Headlines

‘ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ’; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್! | Bengaluru Hal Road Traffic Pedestrian Debate Aditya Anand Post Sat

‘ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ’; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್! | Bengaluru Hal Road Traffic Pedestrian Debate Aditya Anand Post Sat



‘ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ’; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್! | Bengaluru Hal Road Traffic Pedestrian Debate Aditya Anand Post Sat

ಬೆಂಗಳೂರಿನ ಟ್ರಾಫಿಕ್‌ಗೆ ಫುಟ್ ಓವರ್‌ಬ್ರಿಡ್ಜ್ ಬಳಸದ ಪಾದಚಾರಿಗಳೇ ಕಾರಣ ಎಂದು ಸ್ಟಾರ್ಟ್‌ಅಪ್ ಸಿಇಒ ಹೇಳಿದ್ದು, ಲಿಂಕ್ಡ್‌ಇನ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು ಜನರ ಬೇಜವಾಬ್ದಾರಿತನವನ್ನು ದೂಷಿಸಿದರೆ, ಕೆಲವರು ಪಾದಚಾರಿ ಸ್ನೇಹಿಯಲ್ಲದ ನಗರ ಯೋಜನೆ ಅಸಲಿ ಸಮಸ್ಯೆ ಎನ್ನುತ್ತಿದ್ದಾರೆ.

ಬೆಂಗಳೂರು (ಏ.14): ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ನಿಜವಾದ ಕಾರಣ ಯಾರು? ಎಂಬ ಬಗ್ಗೆ ಈಗ ನಗರದಲ್ಲಿ ಹೊಸದೊಂದು ಸಂಘರ್ಷ ಆರಂಭವಾಗಿದೆ. ಎಚ್.ಎ.ಎಲ್ (HAL) ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ಗೆ ಪಾದಚಾರಿಗಳೇ ಕಾರಣ ಎಂದು ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ಮಾಡಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ವಿವಾದದ ಕಿಡಿ ಹೊತ್ತಿಸಿದ ಲಿಂಕ್ಡ್‌ಇನ್ ಪೋಸ್ಟ್:

ಆದಿತ್ಯ ಆನಂದ್ ಎಂಬ ಸ್ಟಾರ್ಟ್‌ಅಪ್ ಸಿಇಒ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈ ಚರ್ಚೆಗೆ ಮೂಲ ಕಾರಣ. ಆದಿತ್ಯ ಅವರು ಪ್ರತಿದಿನ ಬೆಳಿಗ್ಗೆ 6:50ರ ಸುಮಾರಿಗೆ ಬ್ಯಾಡ್ಮಿಂಟನ್ ಆಡಲು ಎಚ್.ಎ.ಎಲ್ ರಸ್ತೆಯ ಮೂಲಕ ಪ್ರಯಾಣಿಸುತ್ತಾರೆ. ಈ ವೇಳೆ ಎಚ್.ಎ.ಎಲ್ ಕಚೇರಿಗೆ ಹೋಗುವ ನೂರಾರು ಉದ್ಯೋಗಿಗಳು ರಸ್ತೆ ದಾಟಲು ಫುಟ್ ಓವರ್‌ಬ್ರಿಡ್ಜ್ (FOB) ಬಳಸದೆ ನೇರವಾಗಿ ರಸ್ತೆಯಲ್ಲೇ ನುಗ್ಗುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಸುಮಾರು 200-300 ಜನರು ಒಟ್ಟಾಗಿ ರಸ್ತೆ ದಾಟುವಾಗ ವಾಹನಗಳು ನಿಲ್ಲಲೇಬೇಕಾಗುತ್ತದೆ. ಅಲ್ಲಿಯೇ ಪಕ್ಕದಲ್ಲಿ ಅತ್ಯಾಧುನಿಕ ಫುಟ್ ಓವರ್‌ಬ್ರಿಡ್ಜ್ ಇದ್ದರೂ ಜನರು ಅದನ್ನು ಬಳಸುತ್ತಿಲ್ಲ. ಓದಿಕೊಂಡವರೇ ಹೀಗೆ ಕಾನೂನು ಮೀರಿದರೆ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ಪಾದಚಾರಿಗಳ ಈ ವರ್ತನೆಯಿಂದಲೇ ಬೆಂಗಳೂರಿನ ರಸ್ತೆಗಳು ನರಕವಾಗುತ್ತಿವೆ ಎಂದು ಲಿಂಕ್ಡ್‌ ಇನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪಾದಚಾರಿಗಳ ಪರ ನಿಂತ ನೆಟ್ಟಿಗರು:

ಆದಿತ್ಯ ಅವರ ಈ ಪೋಸ್ಟ್ ಪ್ರಕಟವಾಗುತ್ತಿದ್ದಂತೆಯೇ, ಅದಕ್ಕೆ ತದ್ವಿರುದ್ಧವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಬೆಂಗಳೂರಿನ ರಸ್ತೆಗಳು ವಿನ್ಯಾಸಗೊಂಡಿರುವುದು ಕೇವಲ ಕಾರುಗಳಿಗಾಗಿಯೇ ಹೊರತು ಮನುಷ್ಯರಿಗಾಗಿ ಅಲ್ಲ’ ಎಂದು ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಾದಚಾರಿಗಳ ಪರ ವಾದಿಸುವವರು, ರಸ್ತೆ ದಾಟಲು ನಿರ್ಮಿಸಲಾಗಿರುವ ಫುಟ್ ಓವರ್‌ಬ್ರಿಡ್ಜ್‌ಗಳು ಅವೈಜ್ಞಾನಿಕವಾಗಿವೆ. ಎರಡು-ಮೂರು ಮಹಡಿಗಳಷ್ಟು ಎತ್ತರವಿರುವ ಈ ಸೇತುವೆಗಳನ್ನು ಏರಲು ಲಿಫ್ಟ್ ಅಥವಾ ಎಸ್ಕಲೇಟರ್‌ಗಳ ಸೌಲಭ್ಯವಿಲ್ಲ. ವಯಸ್ಸಾದವರು, ಗರ್ಭಿಣಿಯರು ಅಥವಾ ದೈಹಿಕವಾಗಿ ಅಶಕ್ತರಾದವರು ಅಷ್ಟು ಎತ್ತರ ಹತ್ತಿ ಇಳಿಯುವುದು ಸಾಧ್ಯವೇ? ಎಂಬುದು ಅವರ ಪ್ರಶ್ನೆ. ‘ವಾಹನಗಳ ವೇಗಕ್ಕೆ ಅಡ್ಡಿಯಾಗಬಾರದು ಎಂದು ಪಾದಚಾರಿಗಳನ್ನು ಆಕಾಶಕ್ಕೆ ಕಳುಹಿಸುವುದು ಸರಿಯಲ್ಲ. ರಸ್ತೆಯ ಮೇಲೆ ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ವ್ಯವಸ್ಥೆಯ ದೋಷವೋ ಅಥವಾ ಜವಾಬ್ದಾರಿಯ ಕೊರತೆಯೋ?

ಈ ಚರ್ಚೆಯು ಭಾರತದ ನಗರಗಳ ಮೂಲ ಸೌಕರ್ಯದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಕಾರು ಮತ್ತು ಬೈಕುಗಳ ಸುಗಮ ಸಂಚಾರಕ್ಕೆ ನೀಡುವ ಆದ್ಯತೆಯನ್ನು ಪಾದಚಾರಿಗಳ ಸುರಕ್ಷತೆಗೆ ನೀಡಲಾಗುತ್ತಿಲ್ಲ ಎಂಬ ದೂರು ಹಳೆಯದು. ಆದರೆ, ಮತ್ತೊಂದೆಡೆ ಪಾದಚಾರಿಗಳು ಕೂಡ ಸ್ವಲ್ಪ ಆಲಸ್ಯ ತೋರಿ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಾರೆಯಾಗಿ, ಆದಿತ್ಯ ಆನಂದ್ ಅವರ ಪೋಸ್ಟ್ ಬೆಂಗಳೂರಿನ ನಗರ ಯೋಜನೆ (Urban Planning) ಬಗ್ಗೆ ಮರುಚಿಂತನೆ ನಡೆಸುವಂತೆ ಮಾಡಿದೆ. ಟ್ರಾಫಿಕ್ ಸಮಸ್ಯೆಗೆ ಕೇವಲ ಪಾದಚಾರಿಗಳನ್ನೋ ಅಥವಾ ವಾಹನ ಸವಾರರನ್ನೋ ದೂಷಿಸುವ ಬದಲು, ಎಲ್ಲರಿಗೂ ಪೂರಕವಾಗುವಂತಹ ವೈಜ್ಞಾನಿಕ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.



Source link

Leave a Reply

Your email address will not be published. Required fields are marked *