
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಸಚಿವ ಜಮೀರ್ ಅಹಮದ್ ಖಾನ್ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಇಬ್ಬರ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ.
ದಾವಣಗೆರೆ (ಮಾ.09): ದಾವಣಗೆರೆ ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಈಗ ಟಿಕೆಟ್ ಕಿಚ್ಚು ಹೊತ್ತಿಕೊಂಡಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅಥವಾ ಮುಂದಿನ ಚುನಾವಣೆಯ ದೃಷ್ಟಿಯಿಂದ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಅಲ್ಪಸಂಖ್ಯಾತ ಸಮುದಾಯ ಕಣ್ಣಿಟ್ಟಿದೆ. ಈ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ಅವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವುದು, ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಶಾಮನೂರು ಶಿವಶಂಕರಪ್ಪ ಅವರ ಮಾತು ನೆನಪಿಸಿದ ಜಮೀರ್:
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ‘ನಾನು ಟಿಕೆಟ್ ನೀಡಲು ಸಾಧ್ಯವಿಲ್ಲ, ಟಿಕೆಟ್ ನೀಡುವುದು ಹೈಕಮಾಂಡ್. ಆದರೆ ಅಲ್ಪಸಂಖ್ಯಾತರು ಮೊದಲ ಬಾರಿಗೆ ಇಲ್ಲಿ ಟಿಕೆಟ್ ಕೇಳುತ್ತಿಲ್ಲ. ಈ ಕ್ಷೇತ್ರದಲ್ಲಿ 80 ರಿಂದ 90 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಇದು ನನ್ನ ಕೊನೆಯ ಚುನಾವಣೆ, ಮುಂದಿನ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿ ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾತು ಕೊಟ್ಟಿದ್ದರು’ ಎಂದು ಬಾಂಬ್ ಸಿಡಿಸಿದ್ದಾರೆ.
ಕ್ಷೇತ್ರ ಯಾರಪ್ಪನ ಸ್ವತ್ತೂ ಅಲ್ಲ:
‘ನಮ್ಮ ಕ್ಷೇತ್ರದಲ್ಲಿ ಮಾತನಾಡಲು ಅವರು ಯಾರು?’ ಎಂಬ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ ಜಮೀರ್, ‘ನಮ್ಮ ಕ್ಷೇತ್ರ, ಅವರ ಕ್ಷೇತ್ರ ಎಂದು ಹೇಳಲು ಇಲ್ಲಿ ಯಾರೂ ಮಾಲೀಕರಲ್ಲ. ಚಾಮರಾಜಪೇಟೆ ನನ್ನ ಕ್ಷೇತ್ರ ಎಂದು ಹೇಳಿಕೊಳ್ಳಲು ನನಗೂ ಅಧಿಕಾರವಿಲ್ಲ. ರಾಜ್ಯದ 224 ಕ್ಷೇತ್ರಗಳೂ ಕಾಂಗ್ರೆಸ್ ಪಕ್ಷದ ಮತ್ತು ಹೈಕಮಾಂಡ್‌ನ ಕ್ಷೇತ್ರಗಳು. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು. ನಾನು ಅಥವಾ ಮಲ್ಲಿಕಾರ್ಜುನ ಯಾರೂ ತೀರ್ಮಾನ ಮಾಡುವವರಲ್ಲ, ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ’ ಎಂದು ಟಾಂಗ್ ನೀಡಿದ್ದಾರೆ.
ಅಲ್ಪಸಂಖ್ಯಾತ ನಾಯಕನಾಗಿ ನನ್ನ ಹಕ್ಕು:
ಸಮುದಾಯದ ಮುಖಂಡರು ತನ್ನನ್ನು ಭೇಟಿ ಮಾಡಿ ಒತ್ತಡ ಹಾಕುತ್ತಿರುವುದನ್ನು ಸಮರ್ಥಿಸಿಕೊಂಡ ಜಮೀರ್, ‘ನಾನು ಅಲ್ಪಸಂಖ್ಯಾತ ಸಮುದಾಯದ ನಾಯಕ. ನಮ್ಮ ಸಮುದಾಯದವರು ನನ್ನ ಬಳಿ ಬಂದು ಕೇಳದೆ ಇನ್ನಾರ ಬಳಿ ಹೋಗಬೇಕು? ದಾವಣಗೆರೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅಲ್ಲಿ ಯಾರೇ ನಿಂತರೂ ಗೆಲ್ಲುತ್ತಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ? ನಾನು ನನ್ನ ಸಮುದಾಯದ ಪರವಾಗಿ ಹೈಕಮಾಂಡ್‌ಗೆ ವರದಿ ನೀಡುತ್ತೇನೆ. ಒತ್ತಾಯ ಮಾಡುವುದು ನಮ್ಮ ಹಕ್ಕು’ ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ.
ಚಾಮರಾಜಪೇಟೆ ಬಿಟ್ಟುಕೊಡಲು ಸಿದ್ಧ:
‘ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳುವ ನೀವು, ನಿಮ್ಮ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಬೇರೆಯವರಿಗೆ ಬಿಟ್ಟುಕೊಡುತ್ತೀರಾ?’ ಎಂಬ ಪ್ರಶ್ನೆಗೆ ಜಮೀರ್ ಅಚ್ಚರಿಯ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ಬಿಟ್ಟುಕೊಡುತ್ತೇನೆ. ಪಕ್ಷ ಅಥವಾ ಸಮುದಾಯದ ಹಿರಿಯರು ಹೇಳಿದರೆ ನಾನು ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ’ ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಅವರಿಗೆ ಪರೋಕ್ಷವಾಗಿ ಸವಾಲು ಎಸೆದಿದ್ದಾರೆ.
ಒಟ್ಟಾರೆಯಾಗಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರ ಈಗ ಕೇವಲ ಒಂದು ಕ್ಷೇತ್ರದ ವಿಷಯವಾಗಿ ಉಳಿಯದೆ, ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರು ಮತ್ತು ಪ್ರಭಾವಿ ಲಿಂಗಾಯತ ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೈಕಮಾಂಡ್ ಈ ಜಟಾಪಟಿಯನ್ನು ಹೇಗೆ ಶಮನಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.