
ಮಲ್ಲೇಶ್ವರದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಫೆ.15ರ ಮಹಾಶಿವರಾತ್ರಿ ಹಾಗೂ ಫೆ.16ರಂದು ಬ್ರಹ್ಮ ರಥೋತ್ಸವವನ್ನು ಆಯೋಜಿಸಲಾಗಿದೆ. ಶಿವರಾತ್ರಿಯಂದು ನಿರಂತರ ಜಲಾಭಿಷೇಕ ಮತ್ತು ವಿಶೇಷ ದರ್ಶನವಿದ್ದು, ಮರುದಿನ ನಡೆಯುವ ರಥೋತ್ಸವದಲ್ಲಿ ರಾಜ್ಯ ಹಾಗೂ ತಮಿಳುನಾಡಿನ ಕಲಾತಂಡಗಳು ಭಾಗವಹಿಸಲಿವೆ.
ಬೆಂಗಳೂರು (ಫೆ.15): ಮಲ್ಲೇಶ್ವರದಲ್ಲಿರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯ ಮತ್ತು ಕಾಡು ಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಫೆ.15ರ ಮಹಾಶಿವರಾತ್ರಿ ಮತ್ತು ಫೆ.16ರಂದು ಬ್ರಹ್ಮ ರಥೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಡುಮಲ್ಲೇಶ್ವರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಪ್ರತಿವರ್ಷದಂತೆ ಈ ವರ್ಷವು ಮಹಾಶಿವರಾತ್ರಿ ಹಬ್ಬಕ್ಕೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಫೆ.15ರ ಬೆಳಗಿನ ಜಾವ 2 ಗಂಟೆಯಿಂದ ನಿರಂತರ ಜಲಾಭಿಷೇಕ ಹಾಗೂ ವಿಶೇಷ ದರ್ಶನ ಕಾರ್ಯಕ್ರಮವಿರುತ್ತದೆ. ಫೆ.16ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯವರ ಬ್ರಹ್ಮರಥೋತ್ಸವ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ತಿಳಿಸಿದರು. ಹೂವಿನ ಅಲಂಕಾರ ಸಹಿತ ರಥೋತ್ಸವದಲ್ಲಿ ರಾಜ್ಯದ 15 ಕಲಾ ತಂಡಗಳು, ತಮಿಳುನಾಡಿನ ವಿಶೇಷ ತಮಟೆ, ವಾದ್ಯಗಳ ಕಲಾತಂಡಗಳು ಭಾಗವಹಿಸುತ್ತವೆ. ಸಂಜೆ 6.30ಕ್ಕೆ ಬ್ರಹ್ಮರಥೋತ್ಸದಲ್ಲಿ ವಿಶೇಷ ಪಂಜಿನ ಮೆರವಣಿಗೆ ಹಾಗೂ ಕಾಡು ಮಲ್ಲೇಶ್ವರ ಗೆಳಯರ ಬಳಗದ ಮಹಿಳಾ ಘಟಕದವರಿಂದ ರಥಾರತಿ ಅರ್ಪಿಸಲಾಗುತ್ತದೆ ಎಂದು ಹೇಳಿದರು.
ವರ್ಷದಿಂದ ವರ್ಷಕ್ಕೆ ಕಾಡು ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿವರಾಂ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ರಾಜ ಶಶಿಧರ್ ಉಪಸ್ಥಿತರಿದ್ದರು.