
ಮುಡಾ ಹಗರಣದ ಹೋರಾಟಗಾರ್ತಿ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿನೋದ್ ಎಂಬ ವ್ಯಕ್ತಿಯಿಂದ ದಾರಿ ತಪ್ಪಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ.
ಬೆಂಗಳೂರು (ಫೆ.21): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ (CCB) ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ನನ್ನನ್ನು ಅರೆಸ್ಟ್ ಮಾಡಿಲ್ಲ, ವಿಚಾರಣೆ ಮಾತ್ರ:
ತಮ್ಮ ಬಂಧನದ ಕುರಿತಾದ ವದಂತಿಗಳಿಗೆ ತೆರೆ ಎಳೆದ ಸ್ನೇಹಮಯಿ ಕೃಷ್ಣ, ‘ಪೊಲೀಸರು ನನ್ನನ್ನು ಬಂಧಿಸಿಲ್ಲ, ಕೇವಲ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ನಿನ್ನೆಯಿಂದಲೂ ಪೊಲೀಸರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ತನಿಖೆಗೆ ನಾನು ಪೂರ್ಣ ಸಹಕಾರ ನೀಡಿದ್ದೇನೆ. ಯಾವುದೇ ನಕಲಿ ದಾಖಲೆಗಳನ್ನು ನಾನು ಸೃಷ್ಟಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ವಿನೋದ್ ಎಂಬಾತನ ಕುತಂತ್ರಕ್ಕೆ ಬಲಿಯಾದೆ:
ಪ್ರಕರಣದ ಅಸಲಿ ಸತ್ಯ ಬಿಚ್ಚಿಟ್ಟ ಅವರು, ‘ವಿನೋದ್ ಎಂಬ ವ್ಯಕ್ತಿ ನನ್ನನ್ನು ದಾರಿ ತಪ್ಪಿಸಿದ್ದಾನೆ. ಮುಡಾ ಮಾಜಿ ಆಯುಕ್ತ ನಟೇಶ್ ಮತ್ತು ವಿನೋದ್ ನಡುವೆ ಹಳೆಯ ಹಣಕಾಸಿನ ವ್ಯವಹಾರವಿತ್ತು. ನಟೇಶ್ ಅವರಿಗೆ ವಿನೋದ್ ಹಣ ನೀಡಬೇಕಿತ್ತು. ಆ ಹಣವನ್ನು ಕೇಳಬಾರದು ಎಂಬ ಕಾರಣಕ್ಕೆ ವಿನೋದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಬಳಸಿ ಸುಳ್ಳು ದಾಖಲೆಗಳನ್ನು ಮತ್ತು ಮಾಹಿತಿಯನ್ನು ನೀಡಿದ್ದ. ವಿನೋದ್ ಕೊಟ್ಟ ದಾಖಲೆಗಳನ್ನು ನಂಬಿ ನಾನು ದೊಡ್ಡ ತಪ್ಪು ಮಾಡಿದೆ. ಈ ವಿಚಾರದಲ್ಲಿ ಶಾಲಿನಿ ರಜನೀಶ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ’ ಎಂದರು.
ನಟೇಶ್ ಅವರ ಆಡಿಯೋ ಸತ್ಯ:
ವಿನೋದ್ ನೀಡಿದ ದಾಖಲೆಗಳು ಸುಳ್ಳಾದರೂ, ಮುಡಾ ಮಾಜಿ ಆಯುಕ್ತ ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮಾತ್ರ ಸತ್ಯ ಎಂದು ಕೃಷ್ಣ ಪುನರುಚ್ಚರಿಸಿದ್ದಾರೆ. ‘ವಿನೋದ್ ಮೊದಲು ಶಾಲಿನಿ ರಜನೀಶ್ ಅವರ ಹೆಸರನ್ನು ಹೇಳಿದ್ದ, ಈಗ ವಿಚಾರಣೆ ವೇಳೆ ಅವರು ಯಾರೋ ಪ್ರಭಾವಿ ವ್ಯಕ್ತಿ ಎಂದು ಮಾತು ಬದಲಿಸುತ್ತಿದ್ದಾನೆ. ಈ ಇಡೀ ಪ್ರಸಂಗದಲ್ಲಿ ವಿನೋದ್ ನನ್ನನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹೋರಾಟ ಮುಂದುವರಿಯಲಿದೆ:
ಈ ಪ್ರಕರಣಕ್ಕೂ ತಮ್ಮ ಮುಡಾ ಹಗರಣದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. “ಇದು ವೈಯಕ್ತಿಕವಾಗಿ ನಡೆದ ಒಂದು ಪ್ರಮಾದ. ನಮ್ಮ ಮುಡಾ ಹಗರಣದ ಹೋರಾಟದ ಹಾದಿ ಬೇರೆಯೇ ಇದೆ. ಸಿಸಿಬಿ ಪೊಲೀಸರು ನನಗೆ ಫೆಬ್ರವರಿ 24 ರಂದು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಂದು ಕೂಡ ನಾನು ಹಾಜರಾಗಿ ಸತ್ಯಾಂಶಗಳನ್ನು ತಿಳಿಸುತ್ತೇನೆ” ಎಂದು ಅವರು ಮಾತು ಮುಗಿಸಿದರು.