
ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಈ ಕಾರಣದಿಂದ ಅವರು ಮೊದಲ ಆರು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಅವರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಚೆನ್ನೈ: ಐಪಿಎಲ್ ಸೀಸನ್ ಶುರುವಾಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿರುವ ಮಾಜಿ ನಾಯಕ ಎಂ.ಎಸ್. ಧೋನಿ, ಈ ಸೀಸನ್ನ ಮೊದಲ ಆರು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ. 44 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್ ಆಗಬಹುದು ಎಂದು ಹೇಳಲಾಗುತ್ತಿದ್ದು, ಈ ಗಾಯದ ಸುದ್ದಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.
ಕಳೆದ ಒಂದು ತಿಂಗಳಿಂದ ಧೋನಿ ಚೆನ್ನೈನಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದರು. ಆದರೆ ಈಗ ಗಾಯದ ಕಾರಣ ಅವರಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿ ಬೇಕು ಎಂದು ತಂಡದ ಮೂಲಗಳು ತಿಳಿಸಿವೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯಕ್ಕಾಗಿ ಸಿಎಸ್ಕೆ ತಂಡ ಗುವಾಹಟಿಗೆ ಪ್ರಯಾಣ ಬೆಳೆಸಿದಾಗ, ಧೋನಿ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದಾರೆ. ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ವಾಪಸ್ ಬರಬಹುದು ಎಂದು ನಿರೀಕ್ಷಿಸಲಾಗಿದೆಯಾದರೂ, ಸದ್ಯಕ್ಕೆ ಇದು ಖಚಿತವಾಗಿಲ್ಲ.
ಧೋನಿ ಇಲ್ಲದಿದ್ದಾಗ, ಮಲಯಾಳಿ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹರಾಜಿನಲ್ಲಿ ತಂಡ ಸೇರಿಕೊಂಡಿದ್ದ ಸಂಜು ಅವರೇ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಲಿದ್ದಾರೆ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಈ ಹಿಂದೆಯೇ ಸುಳಿವು ನೀಡಿದ್ದರು. ಧೋನಿ ಅನುಪಸ್ಥಿತಿಯಲ್ಲಿ, ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸೇರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.
ಈ ಬಾರಿ ಧೋನಿ ಎಲ್ಲಾ ಮ್ಯಾಚ್ ಆಡೋದು ಡೌಟ್
ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದರೂ, ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದು ಅನುಮಾನ. ಗಾಯದ ಹಿನ್ನೆಲೆಯಲ್ಲಿ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜುಗೆ ಬಿಟ್ಟುಕೊಟ್ಟು, ಬ್ಯಾಟಿಂಗ್ ಮೇಲೆ ಮಾತ್ರ ಗಮನ ಹರಿಸುವ ‘ಇಂಪ್ಯಾಕ್ಟ್ ಸಬ್’ ಆಟಗಾರನಾಗಿ ಧೋನಿಯನ್ನು ಬಳಸಿಕೊಳ್ಳಲು ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ. ಕಳೆದ ಎರಡು ಸೀಸನ್ಗಳಲ್ಲಿಯೂ ಧೋನಿ ಕೊನೆಯ ಓವರ್ಗಳಲ್ಲಿ ಮಾತ್ರ ಬ್ಯಾಟಿಂಗ್ಗೆ ಇಳಿಯುವ ತಂತ್ರ ಅನುಸರಿಸಿದ್ದರು.
ಧೋನಿ ಅನುಪಸ್ಥಿತಿಯು ಮಧ್ಯಮ ಕ್ರಮಾಂಕದಲ್ಲಿ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಂತಹ ಯುವ ಆಟಗಾರರಿಗೆ ಅವಕಾಶದ ಬಾಗಿಲು ತೆರೆಯಲಿದೆ. 14.2 ಕೋಟಿ ರೂಪಾಯಿಗೆ ತಂಡ ಸೇರಿಕೊಂಡಿರುವ ಕಾರ್ತಿಕ್ ಶರ್ಮಾ ಅವರಿಂದ ಅಭಿಮಾನಿಗಳು ದೊಡ್ಡ ಮಟ್ಟದ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ಧೋನಿ ನಂತರದ ಚೆನ್ನೈ ತಂಡದ ಭವಿಷ್ಯ ಹೇಗಿರಲಿದೆ ಎಂಬುದಕ್ಕೆ ಮುಂಬರುವ ವಾರಗಳ ಪಂದ್ಯಗಳು ಸುಳಿವು ನೀಡಲಿವೆ.
ಧೋನಿಗೆ ಇದೇ ಕೊನೆಯ ಐಪಿಎಲ್:
ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ 2020ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರೂ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2023ರಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಇನ್ನು 2026ರ ಐಪಿಎಲ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಅಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.