ಸಿದ್ದರಾಮಯ್ಯ ಎದುರಲ್ಲೇ ‘ಜಾರಕಿಹೊಳಿ ಮುಂದಿನ ಸಿಎಂ’ ಕೂಗು! ವಾಲ್ಕೀಕಿ ಜಾತ್ರೆಯಲ್ಲಿ ನಡೆದಿದ್ದೇನು? | Next Cm Slogans At Valmiki Jatra Davanagere What Did Siddaramaiah And Jarkiholi Say

ಸಿದ್ದರಾಮಯ್ಯ ಎದುರಲ್ಲೇ ‘ಜಾರಕಿಹೊಳಿ ಮುಂದಿನ ಸಿಎಂ’ ಕೂಗು! ವಾಲ್ಕೀಕಿ ಜಾತ್ರೆಯಲ್ಲಿ ನಡೆದಿದ್ದೇನು? | Next Cm Slogans At Valmiki Jatra Davanagere What Did Siddaramaiah And Jarkiholi Say



ಸಿದ್ದರಾಮಯ್ಯ ಎದುರಲ್ಲೇ ‘ಜಾರಕಿಹೊಳಿ ಮುಂದಿನ ಸಿಎಂ’ ಕೂಗು! ವಾಲ್ಕೀಕಿ ಜಾತ್ರೆಯಲ್ಲಿ ನಡೆದಿದ್ದೇನು? | Next Cm Slogans At Valmiki Jatra Davanagere What Did Siddaramaiah And Jarkiholi Say

ಡಿಸಿಎಂ ಡಿಕೆ ಶಿವಕುಮಾರ್‌ಗೆ 80 ಶಾಸಕರ ಬೆಂಬಲವಿದೆ ಎಂಬ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಸಿಎಂ ಕುರ್ಚಿಯ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂದು ತಾನೂ ಕಾಯುತ್ತಿದ್ದು, ಈ ಬಗ್ಗೆ ಹೈಕಮಾಂಡ್ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಾವಣಗೆರೆ (ಫೆ.10): 80 ಶಾಸಕರ ಬೆಂಬಲ ಎಂಬುದು ಪ್ರಶ್ನೆಯಲ್ಲ. ಸಮರ್ಥರಿಗೆ, ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ, ಅಂತಹ ಸಂದರ್ಭ ಇನ್ನೂ ಬಂದಿಲ್ಲ. ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.

ಹರಿಹರ ತಾ.ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ 80-90 ಶಾಸಕರ ಬೆಂಬಲವಿದ್ದು, ಅವರಿಗೆ ಸಿಎಂ ಆಗಲು ಅವಕಾಶ ನೀಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂಬ ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್‌ ಹೇಳಿಕೆಗೆ ತಿರುಗೇಟು ನೀಡಿದರು.

ಅಧಿಕಾರ ಹಂಚಿಕೆ ಸಂಬಂಧದ ಗೊಂದಲ ಬಗೆಹರಿಸಬೇಕು ಎಂಬ ಶಾಸಕ ಬಸವರಾಜ ಶಿವಗಂಗಾ ಆಗ್ರಹ ಕುರಿತು ಪ್ರತಿಕ್ರಿಯಿಸಿ, ಸಿಎಂ ಕುರ್ಚಿ ಗೊಂದಲ ಯಾವಾಗ ಬಗೆಹರಿಯುತ್ತದೆ ಎಂದು ನಾನೂ ಕಾಯುತ್ತಿದ್ದೇನೆ. ಅಧಿಕಾರ ಹಂಚಿಕೆ ವಿಚಾರವಾಗಿ ನಿರ್ಮಾಣವಾದ ಗೊಂದಲ ಶೀಘ್ರ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ, ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು, ಅಲ್ಲಿಯವರೆಗೆ ಕಾಯಬೇಕು. ಆದರೆ, ಈ ವಿಷಯವಾಗಿ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಇರಲು ಕಾರಣ ಏನು ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಶಾಸಕ ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎಂಬ ಡಿಕೆಶಿ ವ್ಯಂಗ್ಯದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಈ ವ್ಯವಸ್ಥೆಯಲ್ಲಿ ಡಿ.ಕೆ.ಶಿವಕುಮಾರ್‌ ಹೇಳಿದಂತೆ ಎಲ್ಲರೂ ಹೈಕಮಾಂಡೇ. ಎಲ್ಲರೂ ದೊಡ್ಡವರೇ. ಯಾರೂ ಸಣ್ಣವರು ಎಂದು ಹೇಳುವುದಕ್ಕೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಗೊಂದಲ ಬೇಗ ಬಗೆಹರಿಯಬೇಕು. ಕಾಂಗ್ರೆಸ್ ಗಟ್ಟಿಯಾಗಬೇಕು ಎಂದರು.

ಡಿಕೆಶಿ ಹೇಳಿಕೆಗೆ ಜಾರಕಿಹೊಳಿ ತಿರುಗೇಟು

ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ಹೈಕಮಾಂಡ್‌ ಒಪ್ಪಿಗೆ ಸಿಗಬೇಕಿದೆ. ತುಂಬಾ ಜನ ಸೀನಿಯರ್‌ಗಳಿದ್ದು, ಸಚಿವರಾಗಬೇಕೆಂದು ಅನೇಕರು ಕಾಯುತ್ತಿದ್ದಾರೆ. ಆದರೆ, ನಮ್ಮ ವರಿಷ್ಠರು ಹೇಳುವವರೆಗೂ ಕಾಯಬೇಕಾಗುತ್ತದೆ ಎಂದು ಹೇಳಿದರು.

ದಾವಣಗೆರೆ ವಾಲ್ಮೀಕಿ ಜನ ಜಾಗೃತಿ ಜಾತ್ರಾ ಮಹೋತ್ಸವ ವೇಳೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ಬಳಿಕ ವೇದಿಕೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿದರು. ಈ ವೇಳೆ ಕಾರ್ಯಕ್ರಮ ನಿರೂಪಿಸುತ್ತಿದ್ದ ನಿರೂಪಕರು, ಜಾರಕಿಹೊಳಿಗೆ ಸ್ವಾಗತ ಕೋರುತ್ತಾ, ‘ಭವಿಷ್ಯದ ನಾಯಕ, ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿ’ ಎಂದು ಸಂಬೋಧಿಸಿದರು. ಈ ವೇಳೆ ಶಿಳ್ಳೆ, ಚಪ್ಪಾಳೆ ಹಾಕಿ ಅಭಿಮಾನಿಗಳು ಹರ್ಷೋದ್ಘಾರ ವ್ಯಕ್ತಪಡಿಸಿದರು. ಬಳಿಕ, ಸಮಾರಂಭದಲ್ಲಿ ಸತೀಶ್‌ ಜಾರಕಿಹೊಳಿ ಮಾತನಾಡಿದರು. ಅವರ ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಅಭಿಮಾನಿಗಳು ‘ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ’ ಎಂದು ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಸಚಿವ ಮಹದೇವಪ್ಪ, ಯತೀಂದ್ರ ಮತ್ತಿತರರು ಉಪಸ್ಥಿತರಿದ್ದರು.



Source link

Leave a Reply

Your email address will not be published. Required fields are marked *