
ಶಾಸಕರು ಹಾಗೂ ಸಂಸದರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು, ಆ ಜನಪ್ರತಿನಿಧಿಗಳ ಕರೆಗಳಿಗೆ ಪ್ರತಿಕ್ರಿಯಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಸೂಚಿಸಿದ್ದಾರೆ.
ಬೆಂಗಳೂರು : ಶಾಸಕರು ಹಾಗೂ ಸಂಸದರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು, ಆ ಜನಪ್ರತಿನಿಧಿಗಳ ಕರೆಗಳಿಗೆ ಪ್ರತಿಕ್ರಿಯಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಸೂಚಿಸಿದ್ದಾರೆ.
ಸುತ್ತೋಲೆ ಹೊರಡಿಸಿರುವ ಡಿಜಿಪಿ
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಡಿಜಿಪಿ ಅವರು, ಜನಪ್ರತಿನಿಧಿಗಳ ಕರೆಗಳಿಗೆ ಸ್ಪಂದಿಸುವಂತೆ ಹೇಳಿದ್ದಾರೆ. ಜನಪ್ರತಿನಿಧಿಗಳಾದ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ದೂರವಾಣಿಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳುವಂತೆ ಹಾಗೂ ಆ ಜನಪ್ರತಿನಿಧಿಗಳು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಸುತ್ತೋಲೆಯಲ್ಲಿ ಸೂಚನೆ
ಜನಪ್ರತಿನಿಧಿಗಳು ಕರೆ ಮಾಡಿದಾಗ ಒಂದು ವೇಳೆ ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಕರ್ತವ್ಯ ಮುಗಿದ ಬಳಿಕ ಮರು ಕರೆ ಮಾಡಬೇಕು. ಈ ಮೂಲಕ ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ತಮ್ಮ ಕರೆ ಸ್ವೀಕರಿಸದೆ ಉದಾಸೀನತೆ ತೋರುತ್ತಿದ್ದಾರೆ ಎಂದು ಕೆಲ ಶಾಸಕರು ಹಾಗೂ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವು ಡಿಜಿಪಿ ಅವರ ಗಮನಕ್ಕೆ ಬಂದಿತ್ತು.