
ಅರ್ಜಿದಾರರ ಕುಟುಂಬ ಎದುರಿಸಿದ ವೈಯಕ್ತಿಕ ನಷ್ಟ ಅಥವಾ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯ, ಭಾವನೆಗಳು ನ್ಯಾಯಾಂಗ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಒತ್ತಿಹೇಳಿದೆ.
ಜಬಲ್ಪುರ(ಮಾ.18): ಮಾರುತಿ ಸುಜುಕಿ ವಿರುದ್ಧ ಸಲ್ಲಿಕೆಯಾಗಿದ್ದ 200 ಕೋಟಿ ರೂಪಾಯಿಗಳ ಪರಿಹಾರ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ. ಕಳೆದ ಸೋಮವಾರ (ಮಾರ್ಚ್ 9) ಅರ್ಜಿದಾರರು ನ್ಯಾಯಾಲಯದ ಒಳಗೆ ಗರ್ಭಪಾತವಾದ ಭ್ರೂಣವನ್ನು ತಂದಿದ್ದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಂಗ ಕಲಾಪಗಳನ್ನು ಭಾವನಾತ್ಮಕ ಪ್ರದರ್ಶನದ ವೇದಿಕೆಯನ್ನಾಗಿ ಮಾಡಲು ಸಾಧ್ಯವಿಲ್ಲ. ನ್ಯಾಯವು ಕೇವಲ ಕಾನೂನು ಮತ್ತು ಪುರಾವೆಗಳ ಆಧಾರದ ಮೇಲೆ ಸಿಗುತ್ತದೆಯೇ ಹೊರತು ಸಹಾನುಭೂತಿ ಅಥವಾ ನಾಟಕೀಯ ವರ್ತನೆಗಳಿಂದಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರ ದಯಾಶಂಕರ್ ಪಾಂಡೆ ಎಂಬುವವರು ಮಾರುತಿ ಸುಜುಕಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಾರುತಿ ಸುಜುಕಿ ಕಂಪನಿಯಲ್ಲಿ ನಡೆದಿದೆ ಎನ್ನಲಾದ 200 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಬೃಹತ್ ಅವ್ಯವಹಾರವನ್ನು ತಾವು ಬಯಲಿಗೆಳೆದಿದ್ದಕ್ಕಾಗಿ, ತಮ್ಮ ಮತ್ತು ಕುಟುಂಬದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದರು. ಇಂತಹ ಒಂದು ದಾಳಿಯಿಂದಾಗಿ ತಮ್ಮ ಪತ್ನಿಯ ಗರ್ಭಪಾತವಾಗಿದೆ ಮತ್ತು ಈ ಹಿಂದೆ ನಡೆದ ಬೆಂಕಿ ಅವಗಢದಿಂದಾಗಿ ತಮ್ಮ ಮಗಳು ತೀವ್ರವಾಗಿ ಗಾಯಗೊಂಡು ಶಾಶ್ವತವಾಗಿ ವಿಕಲಾಂಗಳಾಗಿದ್ದಾಳೆ ಎಂದು ಅವರು ಹೇಳಿದ್ದರು. ಈ ಕಾರಣಗಳಿಗಾಗಿ ಅವ್ಯವಹಾರವಾಗಿದೆ ಎನ್ನಲಾದ ಹಣದ ವಸೂಲಿ, ಮಗಳ ಚಿಕಿತ್ಸೆಗಾಗಿ 82 ಲಕ್ಷ ರೂಪಾಯಿ ಪರಿಹಾರ ಮತ್ತು ನಿಷ್ಪಕ್ಷಪಾತ ಪೊಲೀಸ್ ತನಿಖೆಗೆ ಅವರು ಒತ್ತಾಯಿಸಿದ್ದರು.
ನ್ಯಾಯಾಲಯದ ವೀಕ್ಷಣೆ ಮತ್ತು ಟೀಕೆ
ವಿಚಾರಣೆಯ ಸಮಯದಲ್ಲಿ, ರಾಜ್ಯ ಸರ್ಕಾರ ಮತ್ತು ಮಾರುತಿ ಸುಜುಕಿ ಕಂಪನಿಯು ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದವು. ಅರ್ಜಿದಾರರ ಎಲ್ಲಾ ಆರೋಪಗಳು ಯಾವುದೇ ದಾಖಲೆಗಳಿಲ್ಲದ ಕೇವಲ ಅಧಾರರಹಿತ ಮಾತುಗಳು ಎಂದು ವಾದಿಸಿದವು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯಕ್ಕೆ, ಅರ್ಜಿದಾರರು ತಾವು ಅಧಿಕಾರಿಗಳಿಗೆ ನೀಡಿದ್ದೇವೆ ಎನ್ನಲಾದ ದೂರಿನ ಪ್ರತಿಗಳಂತಹ ಮೂಲಭೂತ ಸಾಕ್ಷ್ಯಗಳನ್ನೂ ಸಲ್ಲಿಸಲು ವಿಫಲರಾಗಿರುವುದು ಕಂಡುಬಂದಿದೆ. ಇಂತಹ ಗಂಭೀರ ಆರೋಪಗಳನ್ನು ಪುರಾವೆಗಳಿಲ್ಲದೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಈ ಅರ್ಜಿಯು ಅಸ್ಪಷ್ಟ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಬಣ್ಣಿಸಿತು.
ಅರ್ಜಿದಾರರು ಪದೇ ಪದೇ ಇದೇ ವಿಷಯಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಿರುವುದನ್ನು ಮತ್ತು ಸರಿಯಾದ ಕಾನೂನು ಮಾರ್ಗಗಳನ್ನು ಅನುಸರಿಸುತ್ತಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿತು. ಯಾವುದೇ ಹೊಸ ಪುರಾವೆಗಳಿಲ್ಲದೆ ಪದೇ ಪದೇ ಅರ್ಜಿ ಸಲ್ಲಿಸುವುದು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ಪ್ರಕ್ರಿಯೆಯಾಗಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಭ್ರೂಣ ಪ್ರದರ್ಶನಕ್ಕೆ ತೀವ್ರ ಆಕ್ಷೇಪ
ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ಭ್ರೂಣವನ್ನು ನ್ಯಾಯಾಲಯದ ಮುಂದೆ ಇರಿಸಿದ್ದನ್ನು ನ್ಯಾಯಾಲಯವು ತೀವ್ರವಾಗಿ ಟೀಕಿಸಿತು. “ಇದು ಅತ್ಯಂತ ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಕೃತ್ಯ. ನ್ಯಾಯಾಲಯದ ಕೊಠಡಿಯನ್ನು ಭಾವನಾತ್ಮಕ ನಾಟಕದ ವೇದಿಕೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಇಂತಹ ನಡವಳಿಕೆಯು ನ್ಯಾಯಾಂಗದ ಘನತೆ ಮತ್ತು ಮರ್ಯಾದೆಯನ್ನು ಕುಗ್ಗಿಸುತ್ತದೆ” ಎಂದು ನ್ಯಾಯಾಧೀಶರು ಹೇಳಿದರು. ಮಾನವ ಅವಶೇಷಗಳನ್ನು ಈ ರೀತಿ ನಿರ್ವಹಿಸುವುದು ಮತ್ತು ಪ್ರದರ್ಶಿಸುವುದು ಕಾನೂನಿನ ಉಲ್ಲಂಘನೆಯಾಗಿದ್ದು, ಇದು ಶಿಕ್ಷಾರ್ಹ ಅಪರಾಧವೂ ಆಗಬಹುದು ಎಂದು ಕೋರ್ಟ್ ಎಚ್ಚರಿಸಿತು.
ಒಂದು ವೇಳೆ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂಬ ಅಸಮಾಧಾನವಿದ್ದರೆ, ಅರ್ಜಿದಾರರು ನೇರವಾಗಿ ಹೈಕೋರ್ಟ್ ಬರುವ ಬದಲು ಕಾನೂನಿನ ಅನ್ವಯ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಯಿತು.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಮರುಕಳಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜಿದಾರರಿಗೆ ಎಚ್ಚರಿಕೆ ನೀಡಿದೆ. ನ್ಯಾಯಾಲಯವು ನೈಜ ಸಂಕಷ್ಟಗಳಿಗೆ ಯಾವಾಗಲೂ ತೆರೆದಿರುತ್ತದೆ, ಆದರೆ ಪ್ರಚಾರಕ್ಕಾಗಿ ಅಥವಾ ಪುರಾವೆಗಳಿಲ್ಲದ ಆರೋಪಗಳ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.