
ಪಾಕಿಸ್ತಾನದಲ್ಲಿ ಅಮೆರಿಕದೊಂದಿಗಿನ ಮಾತುಕತೆ ವಿಫಲವಾದ ನಂತರ, ಇರಾನ್ ನಿಯೋಗವು ಕ್ಷಿಪಣಿ ದಾಳಿಯ ಬೆದರಿಕೆಯಿಂದಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಬದಲಿಸಿತು. ಟೆಹ್ರಾನ್‌ಗೆ ಸುರಕ್ಷಿತವಾಗಿ ಮರಳಲು ಅವರು ವಿಮಾನ, ರೈಲು ಮತ್ತು ಬಸ್‌ಗಳನ್ನು ಬಳಸಿದರು.
ಬೆದರಿಕೆ ಇದ್ದ ಕಾರಣ ಮಾರ್ಗವೇ ಬದಲು । ವಂಚಕ ಅಮೆರಿಕದ ಮೇಲೆ ನಂಬಿಕೆ ಇಲ್ಲ
ಟೆಹ್ರಾನ್: ಪಾಕಿಸ್ತಾನದ ರಾಜಧಾನಿಯಲ್ಲಿ ಅಮೆರಿಕ ಜತೆಗಿನ ಸಂಧಾನ ಮಾತುಕತೆ ವಿಫಲವಾದ ಬಳಿಕ ಇರಾನ್‌ಗೆ ಮರಳಲಿದ್ದ ನಿಯೋಗಕ್ಕೆ ಬೆದರಿಕೆ ಇದ್ದ ಕಾರಣ ಅದು ನಡುನಡುವೆ ವಿಮಾನ ಬದಲಿಸಿ, ರೈಲು, ಬಸ್ ಪ್ರಯಾಣ ಮಾಡಿ ಸ್ವದೇಶಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ. ಈ ವಿಷಯವನ್ನು ನಿಯೋಗದೊಂದಿಗೆ ಬಂದಿದ್ದ ಇರಾನಿನ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಮರಾಂಡಿ ಬಾಯ್ಬಿಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮರಾಂಡಿ, ‘ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಸಂಸತ್ ಸ್ಪೀಕರ್ ಘಾಲಿಬಾಫ್ ಜತೆ ಮಾತುಕತೆಗೆಂದು ಇಸ್ಲಾಮಾಬಾದ್‌ಗೆ ಹೊರಟಿದ್ದಾಗಲೇ ನಾವಿದ್ದ ವಿಮಾನದ ಮೇಲೆ ದಾಳಿಯ ಬೆದರಿಕೆ ಬಂದಿದ್ದವು. ಆದ್ದರಿಂದ ಮರಳುವಾಗ ವಿಮಾನದ ಮೇಲೆ ಕ್ಷಿಪಣಿ ದಾಳಿ ಭೀತಿಯಿಂದ ನಾವು ಒಂದೇ ವಿಮಾನದಲ್ಲಿ ಟೆಹ್ರಾನ್‌ಗೆ ಪ್ರಯಾಣಿಸಲಿಲ್ಲ. ಬೇರೊಂದು ವಿಮಾನ ಹತ್ತಿ ಮಶಾದ್‌ಗೆ ಹೋದೆವು. ಅಲ್ಲಿಂದ ಟ್ರೈನ್, ಕಾರ್, ಬಸ್‌ನಲ್ಲಿ ಟೆಹ್ರಾನ್ ತಲುಪಿದೆವು’ ಎಂದು ಹೇಳಿದ್ದಾರೆ.
ಜತೆಗೆ ಅಮೆರಿಕವನ್ನು ‘ವಂಚಕ’ ಎಂದು ಕರೆದ ಮರಾಂಡಿ, ‘ನಾವು ಮತುಕತೆಯಲ್ಲಿ ತೊಡಗಿದ್ದ ವೇಳೆಯೂ ಅಲ್ಲ ನಮ್ಮ ಸೇನೆ ದಾಳಿಗೆ ತಯಾರಿ ನಡೆಸುತ್ತಲೇ ಇತ್ತು’ ಎಂದು ಹೇಳಿದ್ದಾರೆ.