
ತಮಿಳುನಾಡಿನ ಅರುಣಾಚಲ ನಿಗೂಢ ಸಿದ್ಧರನ್ನು, ಯೋಗಿಗಳನ್ನು ಹೊಂದಿರುವ ತಾಣ. ಮೇಲ್ನೋಟಕ್ಕೆ ಅರೆಮರುಳರಂತೆ ಕಾಣುವ ಇವರು ರಹಸ್ಯ ಶಕ್ತಿಗಳನ್ನು ಹೊಂದಿರುವ ಸಿದ್ಧರಾಗಿರುವ ಸಾಧ್ಯತೆಯೇ ಅಧಿಕ. ಅಂಥ ಒಬ್ಬ ನಿಗೂಢ ವ್ಯಕ್ತಿ (Thoppi Amma) ಇಲ್ಲಿದ್ದಾಳೆ.
ನೀವು ತಮಿಳುನಾಡಿನ ತಿರುವಣ್ಣಾಮಲೈಗೆ ಹೋದರೆ ಅಲ್ಲಿ ಬೇರೆಯದೇ ಒಂದು ಜಗತ್ತು ನಿಮ್ಮೆದುರು ಬಿಚ್ಚಿಕೊಳ್ಳುತ್ತದೆ. ಸಾಮಾನ್ಯ ಪೇಟೆ, ಜನಜೀವನದ ಆಚೆಗೆ ಇಲ್ಲಿ ಒಂದು ಆಶ್ರಮವಿದೆ- ಅದು ರಮಣ ಮಹರ್ಷಿಗಳ ಆಶ್ರಮ. ಅದನ್ನೂ ಸೇರಿದಂತೆ ಇಡೀ ತಿರುವಣ್ಣಾಮಲೈಯನ್ನು ಆವರಿಸಿಕೊಂಡು ಒಂದು ದೊಡ್ಡ ಗಿರಿಯಿದೆ- ಅದೇ ಅರುಣಾಚಲ. ಈ ಅರುಣಾಚಲವೇ ಶಿವನೆಂದು ಭಕ್ತರು ಭಾವಿಸುತ್ತಾರೆ. ಹುಣ್ಣಿಮೆ ಮತ್ತು ಇತರ ಶುಭದಿನಗಳಲ್ಲಿ ಈ ಗಿರಿಯನ್ನು ಭಕ್ತರು ಸುತ್ತು ಹಾಕುತ್ತಾರೆ. 14 ಕಿಲೋಮೀಟರ್‌ಗಳ ಈ ಗಿರಿ ಪರಿಕ್ರಮಕ್ಕೆ ʼಗಿರಿವಲ್ಲಂʼ ಎಂದು ಹೆಸರು. ಹೀಗೆ ಗಿರಿ ಪ್ರದಕ್ಷಿಣೆ ಬರುವಾಗ ಇಲ್ಲಿ ನಾನಾ ನಮೂನೆಯ ಸಿದ್ಧರು, ಯತಿಗಳು, ಸನ್ಯಾಸಿಗಳು, ಯೋಗಿಗಳು ಕಾಣಸಿಗುತ್ತಾರೆ.
ಹಾಗೆ ಕಾಣಿಸುವ ಒಬ್ಬ ಸಿದ್ಧೆ ಅಥವಾ ಯೋಗಿನಿಯೇ ಟೊಪ್ಪಿ ಅಮ್ಮ. ಅವರ ವರ್ತನೆ ನಿಗೂಢ. ಅವರ ಚರ್ಯೆ ರಹಸ್ಯಮಯ. ಸದಾ ಒಂದು ಟೊಪ್ಪಿ ಧರಿಸಿರುವ ಕಾರಣ ಅವರನ್ನು ಟೊಪ್ಪಿ ಅಮ್ಮ ಎನ್ನಲಾಗುತ್ತದೆ. ಜಡೆಗಟ್ಟಿದ ಕೂದಲು. ಕೊಳೆ ಮಸಿ ಹಿಡಿದ ಬಟ್ಟೆಗಳು. ಬಾಯಿಯಿಂದ ಸುರಿಯುವ ಎಂಜಲು. ಯಾರಾದರೂ ಹತ್ತಿರ ಹೋದರೆ… ಕೆಲವೊಮ್ಮೆ ಉಗುಳುತ್ತಾರೆ.
ಕೆಲವು ಜನರು ʼಹುಚ್ಚು ಹೆಂಗಸುʼ ಅನ್ನುತ್ತಾರೆ. ಇನ್ನು ಕೆಲವರು ʼಇವಳು ಸಿದ್ಧರೇ… ಜೀವಂತ ಸಿದ್ಧರು” ಎಂದು ಗೌರವಿಸುತ್ತಾರೆ. ಮೊದಲ ಬಾರಿಗೆ ಇವರನ್ನು ನೋಡಿದವರಿಗೆ ಇವರು ಮರುಳರೆಂದು ಅನಿಸಬಹುದು. ಆದರೆ ಸದಾ ಇವರು ಯಾವುದೋ ಧ್ಯಾನದಲ್ಲಿರುತ್ತಾರೆ. ಏನೋ ಗುನುಗುನಿಸುತ್ತಿರುತ್ತಾರೆ. ಯಾರಲ್ಲಿಯೂ ಏನನ್ನೂ ಬೇಡುವುದಿಲ್ಲ. ಅದರೆ ಭಕ್ತರೇ ಪ್ರಸಾದ ಬಾಳೆಹಣೂ ಇತ್ಯಾದಿ ನೀಡುತ್ತಾರೆ. ಅದನ್ನು ಭಿಕ್ಷೆಯಂತೆ ಸೇವಿಸುತ್ತಾರೆ. ಎಲ್ಲಿ ಇರುತ್ತಾರೋ ಎಲ್ಲಿ ಮಲಗುತ್ತಾರೋ ಯಾರಿಗೂ ಗೊತ್ತಿಲ್ಲ. ಬಂಧುಗಳು ಇದ್ದಾರೋ, ಯಾರೂ ಇಲ್ಲವಾ, ಇಲ್ಲಿನವರೇನಾ ಅಥವಾ ಹೊರಗಿನವರಾ, ಯಾವುದೂ ತಿಳಿದಿಲ್ಲ.
ಯಾಕೆ ಪವಾಡ ಮಾಡುವುದಿಲ್ಲ?
ಇಲ್ಲಿರುವ ತಿಳಿದವರು ಹೇಳುವ ಪ್ರಕಾರ, ಅರುಣಾಚಲ ಸುತ್ತಮುತ್ತ ನೂರಾರು, ಸಾವಿರಾರು ಸಿದ್ಧರು ಇದ್ದಾರೆ. ಸಿದ್ಧರು ಎಂದರೆ ಯೋಗಮಾರ್ಗದ ಮೂಲಕ ಹಲವು ಸಿದ್ಧಿಗಳನ್ನು ತಮ್ಮ ಕೈವಶ ಮಾಡಿಕೊಂಡವರು. ಆದರೆ ಇವರು ತಮ್ಮ ಮಹಾತ್ಮೆಯನ್ನು ಯಾರಿಗೂ ತೋರಿಸುವುದಿಲ್ಲ. ಯಾಕೆಂದರೆ ಲೌಕಿಕ ಮೋಹ ಹೊಂದಿರುವ ಜನಸಾಮಾನ್ಯರು ಅವರನ್ನು ಸುತ್ತುವರಿದು ತಮ್ಮ ಕಷ್ಟ ಕಳೆಯುವಂತೆ, ಶ್ರೀಮಂತಿಕೆ ನೀಡುವಂತೆ ಗೋಗರೆಯುತ್ತಾರೆ. ಹಾಗೆಲ್ಲ ಪವಾಡ ತೋರಿಸುವುದು ಸಿದ್ಧರಿಗೆ ಇಷ್ಟವಿಲ್ಲ. ಅವರು ಲೌಕಿಕವನ್ನು ಮೀರಿದವರು, ಅಲೌಕಿಕರು. ಮತ್ತೆ ಈ ಲೌಕಿಕಕ್ಕೆ ಇಳಿಯುವುದು ಅವರಿಗೆ ಇಷ್ಟವಿಲ್ಲ. ಆದರೆ ಕಾಲಿಗೆ ಬೀಳುವ ಜನರನ್ನು ದೂರ ಇಡುವುದು ಹೇಗೆ? ಅದಕ್ಕಾಗಿ ಮರುಳರಂತೆ, ಹುಚ್ಚರಂತೆ ನಟಿಸುತ್ತಾರೆ. ಇದು ಗುಟ್ಟು. ಹೀಗಾಗಿಯೇ ತಿಳಿದವರು ಹೇಳುತ್ತಾರೆ- ಟೊಪ್ಪಿ ಅಮ್ಮ ಅವರ ಒಂದು ಉಗುಳೂ ಕೂಡ ಆಶೀರ್ವಾದವಾಗಬಹುದು.
ಅರುಣಾಚಲದ (ತಿರುವಣ್ಣಾಮಲೈ) ಸಿದ್ಧರು ತಮಿಳುನಾಡಿನ ಅಧ್ಯಾತ್ಮಿಕ ಪರಂಪರೆಯಲ್ಲಿ ಪರಮಶಿವನ ವಂಶಸ್ಥರೆಂದು ಪರಿಗಣಿಸಲ್ಪಟ್ಟ ಜ್ಞಾನೋದಯಗೊಂಡ ಜೀವಿಗಳು. ಇವರು ಅರುಣಾಚಲ ಬೆಟ್ಟದ ಗುಹೆಗಳಲ್ಲಿ ಅದೃಶ್ಯ ರೂಪದಲ್ಲಿ ಅಥವಾ ಸೂಕ್ಷ್ಮ ಶರೀರದಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಇವರು ಯೋಗ, ಸಿದ್ಧ ಔಷಧ (ಗಿಡಮೂಲಿಕೆ) ಮತ್ತು ನಿಗೂಢ ವಿದ್ಯೆಗಳಲ್ಲಿ ಪರಿಣಿತರು.
ಭೋಗರ್ ಸಿದ್ಧರ್, ಅಗಸ್ತ್ಯ ಮುನಿ (ಸಿದ್ಧ ಪರಂಪರೆಯ ಮೂಲ ಪುರುಷ), ಮತ್ತು ಕರುವುರಾರ್ (ದೇವಾಲಯದ ವಾಸ್ತುಶಿಲ್ಪದಲ್ಲಿ ಪರಿಣಿತರು) ಇಲ್ಲಿನ ಪ್ರಮುಖ ಸಿದ್ಧರಂತೆ. ಅರುಣಾಚಲ ಬೆಟ್ಟ 350 ಕೋಟಿ ವರ್ಷಗಳಷ್ಟು ಹಳೆಯದಾಗಿದ್ದು, ಸಿದ್ಧರು ಇಂದಿಗೂ ಇಲ್ಲಿನ ಗುಹೆಗಳಲ್ಲಿ ತಪಸ್ಸು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. 18 ವರ್ಷಗಳ ಕಾಲ ಅನ್ನ-ನೀರಿಲ್ಲದೆ ಅರುಣಾಚಲದ ಗುಹೆಯಲ್ಲಿ ತಪಸ್ಸು ಮಾಡಿದ ‘ಗುರು ನಾರಾಯಣ ಸ್ವಾಮಿ’ (ಗುರು ಅಯ್ಯ) ಅವರನ್ನು ಇತ್ತೀಚಿನ ಸಿದ್ಧರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.