ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ! | Chikkamagaluru Moral Policing Dalit Minor Harassed Muslim Youths Arrested Atrocity Case Sat

ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ! | Chikkamagaluru Moral Policing Dalit Minor Harassed Muslim Youths Arrested Atrocity Case Sat



ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ! | Chikkamagaluru Moral Policing Dalit Minor Harassed Muslim Youths Arrested Atrocity Case Sat

ಚಿಕ್ಕಮಗಳೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮುಸ್ಲಿಂ ಸ್ನೇಹಿತೆಯನ್ನು ಮನೆಗೆ ಬಿಡಲು ಹೋದ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು (ಫೆ.19): ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ಮಹಾಮಾರಿ ಮತ್ತೆ ತಲೆ ಎತ್ತಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸ್ನೇಹಿತೆಯನ್ನ ಮನೆಗೆ ಬಿಡಲು ಹೋದ ಹಿಂದೂ ಧರ್ಮದ ಅಪ್ರಾಪ್ತ ಬಾಲಕನನ್ನ ಅನ್ಯಕೋಮಿನ ಯುವಕರ ಗುಂಪೊಂದು ಅಡ್ಡಗಟ್ಟಿ, ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ನ್ಯಾಯ ಕೇಳಲು ಹೋದ ಬಾಲಕನ ತಾಯಿ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಡುತ್ತಿದ್ದಾಗ ಪೊಲೀಸ್ ಠಾಣೆಯ ಮುಂಭಾಗವೇ ಆಕೆಯ ಮೇಲೆ ಮುಸ್ಲಿಂ ಸಮುದಾಯದ ಗುಂಪೊಂದು ಮುಗಿಬಿದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಘಟನೆಯ ಹಿನ್ನೆಲೆ:

ನಗರದ ಸಂತೇ ಮೈದಾನದ ನಿವಾಸಿಯಾದ ದಲಿತ ಸಮುದಾಯದ ಅಪ್ರಾಪ್ತ ಯುವಕ ಹಾಗೂ ಮುಸ್ಲಿಂ ಸಮುದಾಯದ ಅಪ್ರಾಪ್ತ ಯುವತಿ ಇಬ್ಬರೂ ಸ್ನೇಹಿತರು. ಎರಡೂ ಕುಟುಂಬಗಳ ನಡುವೆ ಉತ್ತಮ ಒಡನಾಟವಿದ್ದು, ಯುವತಿ ಆಗಾಗ ಬಾಲಕನ ಮನೆಗೆ ಬರುತ್ತಿದ್ದಳು. ಘಟನೆಯ ದಿನ ಯುವತಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಆಕೆಯ ಕೋರಿಕೆಯಂತೆ ಬಾಲಕ ತನ್ನ ಬೈಕ್‌ನಲ್ಲಿ ಆಕೆಯನ್ನು ಮನೆಗೆ ಬಿಡಲು ಹೋಗಿದ್ದನು.

ಇದು ಕೇವಲ ಮಾನವೀಯತೆಯ ಆಧಾರದ ಮೇಲೆ ಮಾಡಿದ ಸಹಾಯವಾಗಿತ್ತು. ಆದರೆ, ಈ ಜೋಡಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಅನ್ಯಕೋಮಿನ ಸುಮಾರು 30 ಯುವಕರ ತಂಡ ರಸ್ತೆ ಮಧ್ಯೆಯೇ ಅವರನ್ನ ಅಡ್ಡಗಟ್ಟಿದೆ. ‘ಮುಸ್ಲಿಂ ಹುಡುಗಿ ಜೊತೆ ನಿನಗೇನು ಕೆಲಸ?’ ಎಂದು ಪ್ರಶ್ನಿಸಿ ಬಾಲಕನಿಗೆ ಬೆದರಿಕೆ ಹಾಕಿದೆ. ಈ ವೇಳೆ ಭಯಭೀತಳಾದ ಬಾಲಕಿ ಬೈಕ್‌ನಿಂದ ಕೆಳಗಿಳಿದು ಮನೆಯ ಕಡೆಗೆ ಅಲ್ಲಿಂದ ಹೊರಟು ಹೋಗಿದ್ದಾಳೆ.

ಮನೆ ಮುಂದೆ ಸೇರಿದ 60ಕ್ಕೂ ಹೆಚ್ಚು ಜನರ ಗುಂಪು:

ರಸ್ತೆ ಮಧ್ಯೆ ಗಲಾಟೆ ಬೇಡ ಎಂಬ ಉದ್ದೇಶದಿಂದ ಬಾಲಕನ ತಾಯಿ ವಿಚಾರವನ್ನ ಮಾತನಾಡಲು ಯುವಕರನ್ನು ಮನೆಗೆ ಕರೆತಂದಿದ್ದಾರೆ. ಆದರೆ ಬಾಲಕನ ಮನೆ ಬಳಿ ನೋಡನೋಡುತ್ತಿದ್ದಂತೆ 60ಕ್ಕೂ ಹೆಚ್ಚು ಮುಸ್ಲಿಂ ಯುವಕರು ಜಮಾಯಿಸಿದ್ದಾರೆ. ಅವರಲ್ಲಿ 2-3 ಯುವಕರು ಬಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಪೊಲೀಸ್ ಠಾಣೆಯಲ್ಲೇ ಹೈಡ್ರಾಮಾ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ನಯಾಜ್, ತಬ್ರೀಜ್, ಹನೀಫ್ ಸೇರಿದಂತೆ ಒಟ್ಟು 8 ಜನರ ಮೇಲೆ ಅಟ್ರಾಸಿಟಿ (ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ), ದೊಂಬಿ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಇನ್ನೊಂದು ಬೆಚ್ಚಿಬೀಳಿಸುವ ಬೆಳವಣಿಗೆಯೆಂದರೆ, ಬಾಲಕನ ತಾಯಿ ಪೊಲೀಸ್ ಠಾಣೆ ಮುಂಭಾಗ ಮಾಧ್ಯಮಗಳಿಗೆ ಘಟನೆಯ ಬಗ್ಗೆ ವಿವರಿಸುವಾಗ, ಅಲ್ಲಿ ನೆರೆದಿದ್ದ ಮುಸ್ಲಿಂ ಸಮುದಾಯದ ಗುಂಪು ಆಕೆಯ ಮೇಲೆ ಮುಗಿಬಿದ್ದಿದೆ. ‘ನನ್ನ ಮಗ ಮಾಡಿದ ತಪ್ಪಾದರೂ ಏನು? ಆ ಹುಡುಗಿ ನಮ್ಮ ಮನೆಗೆ ಬರುತ್ತಿದ್ದಳು, ಆಕೆಗೆ ಹುಷಾರಿಲ್ಲ ಅಂದಿದ್ದಕ್ಕೆ ಮನೆಗೆ ಬಿಡಲು ಹೋಗಿದ್ದ ಅಷ್ಟೆ. ಮಧ್ಯದಲ್ಲಿ ಇರುವವರು ಸಣ್ಣ ವಿಷಯವನ್ನ ದೊಡ್ಡದು ಮಾಡುತ್ತಿದ್ದಾರೆ’ ಎಂದು ಮಹಿಳೆ ಹೇಳುತ್ತಿದ್ದಂತೆ ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಲಾಠಿ ಪ್ರಹಾರ ಮತ್ತು ಕೇಸ್ ಹಾಕುವ ಎಚ್ಚರಿಕೆ ನೀಡಿ ಗುಂಪನ್ನು ಚದುರಿಸಿದ್ದಾರೆ.

ಎಸ್ಪಿ ಖಡಕ್ ಎಚ್ಚರಿಕೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮತ್ತು ಎಎಸ್ಪಿ ಅವರು ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿದ್ದು, ತನಿಖೆಯ ಉಸ್ತುವಾರಿ ವಹಿಸಿದ್ದಾರೆ. “ಕಾಫಿನಾಡಿನಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್ಪಿ ಅವರು ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಸದ್ಯ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.



Source link

Leave a Reply

Your email address will not be published. Required fields are marked *