Karnataka irrigation project ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ-ಸಿಎಂ | Karnataka Cm Siddaramaiah On Karnataka Irrigation Project Funding

Karnataka irrigation project ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ-ಸಿಎಂ | Karnataka Cm Siddaramaiah On Karnataka Irrigation Project Funding



Karnataka irrigation project ಕೇಂದ್ರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ-ಸಿಎಂ | Karnataka Cm Siddaramaiah On Karnataka Irrigation Project Funding

2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ₹22,436 ಕೋಟಿ ಅನುದಾನ ಘೋಷಿಸಲಾಗಿದೆ. ಈ ಮೂಲಕ ಕೃಷ್ಣಾ, ಕಾವೇರಿ ಸೇರಿದಂತೆ ನದಿ ಕಣಿವೆಗಳಲ್ಲಿ 75 ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು, ಬಾಕಿ ಯೋಜನೆಗಳನ್ನು ಪೂರ್ಣಗೊಳಿಸುವುದು ಪ್ರಮುಖ ಗುರಿ ಹೊಂದಲಾಗಿದೆ.

ಬೆಂಗಳೂರು (ಮಾ.7) ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ಇತರ ನದಿ ಕಣಿವೆಗಳಲ್ಲಿ ₹8,045 ಕೋಟಿ ಮೊತ್ತದ 75 ನೀರಾವರಿ ಕಾಮಗಾರಿ ಅನುಷ್ಠಾನ ಸೇರಿದಂತೆ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ₹22,436 ಕೋಟಿ ಅನುದಾನ ಘೋಷಿಸಲಾಗಿದೆ.

ರಾಜ್ಯದ ನೀರಾವರಿ ಕ್ಷೇತ್ರದಲ್ಲಿನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜತೆಗೆ ಹೊಸ ಕಾಮಗಾರಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ. ಪ್ರಮುಖವಾಗಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕೂ ನಿಗಮಗಳಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ 12 ನೀರಾವರಿ ಯೋಜನೆಗಳು, 22 ಕೆರೆ ತುಂಬುವ ಯೋಜನೆಗಳು ಮತ್ತು ಮೂರು ಆಧುನೀಕರಣ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ಇತರ ನದಿ ಕಣಿವೆಗಳಲ್ಲಿ ₹8,045 ಕೋಟಿ ಮೊತ್ತದ 75 ನೀರಾವರಿ ಕಾಮಗಾರಿ ಅನುಷ್ಠಾನ, ರಾಜ್ಯದ ಕಾಡಾ ಪ್ರಾಧಿಕಾರದಡಿ ಹತ್ತಿಕುಣಿ, ತುಂಗಭದ್ರಾ ಎಡದಂಡೆ ಶಾಖಾ ಕಾಲುವೆ ಅಡಿಯಲ್ಲಿನ 4,745 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆ ದಕ್ಷತೆ ಹೆಚ್ಚಿಸಲು ಪ್ರೆಷರೈಸ್ಡ್‌ ಪೈಪ್ಡ್‌ ನೆಟ್ವರ್ಕ್‌ ಪದ್ಧತಿ ಅಳವಡಿಸಿ ನೀರಾವರಿ ವ್ಯವಸ್ಥೆ ಆಧುನೀಕರಿಸಲಾಗುವುದು ಎಂದು ಹೇಳಲಾಗಿದೆ.

ಚಾಮರಾಜನಗರದ ಹನೂರು ತಾಲೂಕಿನ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಮತ್ತು 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ₹490 ಕೋಟಿ ವೆಚ್ಚದಲ್ಲಿ ಉಡುತೊರೆಹಳ್ಳ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಹಾಗೂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಅಡಿ ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿಎಂಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಬೃಹತ್‌ ಯೋಜನೆಗಳಿಗೆ ವೇಗ:

ಮೇಕೆದಾಟು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಶೀಘ್ರದಲ್ಲಿಯೇ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ. ಜತೆಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಏತ ನೀರಾವರಿ ಯೋಜನೆಯ 2ನೇ ಹಂತದ ಬಾಕಿ ಇರುವ 18.73 ಕಿಮೀ ಉದ್ದದ ಕಾಲುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು ಹಾಗೂ ಹೆಚ್ಚುವರಿ ನೀರು ಸಂಗ್ರಹಿಸಿ ಬಳಸಿಕೊಳ್ಳಲು ಕೊರಟಗೆರೆ ತಾಲೂಕಿನ ವಡೇರಹಳ್ಳಿ ಬಳಿ 1.2 ಟಿಎಂಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.

ಕೇಂದ್ರದಿಂದ ₹5,300 ಕೋಟಿ ಅನುದಾನ ಬರದಿದ್ದರೂ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿನ ಕಾಮಗಾರಿ ಕೈಗೊಳ್ಳಲಾಗುವುದು ಎಂದು ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರ ಭಾಗವಾಗಿ 135 ಕಿ,ಮೀ. ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಅದರ ಅಡಿಯಲ್ಲಿನ ಫೀಡರ್‌ ಕಾಮಗಾರಿಗಳನ್ನು ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಲಾಗಿದೆ. ಹಾಗೆಯೇ, ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಿಸಲು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ತುಂಗಭದ್ರಾ ಮಂಡಳಿಯ ಅನುಮತಿಯೊಂದಿಗೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.

3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ, ಆ ಪ್ರಕ್ರಿಯೆಗೆ ಎಷ್ಟು ಅನುದಾನ ಮೀಸಲಿಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

ಕಳಸಾ-ಬಂಡೂರಾ ನಾಲಾ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಅರಣ್ಯ ತೀರುವಳಿ ನೀಡುವಲ್ಲಾಗುತ್ತಿರುವ ವಿಳಂಬದ ಬಗ್ಗೆ ಬಜೆಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಈ ವಿಳಂಬದಿಂದಾಗಿ ರಾಜ್ಯದ ಸರ್ಕಾರದ ಹೊರೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದಲ್ಲಿ ಅರಣ್ಯ ತೀರುವಳಿ ಸೇರಿದಂತೆ ಮತ್ತಿತರ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಲಾಗಿದೆ.

(ಸಣ್ಣ ನೀರಾವರಿ)

342 ಕೆರೆಗಳ ಭರ್ತಿಗೆ ಕ್ರಮ

ಸಣ್ಣ ನೀರಾವರಿ ಇಲಾಖೆ ಮೂಲಕ 2026-27ನೇ ಸಾಲಿನಲ್ಲಿ ಅಂತರ್ಜಲ ವೃದ್ಧಿ ಮತ್ತು ನೀರಾವರಿಗಾಗಿ ಒಟ್ಟಾರೆ 342 ಕೆರೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆಗಳು ಮತ್ತು ಚಿಂತಾಮಣಿ ತಾಲೂಕಿನ 119 ಕೆರೆಗಳು ಸೇರಿ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ₹237 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು. ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳ ಎಚ್‌ಎನ್‌ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ನೀತನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಗಾಗಿ 140 ಕೋಟಿ ರು. ಮೀಸಲಿಡಲಾಗುವುದು. ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂಎಲ್‌ಡಿ ನೀರಿನಿಂದ 259 ಕೆರೆ ತುಂಬಿಸುವ ಮೂಲ ಯೋಜನೆ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 119 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ₹650 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಂರಕ್ಷಿಸಲು ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಲಾಗುವುದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾದಲ್ಲಿ ₹25 ಕೋಟಿ ವೆಚ್ಚದಲ್ಲಿ ಕೆರೆಗಳ ಆಧುನೀಕರಣ, ಅಣೆಕಟ್ಟು, ಪಿಕ್‌ಅಪ್‌, ಚೆಕ್‌ ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ.

ಪಾಯಿಂಟ್ಸ್‌:

*ರಾಜ್ಯದ ನದಿ ಕಣಿವೆಗಳಲ್ಲಿ 8,045 ಕೋಟಿ ರು. ಮೊತ್ತದ 75 ನೀರಾವರಿ ಕಾಮಗಾರಿ ಅನುಷ್ಠಾನ

*ಚಾಲ್ತಿ ಕಾಮಗಾರಿಗಳನ್ನು ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು

*ಕಳಸಾ-ಬಂಡೂರಾ ನಾಲಾ, ಮೇಕೆದಾಟು ಸೇರಿ ಬೃಹತ್ ಯೋಜನೆಗಳ ಅನುಮತಿಗೆ ಕೇಂದ್ರದ ಮೇಲೆ ಒತ್ತಡ

*ವಿವಿಧ ಯೋಜನೆ ಅಡಿ 342 ಕೆರೆಗಳ ಭರ್ತಿಗೆ ಕ್ರಮ



Source link

Leave a Reply

Your email address will not be published. Required fields are marked *