
ಅಮೆರಿಕದ ಹಿರಿಯ ರಾಜಕಾರಣಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಪ್ರಜೆಯೊಬ್ಬ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಕೊಲ್ಲಲು ಇರಾನ್‌ನ ಗೂಢಚಾರರು ನೇಮಿಸಿಕೊಂಡಿದ್ದರು ಎಂದು ಹೇಳಿದ್ದಾನೆ.
ನವದೆಹಲಿ: ಅಮೆರಿಕದ ಟಾಪ್ ರಾಜಕಾರಣಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪಾಕಿಸ್ತಾನಿ ಪ್ರಜೆಯೊಬ್ಬ, ಬುಧವಾರ ಕೋರ್ಟ್‌ನಲ್ಲಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಕೊಲ್ಲಲು ಇರಾನ್‌ನ ಗೂಢಚಾರರು ತನ್ನನ್ನು ನೇಮಿಸಿಕೊಂಡಿದ್ದರು ಅಂತ ಆತ ಹೇಳಿಕೊಂಡಿದ್ದಾನೆ.
ಬ್ರೂಕ್ಲಿನ್‌ನ ಫೆಡರಲ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಭಯೋತ್ಪಾದನೆ ಮತ್ತು ಸುಪಾರಿ ಹತ್ಯೆ ಆರೋಪಗಳನ್ನು ಎದುರಿಸುತ್ತಿರುವ ಆಸಿಫ್ ಮರ್ಚೆಂಟ್, ತನ್ನ ಪರವಾಗಿ ತಾನೇ ಸಾಕ್ಷ್ಯ ನುಡಿದ. ಈ ಹತ್ಯೆಗಳನ್ನು ಮಾಡುವ ಉದ್ದೇಶ ತನಗೆ ಇರಲಿಲ್ಲ, ಮತ್ತು ಈ ಆಪರೇಷನ್ ಮೊದಲಿನಿಂದಲೂ ವಿಫಲವಾಗುತ್ತೆ ಅಂತ ತನಗೆ ಗೊತ್ತಿತ್ತು ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ.
ತಿಳಿ ನೀಲಿ ಶರ್ಟ್ ಮೇಲೆ ಬೂದು ಬಣ್ಣದ ಸ್ವೆಟರ್ ಧರಿಸಿದ್ದ ಮರ್ಚೆಂಟ್, ಭಾಷಾಂತರಕಾರರ ಸಹಾಯದೊಂದಿಗೆ ಸ್ಪಷ್ಟವಾದ ಉರ್ದುವಿನಲ್ಲಿ, “ನನಗೆ ಈ ಕೆಲಸವನ್ನು ಮನಃಪೂರ್ವಕವಾಗಿ ಮಾಡುವ ಇಷ್ಟವಿರಲಿಲ್ಲ” ಎಂದು ಹೇಳಿದ.
Scroll to load tweet…
ಪ್ರಾಸಿಕ್ಯೂಟರ್‌ಗಳ ಪ್ರಕಾರ, ಈ ಸಂಚಿನಲ್ಲಿ ಅಮೆರಿಕದಲ್ಲಿ ಹಂತಕರನ್ನು ನೇಮಿಸಿಕೊಳ್ಳುವುದು, ಸೂಕ್ಷ್ಮ ದಾಖಲೆಗಳನ್ನು ಕದಿಯುವುದು, ಪ್ರತಿಭಟನೆಗಳನ್ನು ಆಯೋಜಿಸುವುದು ಮತ್ತು ರಾಜಕೀಯ ವ್ಯಕ್ತಿಗಳನ್ನು ಹತ್ಯೆ ಮಾಡುವ ಯೋಜನೆಗಳಿದ್ದವು. ಆದರೆ, ಮರ್ಚೆಂಟ್ ಕೊನೆಗೆ ಸಂಪರ್ಕಿಸಿದ ‘ಸುಪಾರಿ ಹಂತಕರು’ ನಿಜವಾಗಿ ಎಫ್‌ಬಿಐನ (FBI) ಅಂಡರ್‌ಕವರ್ ಏಜೆಂಟ್‌ಗಳಾಗಿದ್ದರು. ಇದರಿಂದಾಗಿ ಈ ಇಡೀ ಸಂಚು ದಿಢೀರ್ ಅಂತ ನಿಂತುಹೋಯ್ತು.
ನೇರ ಸೂಚನೆಗಳು ಬಂದಿರಲಿಲ್ಲ
ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಕೊಲ್ಲಲು ತನಗೆ ನೇರ ಸೂಚನೆಗಳು ಬಂದಿರಲಿಲ್ಲ ಎಂದು ಮರ್ಚೆಂಟ್ ನ್ಯಾಯಪೀಠಕ್ಕೆ ತಿಳಿಸಿದ. ಆದರೂ, ಟೆಹರಾನ್‌ನಲ್ಲಿ ನಡೆದ ಹಲವು ಮಾತುಕತೆಗಳ ವೇಳೆ, ತನ್ನ ಇರಾನಿಯನ್ ಹ್ಯಾಂಡ್ಲರ್ ಮೂರು ಪ್ರಮುಖ ರಾಜಕೀಯ ವ್ಯಕ್ತಿಗಳಾದ ಟ್ರಂಪ್, ಮಾಜಿ ಅಧ್ಯಕ್ಷ ಜೋಸೆಫ್ ಆರ್. ಬೈಡನ್ ಜೂನಿಯರ್ ಮತ್ತು ಸೌತ್ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲಿ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾಗಿ ಹೇಳಿದ್ದಾನೆ.
ಅಮೆರಿಕ-ಇಸ್ರೇಲ್ vs ಇರಾನ್
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ ಈ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ದೊಡ್ಡ ಮಟ್ಟದ ಬಾಂಬ್ ದಾಳಿಗಳನ್ನು ನಡೆಸಿವೆ. ಭಯೋತ್ಪಾದನೆ ಮತ್ತು ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆದಿವೆ.
2024ರಲ್ಲಿ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇರಾನಿನ ರಹಸ್ಯ ಘಟಕದ ನಾಯಕನನ್ನು ಅಮೆರಿಕದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಬುಧವಾರ ಹೇಳಿದ್ದಾರೆ. ಟ್ರಂಪ್ ಅವರನ್ನು ಕೊಲ್ಲಲು ಇರಾನ್ ನಡೆಸಿದ ಪ್ರಯತ್ನಗಳೇ ಈ ಬಾಂಬ್ ದಾಳಿಗೆ ಒಂದು ಕಾರಣ ಎಂದು ಟ್ರಂಪ್ ಆಡಳಿತ ಹೇಳಿದೆ.
ಇರಾನ್‌ನ ಪ್ರಾದೇಶಿಕ ಭದ್ರತಾ ಜಾಲದ ರೂವಾರಿ
ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ನಿರ್ದೇಶನದಂತೆ ಮರ್ಚೆಂಟ್ ಕೆಲಸ ಮಾಡುತ್ತಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಮೇಜರ್ ಜನರಲ್ ಕಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಸಂಘಟನೆ ಬಹಳ ದಿನಗಳಿಂದ ಕಾಯುತ್ತಿತ್ತು ಅಂತಾನೂ ಅವರು ಹೇಳಿದ್ದಾರೆ. ಇರಾನ್‌ನ ಪ್ರಾದೇಶಿಕ ಭದ್ರತಾ ಜಾಲದ ರೂವಾರಿ ಎಂದೇ ಪರಿಗಣಿಸಲಾಗಿದ್ದ ಈ ಪ್ರಭಾವಿ ಕಮಾಂಡರ್‌ನನ್ನು, ಜನವರಿ 3, 2020 ರಂದು ಅಮೆರಿಕ ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿತ್ತು.
ವಿಚಾರಣೆ ವೇಳೆ, ಪ್ರಾಸಿಕ್ಯೂಟರ್‌ಗಳು ಮರ್ಚೆಂಟ್‌ನ ಫೇಸ್‌ಬುಕ್ ಖಾತೆಯಿಂದ ಪಡೆದ ಚಿತ್ರಗಳನ್ನು ನ್ಯಾಯಪೀಠಕ್ಕೆ ತೋರಿಸಿದರು. ಅದರಲ್ಲಿ ಟ್ರಂಪ್ ಅವರ ಶಿರಚ್ಛೇದಿತ ತಲೆ ಮತ್ತು ಇನ್ನೊಂದು ಚಿತ್ರದಲ್ಲಿ ಮಾಜಿ ಅಧ್ಯಕ್ಷರು ಹಂದಿಯ ಪಕ್ಕದಲ್ಲಿ ನಿಂತಿರುವ ದೃಶ್ಯಗಳಿದ್ದವು.
ಮರ್ಚೆಂಟ್‌ನ ಹೇಳಿಕೆಗಳು ಈ ರಹಸ್ಯ ಕಾರ್ಯಾಚರಣೆಗಳ ಜಗತ್ತಿನ ಒಂದು ಅಪರೂಪದ ನೋಟವನ್ನು ನೀಡಿದರೂ, ಈ ಮಿಷನ್ ಕಾರ್ಯರೂಪಕ್ಕೆ ಬರುವ ಹಂತಕ್ಕೆ ತಲುಪಲೇ ಇಲ್ಲ ಎಂಬುದನ್ನೂ ಸೂಚಿಸುತ್ತವೆ.
ಯಾರು ಈ ಪಾಕ್ ಪ್ರಜೆ?
47 ವರ್ಷದ ಮರ್ಚೆಂಟ್, ತನ್ನನ್ನು ತಾನು ಅನುಭವಿ ಉದ್ಯಮಿ ಎಂದು ಬಣ್ಣಿಸಿಕೊಂಡಿದ್ದಾನೆ. ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡಿದ ನಂತರ ಬಾಳೆಹಣ್ಣು ರಫ್ತು, ಕಾರು ಮಾರಾಟ ಮತ್ತು ಗ್ಲಾಸ್ ಫೈಬರ್ ಇನ್ಸುಲೇಶನ್ ಆಮದು ಸೇರಿದಂತೆ ಹಲವು ವ್ಯವಹಾರಗಳನ್ನು ಮಾಡಿದ್ದನಂತೆ. ಕೊನೆಗೆ ತನ್ನ ಚಿಕ್ಕಪ್ಪನ ಗಾರ್ಮೆಂಟ್ಸ್ ಬ್ಯುಸಿನೆಸ್‌ಗೆ ಸೇರಿಕೊಂಡಿದ್ದ.
ಅವನ ವೈಯಕ್ತಿಕ ಜೀವನವೂ ಹಲವು ದೇಶಗಳಲ್ಲಿ ಹರಡಿಕೊಂಡಿದೆ. ಪಾಕಿಸ್ತಾನದಲ್ಲಿ ಒಬ್ಬಳು ಮತ್ತು ಇರಾನ್‌ನಲ್ಲಿ ಇನ್ನೊಬ್ಬಳು, ಹೀಗೆ ಇಬ್ಬರು ಪತ್ನಿಯರಿಂದ ಐದು ಮಕ್ಕಳಿದ್ದಾರೆ. ಶಿಯಾ ಮುಸ್ಲಿಮರ ಪವಿತ್ರ ನಗರಗಳಲ್ಲಿ ಒಂದಾದ ಇರಾಕ್‌ನ ಕರ್ಬಲಾದಲ್ಲಿ ಧಾರ್ಮಿಕ ಯಾತ್ರೆಗೆ ಹೋದಾಗ ತನ್ನ ಇರಾನಿಯನ್ ಪತ್ನಿಯನ್ನು ಭೇಟಿಯಾಗಿದ್ದಾಗಿ ಹೇಳಿದ್ದಾನೆ.
ಅವನ ಸಾಕ್ಷ್ಯದ ಪ್ರಕಾರ, 2022ರ ಕೊನೆಯಲ್ಲಿ ಇರಾನಿನ ಅಧಿಕಾರಿಗಳೊಂದಿಗೆ ಅವನ ಸಂಪರ್ಕ ಶುರುವಾಯ್ತು. ಅವನ ಸೋದರಸಂಬಂಧಿಯೊಬ್ಬ ಮೆಹ್ರದಾದ್ ಯೂಸೆಫ್ ಎಂಬ ವ್ಯಕ್ತಿಗೆ ಪರಿಚಯ ಮಾಡಿಕೊಟ್ಟಿದ್ದ. ಯೂಸೆಫ್, ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ನ ಸದಸ್ಯನಾಗಿದ್ದ.
“ಇರಾನ್ ಸರ್ಕಾರದೊಂದಿಗೆ ಕೆಲವು ಕೆಲಸ ಮಾಡಲು ಆಸಕ್ತಿ ಇದೆಯೇ ಎಂದು ಅವನು ಕೇಳಿದ, ನಾನು ಹೌದು ಎಂದೆ,” ಎಂದು ಮರ್ಚೆಂಟ್ ಹೇಳಿದ.
ಆರಂಭದಲ್ಲಿ, ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು ಬಳಸುವ ಅನೌಪಚಾರಿಕ ಹಣಕಾಸು ಜಾಲವಾದ ‘ಹವಾಲಾ’ ವ್ಯವಸ್ಥೆಯ ಮೂಲಕ ಇರಾನ್‌ಗೆ ಹಣ ವರ್ಗಾವಣೆ ಮಾಡುವ ಕೆಲಸವಿತ್ತು. ಆದರೆ, ನಂತರ ಮಾತುಕತೆಗಳು ಬೇರೆಯೇ ತಿರುವು ಪಡೆದುಕೊಂಡವು.
ಬೇಸಿಕ್ ಕೌಂಟರ್-ಸರ್ವೇಲೆನ್ಸ್ ತಂತ್ರಗಳಲ್ಲಿ ತರಬೇತಿ
ಮರ್ಚೆಂಟ್ ಅಮೆರಿಕದಲ್ಲಿ ಗಾರ್ಮೆಂಟ್ಸ್ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ವ್ಯಕ್ತಪಡಿಸಿದಾಗ, ಯೂಸೆಫ್ ಅವನನ್ನು ಅಲ್ಲಿಗೆ ಹೋಗಿ ಇರಾನ್ ಪರ ಸಹಾನುಭೂತಿ ಇರುವವರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದನಂತೆ. ವಿಮಾನ ನಿಲ್ದಾಣಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಪತ್ತೆಹಚ್ಚುವ ವಿಧಾನಗಳೂ ಸೇರಿದಂತೆ ಬೇಸಿಕ್ ಕೌಂಟರ್-ಸರ್ವೇಲೆನ್ಸ್ ತಂತ್ರಗಳಲ್ಲಿ ಅವನಿಗೆ ತರಬೇತಿಯನ್ನೂ ನೀಡಲಾಗಿತ್ತು.
ಮಾರ್ಚ್ 2024ರ ಹೊತ್ತಿಗೆ, ಈ ಮಿಷನ್ ಇನ್ನಷ್ಟು ಅಪಾಯಕಾರಿಯಾಗಿ ಬದಲಾಗಿತ್ತು ಎಂದು ಮರ್ಚೆಂಟ್ ಹೇಳಿದ. ಇರಾನ್‌ನಲ್ಲಿ ನಡೆದ ಸಭೆಯೊಂದರಲ್ಲಿ, ಅವನ ಹ್ಯಾಂಡ್ಲರ್ ಅಪರಾಧಿಗಳನ್ನು, ಅದರಲ್ಲೂ ವಿಶೇಷವಾಗಿ ‘ಮಾಫಿಯಾ’ ಜೊತೆ ಸಂಪರ್ಕ ಇರುವವರನ್ನು ಹುಡುಕುವಂತೆ ಸೂಚಿಸಿದನಂತೆ.
ಅವನ ಸಾಕ್ಷ್ಯದ ಪ್ರಕಾರ, ಈ ಯೋಜನೆಯಲ್ಲಿ ನಾಲ್ಕು ಅಂಶಗಳಿದ್ದವು: ಪ್ರತಿಭಟನೆಗಳನ್ನು ಆಯೋಜಿಸುವುದು, ದಾಖಲೆಗಳನ್ನು ಕದಿಯುವುದು, ಹಣ ವರ್ಗಾವಣೆ ಮಾಡುವುದು ಮತ್ತು ಬಹುಶಃ ಹತ್ಯೆಯೊಂದನ್ನು ಏರ್ಪಡಿಸುವುದು.
ತಾನು ‘ಮಾಫಿಯಾ’ ಎಂದು ಹೇಳಿದಾಗ, ಪಾಕಿಸ್ತಾನದಲ್ಲಿ ಕರೆಯುವಂತೆ ಸಣ್ಣಪುಟ್ಟ ಕ್ರಿಮಿನಲ್‌ಗಳ ಬಗ್ಗೆ ಮಾತನಾಡುತ್ತಿದ್ದೆನೇ ಹೊರತು, ಇಟಲಿಯ ಸಂಘಟಿತ ಅಪರಾಧ ಜಾಲದ ಸದಸ್ಯರ ಬಗ್ಗೆ ಅಲ್ಲ ಎಂದು ಮರ್ಚೆಂಟ್ ಸ್ಪಷ್ಟಪಡಿಸಿದ.
ತನಗೆ ಭಯವಿದ್ದರೂ, ಇರಾನ್‌ನಲ್ಲಿ ವಾಸಿಸುತ್ತಿರುವ ತನ್ನ ಪತ್ನಿ ಮತ್ತು ದತ್ತುಪುತ್ರಿಯ ಸುರಕ್ಷತೆಯ ಬಗ್ಗೆ ಚಿಂತೆಯಾಗಿ ಈ ಕೆಲಸಕ್ಕೆ ಒಪ್ಪಿಕೊಂಡೆ ಎಂದು ಆತ ಹೇಳಿಕೊಂಡಿದ್ದಾನೆ.
ಏಪ್ರಿಲ್ 2024ರಲ್ಲಿ, ಅವನು ಅಮೆರಿಕಕ್ಕೆ ಪ್ರಯಾಣಿಸಿ, ತನ್ನ ಚಿಕ್ಕಪ್ಪ ವಾಸಿಸುವ ಹೂಸ್ಟನ್‌ಗೆ ಬಂದ. ಅವನ ಆಗಮನವು ವಲಸೆ ಅಧಿಕಾರಿಗಳಿಗೆ ಅನುಮಾನ ಮೂಡಿಸಿತು. ಅವರು ಅವನನ್ನು ಗಂಟೆಗಟ್ಟಲೆ ತಡೆದು, ಅವನ ವಸ್ತುಗಳನ್ನು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸಿದರು. ಅವನ ಇತ್ತೀಚಿನ ಇರಾನ್ ಪ್ರವಾಸದ ಬಗ್ಗೆಯೂ ಪ್ರಶ್ನಿಸಿದರು.
ಆ ಕ್ಷಣದಲ್ಲಿ, ಈ ಯೋಜನೆ ಈಗಾಗಲೇ ಬಯಲಾಗಿದೆ ಎಂದು ತನಗೆ ಮನವರಿಕೆಯಾಯಿತು ಎಂದು ಮರ್ಚೆಂಟ್ ಹೇಳಿದ. ಅಮೆರಿಕದ ಅಧಿಕಾರಿಗಳು ತನ್ನ ಮೇಲೆ ನಿಗಾ ಇಟ್ಟಿದ್ದಾರೆಂದು ಅವನು ನಂಬಿದ್ದ. ಆದರೂ, ಇರಾನಿನ ಭದ್ರತಾ ಪಡೆಗಳೂ ತನ್ನನ್ನು ಗಮನಿಸುತ್ತಿರಬಹುದು ಎಂಬ ಭಯದಿಂದ ಕಾರ್ಯಾಚರಣೆಯನ್ನು ಮುಂದುವರಿಸಿದ.
ಕೇವಲ ನಾಟಕವಾಡಲು, ತಾನು ಟ್ರಂಪ್ ರ‍್ಯಾಲಿಗಳ ಸ್ಥಳಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಡಿ, ಇರಾನ್‌ನಲ್ಲಿರುವ ತನ್ನ ಹ್ಯಾಂಡ್ಲರ್‌ಗೆ ವರದಿಗಳನ್ನು ಕಳುಹಿಸಿದೆ. ಇದೆಲ್ಲವನ್ನೂ ಮಾಡುವಾಗ, ತಾನು ಬೇಗ ಅಥವಾ ನಂತರ ಬಂಧನಕ್ಕೊಳಗಾಗುತ್ತೇನೆ ಎಂದು ನಿರೀಕ್ಷಿಸಿದ್ದೆ ಎಂದಿದ್ದಾನೆ.
ಈ ಸಂಚು ಬಯಲಾಗಿದ್ದು ಹೇಗೆ?
“ನಾನು ಯಶಸ್ವಿಯಾಗುತ್ತೇನೆ ಎಂದು ನನಗನಿಸಿರಲಿಲ್ಲ,” ಎಂದು ಅವನು ಸಾಕ್ಷ್ಯ ನುಡಿದಿದ್ದಾನೆ. ಈ ಸಂಚು ಬಯಲಾಗಿದ್ದು, ಮರ್ಚೆಂಟ್ ತನ್ನ ಸ್ನೇಹಿತ ಎಂದು ನಂಬಿದ್ದ ನದೀಮ್ ಅಲಿ ಎಂಬ ವ್ಯಕ್ತಿಯಿಂದ. ಆತ ಎಫ್‌ಬಿಐನ ಮಾಹಿತಿದಾರನಾಗಿದ್ದ.
ಆದರೆ, ಫೆಡರಲ್ ಪ್ರಾಸಿಕ್ಯೂಟರ್‌ಗಳು ಮರ್ಚೆಂಟ್‌ನ ಈ ವಿವರಣೆಯನ್ನು ಬಲವಾಗಿ ತಿರಸ್ಕರಿಸಿದ್ದಾರೆ. ಅವನು ತನ್ನ ಕುಟುಂಬದ ಮೇಲಿನ ಭಯದಿಂದ ಅಥವಾ ಒತ್ತಡದಿಂದ ಈ ಕೆಲಸ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ನ್ಯಾಯಾಲಯದ ದಾಖಲೆಯಲ್ಲಿ ವಾದಿಸಿದ್ದಾರೆ.
ಅಡ್ಡ-ಪರಿಶೀಲನೆ ವೇಳೆ, ಪ್ರಾಸಿಕ್ಯೂಟರ್ ನೀನಾ ಗುಪ್ತಾ, ತಾನು ಒಂದು ಭಯೋತ್ಪಾದಕ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂಬುದು ನಿನಗೆ ತಿಳಿದಿತ್ತೇ ಎಂದು ಮರ್ಚೆಂಟ್‌ನನ್ನು ಪ್ರಶ್ನಿಸಿದರು. ಅದಕ್ಕೆ ಅವನು, ತನಗೆ ತಿಳಿದಿತ್ತು ಎಂದು ಒಪ್ಪಿಕೊಂಡ.
ಕ್ವೀನ್ಸ್‌ನ ಹೋಟೆಲ್ ರೂಮ್‌ನಲ್ಲಿ ನ್ಯಾಪ್‌ಕಿನ್ ಮೇಲೆ ಹತ್ಯೆಯ ಸಂಚಿನ ವಿವರಗಳನ್ನು ಬರೆಯುವಾಗ ತನ್ನನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂಬುದು ನಿನಗೆ ತಿಳಿದಿತ್ತೇ ಎಂದು ಅವರು ಕೇಳಿದರು. ಅದಕ್ಕೆ ಅವನು, ತನಗೆ ತಿಳಿದಿರಲಿಲ್ಲ ಎಂದ.
ಇದನ್ನೂ ಓದಿ: ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ನಂಬಿಕೆ ದ್ರೋಹ ಮಾಡ್ತಿದ್ಯಾ ಅಮೆರಿಕಾ: ಶ್ವೇತ ಭವನದಿಂದ ಸ್ಪಷ್ಟನೆ ಕೇಳಿದ ನೆತನ್ಯಾಹು
ಕೊನೆಗೆ, ಜುಲೈ 12, 2024 ರಂದು ಟೆಕ್ಸಾಸ್‌ನ ರಿಚ್ಮಂಡ್‌ನಲ್ಲಿ ಮರ್ಚೆಂಟ್‌ನನ್ನು ಬಂಧಿಸಲಾಯಿತು. ನಂತರ ವಿಚಾರಣೆಗಾಗಿ ನ್ಯೂಯಾರ್ಕ್‌ಗೆ ಕರೆತರಲಾಯಿತು.
ಬಂಧನದ ನಂತರ, ತಾನು ಅಮೆರಿಕದ ಅಧಿಕಾರಿಗಳೊಂದಿಗೆ ಸಹಕರಿಸಲು ಪ್ರಯತ್ನಿಸಿದೆ ಮತ್ತು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಶಿಸಿದ್ದೆ ಎಂದು ಅವನು ಹೇಳಿಕೊಂಡಿದ್ದಾನೆ. ಇರಾನ್‌ನಿಂದ ತನ್ನ ಕುಟುಂಬವನ್ನು ಅಮೆರಿಕಕ್ಕೆ ಕರೆತರುವ ಸಾಧ್ಯತೆಯ ಬಗ್ಗೆಯೂ ಯೋಚಿಸಿದ್ದನಂತೆ.
ಆದರೆ ಆ ಮಾತುಕತೆಗಳು ವಿಫಲವಾದವು. “ಅವರು ನನ್ನನ್ನು ಯಾವುದೋ ಸೂಪರ್ ಸ್ಪೈ ಎಂದು ಭಾವಿಸಿದಂತಿದೆ,” ಎಂದು ಅವನು ಹೇಳಿದ.
ಇದನ್ನೂ ಓದಿ: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೂ ಬಗ್ಗದ ಇರಾನ್, ಪ್ರತಿಕಾರದ ದಾಳಿಗೆ ಬೆದರಿದ ಟ್ರಂಪ್! ಇನ್ನೆಷ್ಟು ದಿನ ನಡೆಯಲಿದೆ ವಾರ್?