವಿಷಯವಾಗಿದೆ. ದೇವರಹಿಪ್ಪರಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.