
ನಾಡಪ್ರಭು ಕೆಂಪೇಗೌಡರು ನಿರ್ಮಿಸುತ್ತಿದ್ದ ಬೆಂಗಳೂರು ಕೋಟೆಯ ಬಾಗಿಲು ಪದೇ ಪದೇ ಕುಸಿಯುತ್ತಿತ್ತು. ಇದನ್ನು ಸರಿಪಡಿಸಲು, ಅವರ ಗರ್ಭಿಣಿ ಸೊಸೆ ಲಕ್ಷ್ಮೀದೇವಿಯವರು ತಮ್ಮನ್ನೇ ಬಲಿದಾನ ಮಾಡಿಕೊಂಡರು.ಈ ತ್ಯಾಗದಿಂದಾಗಿ ಕೋಟೆಯು ಸುಭದ್ರವಾಗಿ ನಿಂತಿದ್ದು, ಅವರ ಸ್ಮಾರಕಗಳು ಇಂದಿಗೂ ಬೆಂಗಳೂರಿನಲ್ಲಿವೆ.
ಬೆಂಗಳೂರು (ಫೆ.10): ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಸುಂದರ ನಗರದ ಭದ್ರ ಬುನಾದಿಯ ಹಿಂದೆ ಕೇವಲ ಕಲ್ಲು-ಮಣ್ಣುಗಳಿಲ್ಲ, ಬದಲಾಗಿ ಒಂದು ಮಹಾನ್ ತ್ಯಾಗದ ರಕ್ತದ ಕಥೆಯಿದೆ. ಬೆಂಗಳೂರಿನ ಕೋಟೆ ಇಂದಿಗೂ ಸುಭದ್ರವಾಗಿ ನಿಂತಿದೆ ಎಂದರೆ ಅದಕ್ಕೆ ಅಂದು ಕೋರಮಂಗಲ ಗ್ರಾಮದಿಂದ ಕೆಂಪೇಗೌಡರ ಮನೆಗೆ ಸೊಸೆಯಾಗಿ ಬಂದ ‘ಲಕ್ಷ್ಮೀದೇವಿ’ ಎಂಬ ವೀರವನಿತೆಯ ಆತ್ಮಾರ್ಪಣೆಯೇ ಕಾರಣ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸತ್ಯ.
ಕೋಟೆ ಬಾಗಿಲಿಗೆ ಎದುರಾದ ವಿಘ್ನ:
ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬಲಿಷ್ಠವಾದ ಕೋಟೆಯನ್ನು ಕಟ್ಟಲು ಆರಂಭಿಸಿದ ಕಾಲವದು. ಕೋಟೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು. ಆದರೆ, ಒಂದು ವಿಚಿತ್ರ ಸಮಸ್ಯೆ ಕೆಂಪೇಗೌಡರನ್ನು ಚಿಂತೆಗೀಡು ಮಾಡಿತ್ತು. ಕೋಟೆಯ ‘ದಿಡ್ಡಿ ಬಾಗಿಲನ್ನು’ ಎಷ್ಟು ಬಾರಿ ಭದ್ರವಾಗಿ ನಿಲ್ಲಿಸಿದರೂ, ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ಅದು ಕುಸಿದು ಬಿದ್ದಿರುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಈ ವಿಘ್ನ ನಿವಾರಣೆಯಾಗಲಿಲ್ಲ.
ಜ್ಯೋತಿಷಿಯ ಭವಿಷ್ಯ ಮತ್ತು ಕೆಂಪೇಗೌಡರ ನಿರಾಕರಣೆ:
ಸಮಸ್ಯೆ ಬಗೆಹರಿಯದಿದ್ದಾಗ ಕೆಂಪೇಗೌಡರು ಜ್ಯೋತಿಷಿಗಳ ಮೊರೆ ಹೋದರು. ಆಗ ಜ್ಯೋತಿಷಿಗಳು, ‘ಯಾವುದಾದರೂ ಗರ್ಭಿಣಿ ಹೆಣ್ಣನ್ನು ಬಲಿ ಕೊಟ್ಟರೆ ಮಾತ್ರ ಈ ದಿಡ್ಡಿ ಬಾಗಿಲು ಭದ್ರವಾಗಿ ನಿಲ್ಲಲು ಸಾಧ್ಯ’ ಎಂಬ ಭೀಕರ ಪರಿಹಾರವನ್ನು ಸೂಚಿಸಿದರು. ಪ್ರಜಾಪ್ರೇಮಿ ಮತ್ತು ಧರ್ಮನಿಷ್ಠ ಅರಸರಾಗಿದ್ದ ಕೆಂಪೇಗೌಡರು ಈ ಪ್ರಸ್ತಾಪವನ್ನು ಕೇಳಿ ಬೆಚ್ಚಿಬಿದ್ದರು. ‘ಒಂದು ಬಾಗಿಲಿಗಾಗಿ ಅಬಲೆಯ ಪ್ರಾಣ ತೆಗೆಯಲು ಸಾಧ್ಯವಿಲ್ಲ’ ಎಂದು ಕಟ್ಟುನಿಟ್ಟಾಗಿ ಈ ಸಲಹೆಯನ್ನು ತಿರಸ್ಕರಿಸಿದರು.
ಸೊಸೆಯ ಮಹಾನ್ ತ್ಯಾಗ:
ಕೆಂಪೇಗೌಡರ ಈ ಆತಂಕವನ್ನು ಅವರ ಸೊಸೆ, ಕೋರಮಂಗಲದ ಮೂಲದ ಲಕ್ಷ್ಮೀದೇವಿಯವರು ಗಮನಿಸಿದರು. ಆಗ ಅವರು ಗರ್ಭಿಣಿಯಾಗಿದ್ದರು. ತನ್ನ ಮಾವ ಕಟ್ಟುತ್ತಿರುವ ನಗರದ ರಕ್ಷಣೆ ಹಾಗೂ ಪ್ರಜೆಗಳ ಹಿತದೃಷ್ಟಿಯಿಂದ ಕೋಟೆ ಭದ್ರವಾಗಿರಬೇಕೆಂದು ಅವರು ದೃಢಸಂಕಲ್ಪ ಮಾಡಿದರು. ಯಾರಿಗೂ ತಿಳಿಯದಂತೆ ಸರಿಸೂರ್ಯನ ಹೊತ್ತಿನಲ್ಲಿ ಕೋಟೆ ಬಾಗಿಲ ಬಳಿ ತೆರಳಿ, ತನ್ನನ್ನು ತಾನೇ ಅರ್ಪಿಸಿಕೊಂಡರು. ಮಾರನೇ ದಿನ ಬೆಳಿಗ್ಗೆ ಕೆಂಪೇಗೌಡರು ಬಂದು ನೋಡಿದಾಗ, ಅಲುಗಾಡದಂತೆ ನಿಂತಿದ್ದ ದಿಡ್ಡಿ ಬಾಗಿಲು ಕಂಡು ಆಶ್ಚರ್ಯಚಕಿತರಾದರು. ಆದರೆ, ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೊಸೆಯನ್ನು ನೋಡಿ ದಿಗ್ಭ್ರಾಂತರಾಗಿ ಕಣ್ಣೀರು ಸುರಿಸಿದರು.
ಇಂದಿಗೂ ಇದೆ ಸ್ಮಾರಕ:
ಲಕ್ಷ್ಮೀದೇವಿಯವರ ಈ ಅಪ್ರತಿಮ ತ್ಯಾಗಕ್ಕೆ ಗೌರವ ಸಲ್ಲಿಸಲು ಕೋರಮಂಗಲದ ಜನತೆ ಆಕೆಗಾಗಿ ಒಂದು ದೇಗುಲವನ್ನು ನಿರ್ಮಿಸಿದರು. ಇಂದಿಗೂ ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್‌ನಲ್ಲಿ ಲಕ್ಷ್ಮೀದೇವಿಯವರ ಸಮಾಧಿ ಮತ್ತು ಸ್ಮಾರಕವಿದೆ. ಅಲ್ಲಿರುವ ಶಿಲಾಶಾಸನಗಳಲ್ಲಿ ಈ ತ್ಯಾಗದ ಸಾರಾಂಶವನ್ನು ಉಲ್ಲೇಖಿಸಲಾಗಿದೆ. ಕೇವಲ ಕೋರಮಂಗಲಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಈಕೆ ‘ತ್ಯಾಗದ ದೇವತೆ’. ಬೆಂಗಳೂರಿನ ಇತಿಹಾಸ ಕೇವಲ ಕಟ್ಟಡಗಳದ್ದಲ್ಲ, ಇಂತಹ ವೀರವನಿತೆಯರ ತ್ಯಾಗದ ಮೇಲೆ ಈ ನಗರ ನಿಂತಿದೆ ಎಂಬುದನ್ನು ಇಂದಿನ ಪೀಳಿಗೆ ಸ್ಮರಿಸಬೇಕಿದೆ.
Scroll to load tweet…
ಗ್ರೇಟರ್ ಬೆಂಗಳೂರು ಕೇಂದ್ರ ಕಚೇರಿ ಆವರಣದಲ್ಲಿಯೂ ಇದೆ ಪ್ರತಿಮೆ:
ಇನ್ನು ತ್ಯಾಗಮಯಿ ಲಕ್ಷ್ಮೀದೇವಿ ಅವರ ಎತ್ತರದ ಪ್ರತಿಮೆಯನ್ನು ಗ್ರೇಟರ್ ಬೆಂಗಳೂರು ಕೇಂದ್ರ ಕಚೇರಿಯ ಆವರಣದಲ್ಲಿ ದೊಡ್ಡದಾಗಿ ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬಗಳು ಹಾಗೂ ಬೆಂಗಳೂರು ಕರಗ ಮಹೋತ್ಸವದ ವೇಳೆಯೂ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಕಟ್ಟಲು ಪ್ರಾಣಾರ್ಪಣೆ ಮಾಡಿದ ಲಕ್ಷ್ಮೀದೇವಿಗೆ ಎಲ್ಲ ಬೆಂಗಳೂರಿಗರು ಒಂದು ಬಾರಿ ನಮಿಸಲೇಬೇಕು. ನಾವಿಲ್ಲಿ ಜೀವನ ಕಟ್ಟಿಕೊಳ್ಳುವುದಕ್ಕೆ ಅವರ ತ್ಯಾಗದ ಋಣ ನಮ್ಮ ಮೇಲಿದೆ. ಹೀಗಾಗಿ, ಲಕ್ಷ್ಮೀದೇವಿ ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದು ನಿರಂಜನ್ ರಾಜ್ ಅರಸ್ ಅವರು ಫೋಟೋ ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಹಲವು ಪುಸ್ತಕಗಳಲ್ಲಿಯೂ ಉಲ್ಲೇಖ ಮಾಡಲಾಗಿದೆ.