
ಸುಪ್ರೀಂ ಕೋರ್ಟ್ ತನ್ನ ಹಿಂದಿನ ಸುಂಕದ ಆದೇಶಗಳನ್ನು ಅಸಿಂಧುಗೊಳಿಸಿದ ನಂತರ, ಡೊನಾಲ್ಡ್ ಟ್ರಂಪ್ ಎಲ್ಲಾ ಆಮದುಗಳ ಮೇಲೆ ಶೇ. 10ರಷ್ಟು ಹೊಸ ಸುಂಕವನ್ನು ವಿಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. 1974ರ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 122’ ಬಳಸಿ ಈ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.
ವಾಷಿಂಗ್ಟನ್ (ಫೆ.21): ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಸುಂಕದ ಆದೇಶಗಳನ್ನು ಅಸಿಂಧುಗೊಳಿಸಿದ ಕೆಲವೇ ಗಂಟೆಗಳಲ್ಲಿ, ಅಧ್ಯಕ್ಷರು ಎಲ್ಲಾ ದೇಶಗಳಿಂದ ಬರುವ ಆಮದುಗಳ ಮೇಲೆ ಹೊಸದಾಗಿ ಶೇ. 10ರಷ್ಟು ಸುಂಕವನ್ನು (Tariff) ಹೇರುವ ಕಾರ್ಯನಿರ್ವಾಹಕ ಆದೇಶಕ್ಕೆ ಶನಿವಾರ ಸಹಿ ಹಾಕಿದ್ದಾರೆ.
ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಟ್ರಂಪ್, ಶ್ವೇತಭವನದ ಓವಲ್ ಆಫೀಸ್‌ನಿಂದ ಈ ಆದೇಶಕ್ಕೆ ಸಹಿ ಹಾಕಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. “ಎಲ್ಲಾ ದೇಶಗಳ ಮೇಲೆ ಶೇ. 10ರಷ್ಟು ಜಾಗತಿಕ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿರುವುದು ನನ್ನ ಪಾಲಿನ ದೊಡ್ಡ ಗೌರವ” ಎಂದು ಅವರು ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪರ್ಯಾಯ ಮಾರ್ಗ
ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು (IEEPA) ಬಳಸಿಕೊಂಡು ವ್ಯಾಪಕ ಸುಂಕ ಹೇರುವ ಅಧಿಕಾರ ಅಧ್ಯಕ್ಷರಿಗಿಲ್ಲ ಎಂದು ಸುಪ್ರೀಂ ಕೋರ್ಟ್ 6-3 ಮತಗಳ ಅಂತರದಿಂದ ಶುಕ್ರವಾರ ತೀರ್ಪು ನೀಡಿತ್ತು. ಇದರಿಂದ ಟ್ರಂಪ್ ಅವರ ಆರ್ಥಿಕ ನೀತಿಯ ಮೂಲ ಸ್ತಂಭಕ್ಕೇ ಹೊಡೆತ ಬಿದ್ದಿತ್ತು. ಆದರೆ, ಈಗ ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 122’ ಅನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಈ ಕಾನೂನಿನ ಅಡಿ ಅಧ್ಯಕ್ಷರು 150 ದಿನಗಳವರೆಗೆ ತಾತ್ಕಾಲಿಕ ಸುಂಕವನ್ನು ವಿಧಿಸಬಹುದು. ಇದನ್ನು ವಿಸ್ತರಿಸಲು ಕಾಂಗ್ರೆಸ್‌ನ ಅನುಮೋದನೆ ಅಗತ್ಯವಿರುತ್ತದೆ.
ನ್ಯಾಯಾಧೀಶರ ವಿರುದ್ಧ ಟ್ರಂಪ್ ಆಕ್ರೋಶ
ತಮ್ಮ ಸುಂಕದ ನೀತಿಯನ್ನು ವಿರೋಧಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಮ್ಮ ಅತ್ಯಂತ ಸಮಂಜಸವಾದ ಸುಂಕದ ನೀತಿಯ ವಿರುದ್ಧ ಮತ ಹಾಕಿದ ನ್ಯಾಯಾಧೀಶರು ನಾಚಿಕೆಪಡಬೇಕು. ನ್ಯಾಯಾಲಯದ ನಿರ್ಧಾರ ಹಾಸ್ಯಾಸ್ಪದ” ಎಂದು ಅವರು ಕಿಡಿಕಾರಿದ್ದಾರೆ. ಸುಂಕಗಳಿಂದಾಗಿ ರಾಷ್ಟ್ರೀಯ ಭದ್ರತೆ ಹೆಚ್ಚಿದೆ ಮತ್ತು ಫೆಂಟಾನಿಲ್‌ನಂತಹ ಮಾದಕ ದ್ರವ್ಯಗಳ ಅಕ್ರಮ ಹರಿವು ಕಡಿಮೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆರ್ಥಿಕ ಪರಿಣಾಮಗಳ ಅಂದಾಜು
ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಜೇಮಿಸನ್ ಗ್ರೀರ್ ಪ್ರಕಾರ, ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಈ ಕಾನೂನಾತ್ಮಕ ಕ್ರಮಗಳು ಅಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, “ಕಾನೂನಿನ ಸೆಕ್ಷನ್ ಬದಲಾದರೂ, 2026ರಲ್ಲಿ ಸರ್ಕಾರದ ಸುಂಕದ ಆದಾಯದಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಯಾಗುವುದಿಲ್ಲ. ಪರ್ಯಾಯ ಕಾನೂನುಗಳ ಮೂಲಕ ಗುರಿಯನ್ನು ತಲುಪಲಾಗುವುದು” ಎಂದು ತಿಳಿಸಿದ್ದಾರೆ.
ಈ ಹೊಸ ಸುಂಕದ ನೀತಿಯು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.