Health Department: ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌: ಸಚಿವ ದಿನೇಶ್‌ ಗುಂಡೂರಾವ್‌ | Karnataka Health Department Medicinen Tender 868 Crore Dinesh Gundu Rao Gvd

Health Department: ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌: ಸಚಿವ ದಿನೇಶ್‌ ಗುಂಡೂರಾವ್‌ | Karnataka Health Department Medicinen Tender 868 Crore Dinesh Gundu Rao Gvd



Health Department: ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌: ಸಚಿವ ದಿನೇಶ್‌ ಗುಂಡೂರಾವ್‌ | Karnataka Health Department Medicinen Tender 868 Crore Dinesh Gundu Rao Gvd

ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. 868 ಕೋಟಿ ರು. ಮೌಲ್ಯದ ಔಷಧಿ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ವಿಧಾನಸಭೆ (ಮಾ.18): ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. 868 ಕೋಟಿ ರು. ಮೌಲ್ಯದ ಔಷಧಿ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಯಲ್ಲಿ ಹಲವು ಸುಧಾರಣೆ ಕೈಗೊಳ್ಳಲಾಗಿದೆ. ಕೆಎಸ್‌ಎಂಎಸ್‌ಸಿಎಲ್‌ ಅಡಿ 868 ಕೋಟಿ ರು. ಮೌಲ್ಯದ ಔಷಧಿಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. 534 ಔಷಧಿಗಳ ಖರೀದಿಗೆ ಟೆಂಡರ್‌ ಆಗಿದೆ. 216 ಔಷಧಿಗಳ ಖರೀದಿ ಟೆಂಡರ್‌ ವಿವಿಧ ಹಂತಗಳಲ್ಲಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿದ್ದೇವೆ ಎಂದು ತಿಳಿಸಿದರು.

ಇಬ್ಬರು ವೈದ್ಯರ ನಿಯೋಜನೆ: ರಾಜ್ಯದ 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ(ಸಿಎಚ್‌ಸಿ) ತಿಂಗಳಿಗೆ 10ಕ್ಕಿಂತ ಕಡಿಮೆ ಹೆರಿಗೆ ಮಾಡಿಸಲಾಗುತ್ತಿದೆ. ಸ್ತ್ರೀರೋಗ ತಜ್ಞ ವೈದ್ಯರು, ಅನಸ್ತೇಶಿಯಾ ವೈದ್ಯರು ಆರಾಮಾಗಿದ್ದಾರೆ. ಹೆಚ್ಚಿನ ಮಟ್ಟದಲ್ಲಿ ಇವರ ಸೇವೆ ಪಡೆಯುವ ಉದ್ದೇಶದಿಂದ ಕಡಿಮೆ ಹೆರಿಗೆ ಪ್ರಕರಣ ಇರುವ ಸಿಎಚ್‌ಸಿಗಳ ಸ್ತ್ರೀರೋಗ ತಜ್ಞ ವೈದ್ಯರು ಮತ್ತು ಅನಸ್ತೇಶಿಯಾ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇವರ ವರ್ಗಾವಣೆಯಿಂದ ತೆರವಾಗುವ ಜಾಗಕ್ಕೆ ಇಬ್ಬರು ಎಂಬಿಬಿಎಸ್‌ ವೈದ್ಯರನ್ನು ನಿಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಾಣಂತಿಯರ ಸಾವಿನ ಸಂಖ್ಯೆ ಇಳಿಕೆ: ರಾಜ್ಯದಲ್ಲಿ ಬಾಣಂತಿಯರ ಸಾವಿನ ದರ ಕಳೆದ ವರ್ಷ 57 ಇತ್ತು. ಈ ವರ್ಷ 48ಕ್ಕೆ ಇಳಿಸಲಾಗಿದೆ. 2030ಕ್ಕೆ 30ಕ್ಕೆ ಇಳಿಸುವ ಗುರಿಯಿದೆ. 2024ರಲ್ಲಿ ರಾಜ್ಯದಲ್ಲಿ 578 ಬಾಣಂತಿಯರ ಸಾವುಗಳಾಗಿದ್ದವು. 2025ರಲ್ಲಿ 440ಕ್ಕೆ ಇಳಿಕೆಯಾಗಿದೆ. ಬಳ್ಳಾರಿ ಘಟನೆ ಬಳಿಕ ಎಚ್ಚೆತ್ತುಕೊಂಡು ಕೆಲ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಒಂದೇ ವರ್ಷಕ್ಕೆ ಬಾಣಂತಿಯರ ಸಾವಿನ ಸಂಖ್ಯೆ 138ಕ್ಕೆ ಇಳಿಕೆಯಾಗಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 24/7 ಹೆರಿಗೆ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಿಎಚ್‌ಸಿ, ಪಿಎಚ್‌ಸಿ ಮುಚ್ಚಲ್ಲ: ನಿಯಮದ ಪ್ರಕಾರ 20-30 ಸಾವಿರ ಜನಸಂಖ್ಯೆ ಇರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ಇರಬೇಕು. ರಾಜ್ಯದಲ್ಲಿ 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ 97 ಪಿಎಚ್‌ಸಿ ಕೇಂದ್ರಗಳಿವೆ. ಈ ಪಿಎಚ್‌ಸಿ ಸೆಂಟರ್‌ಗಳಲ್ಲಿ ವೈದ್ಯರು, ಫಾರ್ಮಾಸಿಸ್ಟ್‌, ನರ್ಸ್‌ ಸೇರಿ 8 ಸಿಬ್ಬಂದಿ ಇರುತ್ತಾರೆ. ಹೀಗಾಗಿ ಅಗತ್ಯವಿರುವ ಕಡೆಗೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ. ಎಲ್ಲೂ ಸಿಎಚ್‌ಸಿ ಮತ್ತು ಪಿಎಚ್‌ಸಿ ಕೇಂದ್ರಗಳನ್ನು ಮುಚ್ಚುತ್ತಿಲ್ಲ. ಇಬ್ಬರು ಎಂಬಿಬಿಎಸ್‌ ವೈದ್ಯರು ನಿಯೋಜಿಸುವವರೆಗೂ ತಜ್ಞ ವೈದ್ಯರನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ಹೇಳಿದರು.

ವರ್ಗಾವಣೆಗೆ ಕೌನ್ಸೆಲಿಂಗ್‌: ನಮ್ಮ ಸರ್ಕಾರವು ಕೌನ್ಸೆಲಿಂಗ್‌ ಮುಖಾಂತರ ವೈದ್ಯರನ್ನು ವರ್ಗಾವಣೆ ಮಾಡುತ್ತಿದೆ. ಕಳೆದ ವರ್ಷ ಕೌನ್ಸೆಲಿಂಗ್‌ ಮುಖಾಂತರ 5,600 ಮಂದಿ ವೈದ್ಯರ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಶೇ.10ರಷ್ಟು ಜನರಿಗೆ ತೊಂದರೆಯಾಗಿದೆ. ಪಾರದರ್ಶಕತೆ ಮತ್ತು ಭ್ರಷ್ಟಾಚಾರ ತಡೆಗೆ ಇದು ಅನಿವಾರ್ಯ. ಈ ವರ್ಷದ ಕೌನ್ಸೆಲಿಂಗ್‌ ಏಪ್ರಿಲ್‌ನಲ್ಲಿ ನಡೆಯಲಿದ್ದು, ವೈದ್ಯರ ಸಂಘದ ಸಲಹೆ ಪಡೆದು ಹೊಸ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದರು.

24/7 ಆ್ಯಂಬುಲೆನ್ಸ್‌ ಸೇವೆ

ಆ್ಯಂಬುಲೆನ್ಸ್‌ ಸೇವೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. 108 ಆ್ಯಂಬುಲೆನ್ಸ್‌ ವ್ಯವಸ್ಥೆ ನಮ್ಮ ನಿಯಂತ್ರಣದಲ್ಲಿದೆ. ಪ್ರತಿ ಆ್ಯಂಬುಲೆನ್ಸ್‌ಗೆ ಒಂದು ಡಿವೈಸ್‌ ಕೊಟ್ಟಿದ್ದೇವೆ. ನಿಗಾವಹಿಸಲು ಹೊಸ ಸಾಫ್ಟ್‌ವೇರ್‌ ಅನುಷ್ಠಾನಕ್ಕೆ ತಂದಿದ್ದೇವೆ. 24/7 ಆ್ಯಂಬುಲೆನ್ಸ್‌ ಸೇವೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸುಧಾರಣೆ ತರುವಾಗ ಕೆಲವು ಸಮಸ್ಯೆಗಳು ಸಾಮಾನ್ಯ. ಇನ್ನು ಆರೋಗ್ಯ ಇಲಾಖೆ ಸಚಿವಾಲಯದಲ್ಲಿ ಕೆಲ ಬದಲಾವಣೆ ತರಲಾಗಿದೆ. ಒಳ್ಳೆಯ ಕೆಲಸವಾಗಬೇಕು. ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.



Source link

Leave a Reply

Your email address will not be published. Required fields are marked *