ಬೆಂಗಳೂರು (ಫೆ.18):ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಮತ್ತೆ ಸ್ಫೋಟಗೊಂಡಿದೆ. ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕಗಳ ಬಳಿ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಲಾರಿಗಳನ್ನು ತಡೆಹಿಡಿದಿರುವುದರಿಂದ ಬೆಂಗಳೂರು ‘ಗಾರ್ಬೇಜ್ ಸಿಟಿ’ಯಾಗುವ ಭೀತಿ ಎದುರಾಗಿದೆ. ಮಿಟ್ಟಗಾನಹಳ್ಳಿ, ಬಾಗಲೂರು ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ಕಿಚ್ಚು: ಎಲ್ಲೆಲ್ಲಿ ಅಡ್ಡಿ?

ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಮತ್ತು ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತೆರಳುತ್ತಿದ್ದ ಲಾರಿಗಳನ್ನು ಸ್ಥಳೀಯರು ತಡೆದಿದ್ದಾರೆ. ‘ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಮತ್ತು ಕಳೆದ ಎರಡು ವರ್ಷಗಳಿಂದ ಗ್ರಾಮದ ಅಭಿವೃದ್ಧಿಗೆ ಬಿಡಿಎ/ಜಿಬಿಎ ಅನುದಾನ ನೀಡಿಲ್ಲ’ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ. ಇದರ ಹಿಂದೆ ಸ್ಥಳೀಯ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಪ್ರೇರಣೆಯಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇತ್ತ ಬಾಗಲೂರಿನಲ್ಲಿ ಕಸದ ಲಾರಿ ಡಿಕ್ಕಿಯಾಗಿ ಬಾಲಕನೊಬ್ಬ ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಲಾರಿಗಳನ್ನು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಸವನ್ನು ದೊಡ್ಡಬಳ್ಳಾಪುರದ ಘಟಕಕ್ಕೆ ರವಾನಿಸಲು ಸೂಚಿಸಲಾಗಿತ್ತು. ಆದರೆ, ಅಲ್ಲಿಯೂ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮಂಕಲಾಳದ ಬಳಿ 150ಕ್ಕೂ ಹೆಚ್ಚು ಲಾರಿಗಳು ಸಾಲುಗಟ್ಟಿ ನಿಂತಿವೆ.

ಸರ್ಕಾರದ ವೈಫಲ್ಯಕ್ಕೆ ವಿಪಕ್ಷಗಳ ಆಕ್ರೋಶ

’ಬೆಂಗಳೂರಿನ ಕಸ ಎತ್ತಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದರೆ ನಗರದ ರಸ್ತೆಗಳೆಲ್ಲಾ ಕಸದ ಮಯವಾಗಲಿವೆ ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ‘ಸರ್ಕಾರ ಹೈಟೆಕ್ ತಂತ್ರಜ್ಞಾನದ ಮಾತನಾಡುತ್ತದೆಯೇ ಹೊರತು ಕಾರ್ಯರೂಪಕ್ಕೆ ತರುತ್ತಿಲ್ಲ. ಲ್ಯಾಂಡ್‌ಫಿಲ್‌ಗಳು ಸಾಮರ್ಥ್ಯ ಮೀರಿವೆ. ಇದರಿಂದ ಹೊರಬರುವ ಲಿಚೆಟ್ (ಕಸದ ನೀರು) ಅರ್ಕಾವತಿ, ಕುಮುದ್ವತಿ ಮತ್ತು ಎತ್ತಿನಹೊಳೆ ಜಲಾನಯನ ಪ್ರದೇಶಗಳಿಗೆ ಸೇರಿ ಪರಿಸರ ನಾಶವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಖಡಕ್ ವಾರ್ನಿಂಗ್: ಶಾಸಕರ ಮನೆ ಮುಂದೆ ಕಸ!

ಪ್ರತಿಭಟನೆಗಳಿಗೆ ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕಸ ವಿಲೇವಾರಿಗೆ ಅಡ್ಡಿಪಡಿಸುವವರು ಯಾರೇ ಆಗಲಿ, ಅವರ ವಿರುದ್ಧ ಯಾವುದೇ ಕರುಣೆ ಇಲ್ಲದೆ ‘ಎಸ್ಮಾ’ (ESMA) ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಶಾಸಕರು ಅಡ್ಡಿಪಡಿಸಿದರೆ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಮುಂದೆ ಕಸದ ಲೋಡ್ ಸುರಿಯಬೇಕಾಗುತ್ತದೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಕಸದ ವಿಲೇವಾರಿ ಸ್ಥಗಿತಗೊಂಡರೆ ಮನೆಗಳಲ್ಲಿ ಹಾಗೂ ರಸ್ತೆ, ಬೀದಿಗಳಲ್ಲಿ ಕಸ ಚೆಲ್ಲಾಡುತ್ತಾ ದುರ್ವಾಸನೆ ಬೀರಲಿದೆ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಸರ್ಕಾರ ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸಂಜೆ ವೇಳೆ ದಿಢೀರ್ ಸಭೆ ಕರೆದ ಜಿಬಿಎ:

ಬೆಳ್ಳಹಳ್ಳಿ ಹಾಗೂ ಮಿಟ್ಟಗಾನಹಳ್ಳಿಯ ಗ್ರಾಮಸ್ಥರ ಜೊತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ಸಭೆ ಮಾಡಿದ್ದಾರೆ. ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದ ಅಧಿಕಾರಿಗಳು ನೀವು ಕೇಳಿದ ಅನುದಾನವನ್ನು ನಾವು ಶೀಘ್ರವಾಗಿ ರಿಲೀಸ್ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದರ ಬೆನ್ನಲ್ಲಿಯೇ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದು ಕಸದ ಲಾರಿಗಳು ಕಸವನ್ನು ಸುರಿಯಲು ಅನುವು ಮಾಡಿಕೊಟ್ಟಿದ್ದಾರೆ. ನಾಳೆ ಬೆಳಿಗ್ಗೆ 6 ಗಂಟೆಗೆ ಎಂದಿನಂತೆ ಕಸ ಡಂಪ್ ಆಗಲಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Source link
ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು 'ಕಸದ ಕ್ರಾಂತಿ': ರಸ್ತೆಗಿಳಿದ ಲಾರಿಗಳಿಗೆ ದಿಗ್ಬಂಧನ; ಮನೆಗಳಲ್ಲಿ ದುರ್ವಾಸನೆ!