ಗ್ಯಾಸ್ ಸಿಲಿಂಡರ್ ಇಲ್ಲದೆ ಸೌದೆ ಒಲೆ ಮೇಲೆ ಅಡುಗೆ, ಕಾರ್ಮಿಕರನ್ನ ಊರಿಗೆ ಕಳಿಸಿದ ಹಲವು ಹೋಟೆಲ್ಸ್! | Gas Trouble Hotel Staff Struggle To Manage Customer Influx Rav

ಗ್ಯಾಸ್ ಸಿಲಿಂಡರ್ ಇಲ್ಲದೆ ಸೌದೆ ಒಲೆ ಮೇಲೆ ಅಡುಗೆ, ಕಾರ್ಮಿಕರನ್ನ ಊರಿಗೆ ಕಳಿಸಿದ ಹಲವು ಹೋಟೆಲ್ಸ್! | Gas Trouble Hotel Staff Struggle To Manage Customer Influx Rav



ಗ್ಯಾಸ್ ಸಿಲಿಂಡರ್ ಇಲ್ಲದೆ ಸೌದೆ ಒಲೆ ಮೇಲೆ ಅಡುಗೆ, ಕಾರ್ಮಿಕರನ್ನ ಊರಿಗೆ ಕಳಿಸಿದ ಹಲವು ಹೋಟೆಲ್ಸ್! | Gas Trouble Hotel Staff Struggle To Manage Customer Influx Rav

ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿದ್ದು, ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಲವು ಹೋಟೆಲ್‌ಗಳು ಸೌದೆ ಒಲೆಗಳನ್ನು ಅವಲಂಬಿಸಿದ್ದು. ಕೆಲವು ಹೋಟೆಲ್‌ಗಳು ಕಾರ್ಮಿಕರನ್ನು ಊರಿಗೆ ಕಳುಹಿಸುವಂತಾಗಿದೆ.

ಬೆಂಗಳೂರು (ಮಾ.17): ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವ ಸೋಮವಾರವೂ ಮುಂದುವರಿದಿದ್ದು ನಗರದ ಹೋಟೆಲ್‌ ಉದ್ಯಮ ಮತ್ತಷ್ಟು ನಲುಗಿದೆ. ಹಲವು ಹೋಟೆಲ್‌ಗಳಲ್ಲಿ ಸೌದೆ ಒಲೆಯ ಅವಲಂಬನೆ ಮುಂದುವರಿದಿದ್ದು, ಕಾರ್ಮಿಕರನ್ನು ಸಂಭಾಳಿಸಲು ಹರಸಾಹಸ ಪಡುವಂತಾಗಿದೆ.

ಅನಿಲ ಸಿಲಿಂಡರ್‌ ಸರಬರಾಜಿನಲ್ಲಿ ಒಂದಷ್ಟು ಸುಧಾರಣೆ ಕಂಡು ಹೋಟೆಲ್‌ ಉದ್ಯಮಕ್ಕೆ ಸಹಾಯಕವಾಗಬಹುದು ಎಂದುಕೊಂಡಿದ್ದ ಹೋಟೆಲ್‌ ಮಾಲೀಕರಿಗೆ ಸೋಮವಾರವೂ ನಿರಾಸೆ ಉಂಟಾಗಿದೆ. ಸಮರ್ಪಕ ಸಿಲಿಂಡರ್‌ ಪೂರೈಕೆ ಆಗದೇ ಸೌದೆ ಒಲೆಯೇ ‘ಗಟ್ಟಿ’ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವೆಡೆ ಹೋಟೆಲ್‌ಗಳಲ್ಲಿ ಗ್ರಾಹಕರ ಕೊರತೆ ಕಂಡುಬಂದಿದ್ದು ಹೀಗಾದರೆ ಕಾರ್ಮಿಕರಿಗೆ ಸಂಬಳ ನೀಡುವುದು ಹೇಗೆ ಎಂದು ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಹೋಟೆಲ್‌ಗಳಿಗೆ ಈ ಮೊದಲೇ, ಕಾರ್ಮಿಕರ ಅಭಾವ ಇದೆ. ಇರುವ ಕಾರ್ಮಿಕರನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿಯಿದೆ.

ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್‌ನಲ್ಲಿ ಅನಿಲ ಸಿಲಿಂಡರ್‌ ಅಭಾವದಿಂದ ಸೌದೆ ಒಲೆಯ ಮೊರೆ ಹೋಗಲಾಗಿದೆ. ಕಳೆದ ಒಂದು ವಾರದಿಂದಲೂ ಸಿಲಿಂಡರ್‌ ಸಮಸ್ಯೆ ಉಂಟಾಗಿದ್ದು ಸೌದೆ ಒಲೆಯಲ್ಲೇ ಹೋಳಿಗೆ ಊಟ ತಯಾರು ಮಾಡುತ್ತಿದ್ದೇವೆ ಎಂದು ಹೋಟೆಲ್‌ ಸಿಬ್ಬಂದಿ ತಿಳಿಸಿದರು.

ಊರಿನತ್ತ ಹೋಟೆಲ್‌ ಸಿಬ್ಬಂದಿ

ಮಲ್ಲೇಶ್ವರದ 11 ನೇ ಅಡ್ಡರಸ್ತೆಯಲ್ಲಿರುವ ಕದಂಬ ಹೋಟೆಲ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಉಂಟಾಗಿರುವುದರಿಂದ ನೌಕರರಿಗೆ ಕೆಲಸ ಇಲ್ಲದಂತಾಗಿದೆ. ಎಂಟು ಕೆಲಸಗಾರರನ್ನು ಊರಿಗೆ ಕಳುಹಿಸಲಾಗಿದೆ. ಹೆಚ್ಚು ಅನಿಲ ಬೇಕಿರುವ ದೋಸೆ, ಪೂರಿ, ಊಟವನ್ನು ಸರಬರಾಜು ಮಾಡದೇ ಇಡ್ಲಿ, ರೈಸ್ ಬಾತ್ ಮಾತ್ರ ತಯಾರಿಸಲಾಗಿದೆ. ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಹೋಟೆಲ್ ಮ್ಯಾನೇಜರ್‌ ನಾಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಅಡ್ಯಾರ್‌ ಆನಂದಭವನದಲ್ಲಿ ಶೇ.25 ಮೆನು ಕಡಿತ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವದಿಂದಾಗಿ ನಗರದಲ್ಲಿರುವ 40 ಕ್ಕೂ ಅಧಿಕ ಅಡ್ಯಾರ್‌ ಆನಂದ ಭವನ(ಎ2ಬಿ) ರೆಸ್ಟೋರೆಂಟ್‌ಗಳಲ್ಲಿ ಅರ್ಧಕ್ಕರ್ಧ ಮೆನು ಕಡಿತಗೊಳಿಸಲಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ಶಾಂತಿನಗರ ಎ2ಬಿ ರೆಸ್ಟೋರೆಂಟ್‌ನ ಕ್ಯಾಷಿಯರ್‌ ನವೀನ್‌, ‘ಬೆಂಗಳೂರಿನಲ್ಲಿ ಸುಮಾರು 40 ಎ2ಬಿ ರೆಸ್ಟೋರೆಂಟ್‌ಗಳಿವೆ. ಮೊದಲು ಆಯಾ ರೆಸ್ಟೋರೆಂಟ್‌ಗಳಲ್ಲೇ ಒಂದಷ್ಟು ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಗ್ಯಾಸ್‌ ಅಭಾವದಿಂದಾಗಿ ನಾಗಾವಾರದಲ್ಲಿರುವ ವಿಶಾಲವಾದ ಸೆಂಟ್ರಲೈಸ್ಡ್‌ ಕಿಚನ್‌ನ ಸೌದೆ ಒಲೆಯಲ್ಲಿ ಖಾದ್ಯಗಳನ್ನು ತಯಾರಿಸಿ ಎಲ್ಲ ಕಡೆ ಸರಬರಾಜು ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಗ್ಯಾಸ್‌ ಅಭಾವದಿಂದಾಗಿ ಶೇ.25 ರಷ್ಟು ಮೆನು ಕಡಿತ ಮಾಡಲಾಗಿದೆ. ನಾಲ್ಕು ದಿನದಿಂದ ಪೂರಿ, ಪರೋಟಾ, ಚಪಾತಿ ತಯಾರಿಸುತ್ತಿಲ್ಲ. ಗ್ಯಾಸ್‌ ಸಿಲಿಂಡರ್‌ ಅಭಾವ ಉಂಟಾಗಿರುವುದರಿಂದ ಇಡ್ಲಿ, ರೈಸ್‌ಬಾತ್‌ ತಯಾರಿಸುತ್ತಿದ್ದೇವೆ ಎಂದು ವಿವರಿಸಿದರು.



Source link

Leave a Reply

Your email address will not be published. Required fields are marked *