Greater Bengaluru ರಸ್ತೆಗುಂಡಿಗೆ ಮತ್ತಿಬ್ಬರು ಬಲಿ; ಕೆಲಸಕ್ಕೆ ಹೊರಟ ಮಹಿಳೆ, 2 ವರ್ಷದ ಮಗು ಸಾವು! | Bengaluru Road Negligence Claims Two Lives Woman And Toddler Killed In Pothole Accidents Sat

Greater Bengaluru ರಸ್ತೆಗುಂಡಿಗೆ ಮತ್ತಿಬ್ಬರು ಬಲಿ; ಕೆಲಸಕ್ಕೆ ಹೊರಟ ಮಹಿಳೆ, 2 ವರ್ಷದ ಮಗು ಸಾವು! | Bengaluru Road Negligence Claims Two Lives Woman And Toddler Killed In Pothole Accidents Sat



Greater Bengaluru ರಸ್ತೆಗುಂಡಿಗೆ ಮತ್ತಿಬ್ಬರು ಬಲಿ; ಕೆಲಸಕ್ಕೆ ಹೊರಟ ಮಹಿಳೆ, 2 ವರ್ಷದ ಮಗು ಸಾವು! | Bengaluru Road Negligence Claims Two Lives Woman And Toddler Killed In Pothole Accidents Sat

ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳು 24 ಗಂಟೆಗಳಲ್ಲಿ ಇಬ್ಬರ ಪ್ರಾಣ ತೆಗೆದಿವೆ. ಆಡುಗೋಡಿಯಲ್ಲಿ ಗುಂಡಿಗೆ ಮಹಿಳೆ ಬಲಿಯಾದರೆ, ಕೆ.ಆರ್.ಪುರಂನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಎರಡು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ.

ಬೆಂಗಳೂರು (ಫೆ.16): ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಹದಗೆಟ್ಟ ಸ್ಥಿತಿ ಅಮಾಯಕರ ಪ್ರಾಣಪಕ್ಷಿಯನ್ನು ಹಾರಿಸುತ್ತಲೇ ಇದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಳೆದ 24 ಗಂಟೆಗಳಲ್ಲಿ ಒಬ್ಬ ಮಹಿಳೆ ಹಾಗೂ ಕೇವಲ ಎರಡು ವರ್ಷದ ಪುಟ್ಟ ಮಗು ಬಲಿಯಾಗಿರುವುದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳು ಈಗ ರಸ್ತೆ ಗುಂಡಿಗಳ ಅಟ್ಟಹಾಸಕ್ಕೆ ಸ್ಮಶಾನ ಮೌನದಲ್ಲಿ ಮುಳುಗಿವೆ.

ಘಟನೆ 1: ಆಡುಗೋಡಿಯಲ್ಲಿ ಟಿಪ್ಪರ್‌ಗೆ ಬಲಿಯಾದ ಮಹಿಳೆ

ಮೊದಲ ಘಟನೆ ಆಡುಗೋಡಿಯ ಬಾಷ್ ಕಂಪನಿಯ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಆನೆಪಾಳ್ಯ ಮೂಲದ 49 ವರ್ಷದ ಅಮಲಾ ಎಂಬುವವರು ನಿನ್ನೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಬೃಹತ್ ಗುಂಡಿಯೊಂದು ಅವರ ಪ್ರಾಣಕ್ಕೆ ಕುತ್ತು ತಂದಿದೆ. ಗುಂಡಿಯನ್ನು ತಪ್ಪಿಸಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಅಮಲಾ ಅವರ ಕಾಲಿನ ಮೇಲೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಹರಿದಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಆಡುಗೋಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ 2: ಕೆ.ಆರ್.ಪುರಂನಲ್ಲಿ ಎರಡು ವರ್ಷದ ಮಗುವಿನ ದಾರುಣ ಅಂತ್ಯ

ಮತ್ತೊಂದು ಹೃದಯವಿದ್ರಾವಕ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಹಾಲೆಹಳ್ಳಿ ರಸ್ತೆಯಲ್ಲಿ ಸಂಭವಿಸಿದೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ದಂಪತಿಗೆ ವಿಧಿ ಕ್ರೂರವಾಗಿ ಎರಗಿದೆ. ಕಿತ್ತಗನೂರು ಪಂಚಾಯತ್ ವ್ಯಾಪ್ತಿಯ ಹಾಲೆಹಳ್ಳಿ ರಸ್ತೆಯಲ್ಲಿ ಪಿಡಬ್ಲ್ಯೂಡಿ ವತಿಯಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರಸ್ತೆಯುದ್ದಕ್ಕೂ ಹರಡಿದ್ದ ಕಲ್ಲು-ಮಣ್ಣಿನಿಂದಾಗಿ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ತಾಯಿ ಮಡಿಲಲ್ಲಿದ್ದ ಎರಡು ವರ್ಷದ ತ್ರಿಶೂಲ್ ಎಂಬ ಮಗು ಕೆಳಗೆ ಬಿದ್ದಿದೆ. ದುರದೃಷ್ಟವಶಾತ್ ಅದೇ ಸಮಯದಲ್ಲಿ ಬಂದ ಕಾರು ಮಗುವಿನ ತಲೆ ಮೇಲೆ ಹರಿದ ಪರಿಣಾಮ, ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ತ್ರಿಶೂಲ್

ಮಾರ್ಗೊಂಡನಹಳ್ಳಿ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದ ಈ ಕುಟುಂಬದ ಪಾಲಿಗೆ ಶಿವರಾತ್ರಿಯೇ ಕರಾಳ ರಾತ್ರಿಯಾಗಿದೆ. ‘ರಸ್ತೆ ಕಾಮಗಾರಿ ಸರಿಯಾಗಿ ಮಾಡದ ಕಾರಣವೇ ಬೈಕ್ ಸ್ಕಿಡ್ ಆಗಿದೆ, ಇದಕ್ಕೆ ಇಲಾಖೆಯೇ ನೇರ ಹೊಣೆ’ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಪಘಾತದ ಭೀಕರ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿವೆ. ಕೆ.ಆರ್.ಪುರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಗರವಾಸಿಗಳ ಆಕ್ರೋಶದ ಕಟ್ಟೆ

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಹೈಕೋರ್ಟ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ‘ನಮ್ಮ ತೆರಿಗೆ ಹಣಕ್ಕೆ ಪ್ರತಿಯಾಗಿ ನಮಗೆ ಸಿಗುತ್ತಿರುವುದು ಸಾವುಗಳೇ?’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಮಲಾ ಮತ್ತು ಪುಟ್ಟ ತ್ರಿಶೂಲ್ ಸಾವಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.



Source link

Leave a Reply

Your email address will not be published. Required fields are marked *