‘ಬಾರಿಶ್ ಮನಿ’ ಅಥವಾ ಹಣದ ಮಳೆ ಎಂಬ ವಿಚಿತ್ರ ಕಥೆ ನಂಬಿಸಿ, 1 ಲಕ್ಷಕ್ಕೆ 3 ಲಕ್ಷ ನೀಡುವುದಾಗಿ ಹೇಳಿ ಕಂಟ್ರ್ಯಾಕ್ಟರ್ ಒಬ್ಬರಿಗೆ 28 ಲಕ್ಷ ರೂ. ವಂಚಿಸಿದ ಗ್ಯಾಂಗ್ ಅನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಈ ಜಾಲದಿಂದ ಒಟ್ಟು 40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು (ಮಾ.24): ಮನಿ ಡಬ್ಲಿಂಗ್ (ಹಣ ದ್ವಿಗುಣ) ಮಾಡುವ ಆಸೆಗೆ ಬಿದ್ದು ಜನ ಹಣ ಕಳೆದುಕೊಳ್ಳುವುದು ಹೊಸದೇನಲ್ಲ. ಆದರೆ, ಇಲ್ಲೊಂದು ಗ್ಯಾಂಗ್ ‘ಬಾರಿಶ್ ಮನಿ’ (ಹಣದ ಮಳೆ) ಎಂಬ ವಿಚಿತ್ರ ಕಟ್ಟುಕಥೆ ನಂಬಿಸಿ ಕಂಟ್ರ್ಯಾಕ್ಟರ್ ಒಬ್ಬರಿಗೆ ಬರೋಬ್ಬರಿ 28 ಲಕ್ಷ ರೂಪಾಯಿ ವಂಚಿಸಿದೆ. ಈ ಪ್ರಕರಣವನ್ನು ಬೇಧಿಸಿರುವ ಬಾಗಲಗುಂಟೆ ಪೊಲೀಸರು, ಮೂವರು ಕಿರಾತಕರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ‘ಬಾರಿಶ್ ಮನಿ’ ಸ್ಕ್ಯಾಮ್?
ಬಂಧಿತ ಆರೋಪಿಗಳಾದ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್ ಎಂಬುವವರು ಸೇರಿ ಈ ಸಂಚು ರೂಪಿಸಿದ್ದರು. ಇವರು ಜನರಿಗೆ ಒಂದು ಲಕ್ಷ ರೂಪಾಯಿ ಕೊಟ್ಟರೆ, ಅದಕ್ಕೆ ಬದಲಾಗಿ 3 ಲಕ್ಷ ರೂಪಾಯಿ ಅಸಲಿ ಹಣ ನೀಡುವುದಾಗಿ ನಂಬಿಸುತ್ತಿದ್ದರು. ‘ನಾವು ಕೊಡುವ ಹಣ 9 ತಿಂಗಳ ನಂತರ ಪೇಪರ್ ಆಗಿ ಬದಲಾಗುತ್ತದೆ, ಅಷ್ಟರೊಳಗೆ ನೀವು ಇದನ್ನು ಖರ್ಚು ಮಾಡಬೇಕು’ ಎಂಬ ವಿಚಿತ್ರ ಷರತ್ತನ್ನು ವಿಧಿಸುತ್ತಿದ್ದರು. ಇದನ್ನು ನಂಬಿದವರಿಗೆ ‘ಬಾರಿಶ್ ಮನಿ’ ಅಥವಾ ಹಣದ ಮಳೆ ಹೆಸರಲ್ಲಿ ವಂಚಿಸುತ್ತಿದ್ದರು.
ಕಂಟ್ರ್ಯಾಕ್ಟರ್‌ಗೆ 28 ಲಕ್ಷದ ಪಂಗನಾಮ!
ಈ ಕಿರಾತಕರ ಮಾತನ್ನು ನಂಬಿದ ಕಂಟ್ರ್ಯಾಕ್ಟರ್ ರಮೇಶ್ ಎಂಬುವವರು 28.60 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಲು ಮುಂದಾಗಿದ್ದರು. ಮಾತುಕತೆಯಂತೆ ಬೆಂಗಳೂರಿನ 8ನೇ ಮೈಲಿ ಬಳಿ ರಮೇಶ್ ಹಣ ಹಿಡಿದು ಬಂದಿದ್ದರು. ಆರೋಪಿಗಳು ಹಣವನ್ನು ಚೆಕ್ ಮಾಡಿಕೊಂಡು ಬರುತ್ತೇವೆ ಎಂದು ರಮೇಶ್ ಅವರಿಂದ 28 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಹಣ ಕೈ ಸೇರುತ್ತಿದ್ದಂತೆಯೇ ಆರೋಪಿಗಳ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ. ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆಯೇ ರಮೇಶ್ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

40 ಲಕ್ಷ ಹಣ ರಿಕವರಿ ಮಾಡಿದ ಪೊಲೀಸರು!
ಪೊಲೀಸರ ವಿಚಾರಣೆ ವೇಳೆ ಈ ಗ್ಯಾಂಗ್ ಕೇವಲ ರಮೇಶ್ ಅವರಿಗೆ ಮಾತ್ರವಲ್ಲದೆ, ಮತ್ತೊಬ್ಬ ವ್ಯಕ್ತಿಗೂ ಇದೇ ಮಾದರಿಯಲ್ಲಿ 18 ಲಕ್ಷ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳಿಂದ ಒಟ್ಟು 40 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇವೆ ಅಥವಾ ಅಗ್ಗದ ದರದಲ್ಲಿ ಹಣ ನೀಡುತ್ತೇವೆ ಎಂದು ಹೇಳುವವರನ್ನು ನಂಬಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸದ್ಯ ಬಾಗಲಗುಂಟೆ ಪೊಲೀಸರು ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.