
ಶೃಂಗೇರಿಯಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧುವಿಗೆ ಬಂದ ಅನಾಮಧೇಯ ಪತ್ರದಿಂದಾಗಿ ಅರ್ಧಕ್ಕೆ ನಿಂತಿದೆ. ವರನ ಮೇಲಿದ್ದ ಅತ್ಯಾ*ಚಾರ ಪ್ರಕರಣ ಸೇರಿದಂತೆ ಹಲವು ಸುಳ್ಳುಗಳು ಬಯಲಾಗುತ್ತಿದ್ದಂತೆ, ನಂಬಿಕೆ ದ್ರೋಹದಿಂದ ನೊಂದ ವಧು ‘ಈ ಮದುವೆ ಬೇಡ’ ಎಂದು ಮಂಟಪದಿಂದ ಹೊರನಡೆದಿದ್ದಾರೆ.
ಚಿಕ್ಕಮಗಳೂರು (ಫೆ.27): ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಕೆ ಇಂದು ಹೊಸ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ಹಸೆಮಣೆ ಏರುವ ಕ್ಷಣಕ್ಕೆ ಮುನ್ನ ಬಂದ ಒಂದು ‘ಅನಾಮಧೇಯ ಪತ್ರ’ ಹಾಗೂ ವರನ ಸರಣಿ ಸುಳ್ಳುಗಳು ಮದುವೆ ಮಂಟಪವನ್ನೇ ರಣರಂಗವನ್ನಾಗಿಸಿವೆ. ಮದುವೆ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ವಧು ‘ಈ ಮದುವೆ ನನಗೆ ಬೇಡ’ ಎಂದು ಮಂಟಪದಿಂದ ಹೊರನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.
ಏನಿದು ಘಟನೆ?
ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ಇಂದು 41 ವರ್ಷದ ದೀಕ್ಷಿತ್ ಹೆಗ್ಡೆ ಹಾಗೂ 29 ವರ್ಷದ ಸುಷ್ಮಾ ಅವರ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೀಕ್ಷಿತ್‌ಗೆ ಇದು ಮೊದಲ ಮದುವೆಯಾಗಿದ್ದರೆ, ಸುಷ್ಮಾಗೆ ಇದು ಎರಡನೇ ಮದುವೆಯಾಗಿತ್ತು. ಈಗಾಗಲೇ 9 ಸುಷ್ಮಾಗೆ ವರ್ಷದ ಮಗನೂ ಇದ್ದಾನೆ. ತನ್ನ ಮಗನಿಗೆ ಅಪ್ಪನ ಸ್ಥಾನ ನೀಡುವ, ತನಗೆ ಆಸರೆಯಾಗುವ ವ್ಯಕ್ತಿ ಎಂದು ನಂಬಿ ಸುಷ್ಮಾ ಈ ಸಂಬಂಧಕ್ಕೆ ಒಪ್ಪಿದ್ದರು.
ಅನಾಮಧೇಯ ಪತ್ರ ತಂದ ಅನಾಹುತ:
ಮದುವೆ ಸಂಭ್ರಮದಲ್ಲಿದ್ದ ಸುಷ್ಮಾಗೆ ಅಪರಿಚಿತ ವ್ಯಕ್ತಿಗಳಿಂದ ಬಂದ 5 ಪುಟಗಳ ದೂರು ಪತ್ರವೊಂದು ಕೈಸೇರಿದೆ ಎನ್ನಲಾಗಿದೆ. ಈ ಪತ್ರದಲ್ಲಿ ವರ ದೀಕ್ಷಿತ್ ಹೆಗ್ಡೆಯ ಬಗ್ಗೆ ಆಘಾತಕಾರಿ ವಿಷಯಗಳಿದ್ದವು. ಇದನ್ನು ಓದಿದ ಸುಷ್ಮಾ ವರನ ಕಡೆಯವರನ್ನು ಪ್ರಶ್ನಿಸಿದಾಗ ಏನೇ ಕೇಳಿದರೂ ಆಮೇಲೆ ಹೇಳುತ್ತೇನೆ ಎಂದು ಮುಂದೂಡಿಕೆ ಮಾಡುತ್ತಾ ಬಂದಿದ್ದರು. ಆದರೆ, ಇದೀಗ ಮದುಮಗನ ಸತ್ಯಗಳು ಒಂದೊಂದಾಗಿ ಹೊರಬರಲಾರಂಭಿಸಿವೆ. ಇದರಿಂದ ಆಕ್ರೋಶಗೊಂಡ ಸುಷ್ಮಾ ಮದುವೆ ನಿಲ್ಲಿಸಲು ನಿರ್ಧರಿಸಿದ್ದಾರೆ.
ವಧುವಿನ ಗಂಭೀರ ಆರೋಪಗಳು:
ಸುಷ್ಮಾ ಆರೋಪದ ಪ್ರಕಾರ, ದೀಕ್ಷಿತ್ ಮೊದಲನೆಯದಾಗಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದನು. ಎರಡನೇಯದಾಗಿ ಆತನ ಮೇಲೆ ಈಗಾಗಲೇ ಕೆಲವು ಪೊಲೀಸ್ ಪ್ರಕರಣಗಳು (Police Case) ದಾಖಲಾಗಿದ್ದು, ಆ ವಿಷಯವನ್ನೂ ಮುಚ್ಚಿಡಲಾಗಿತ್ತು. ಮುಖ್ಯವಾಗಿ 2021ರಲ್ಲಿ ನಡೆದ ರಾಜ್ಯವೇ ಬೆಚ್ಚಿ ಬೀಳಿಸುವ ಬಾಲಕಿ ಮೇಲಿನ ಅತ್ಯಾ*ಚಾರ ಕೇಸಿನಲ್ಲಿ ದೀಕ್ಷಿತ್ ಆರೋಪಿ ಆಗಿದ್ದಾನೆ. ಜೊತೆಗೆ, ಮನೆಯಲ್ಲಿ ದೀಕ್ಷಿತ್‌ನ ತಾಯಿ ಆರೋಗ್ಯವೂ ಸರಿಯಿಲ್ಲ ಎಂಬ ಸತ್ಯವನ್ನು ಮದುವೆಗೂ ಮುನ್ನ ಹೇಳಿರಲಿಲ್ಲ. ಈ ಬಗ್ಗೆ ಸುಷ್ಮಾ ಈ ಹಿಂದೆ ಕೇಳಿದಾಗಲೆಲ್ಲಾ ದೀಕ್ಷಿತ್, ‘ಒಮ್ಮೆ ಮದುವೆ ಆಗಲಿ, ಆಮೇಲೆ ಎಲ್ಲವನ್ನೂ ಹೇಳ್ತೀನಿ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದ ಎನ್ನಲಾಗಿದೆ.
ಮನವೊಲಿಕೆಗೂ ಬಗ್ಗದ ಯುವತಿ:
ಮದುವೆ ಮಂಟಪದಲ್ಲಿ ಹೈಡ್ರಾಮಾ ಶುರುವಾಗುತ್ತಿದ್ದಂತೆ ಸ್ಥಳಕ್ಕೆ ಸಿಡಿಪಿಓ (CDPO) ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿದರು. ಯುವತಿಗೆ ಸಂಧಾನದ ಮೂಲಕ ತಿಳಿಹೇಳಲು ಪ್ರಯತ್ನಿಸಿದರಾದರೂ, ‘ನಂಬಿಕೆ ದ್ರೋಹ ಮಾಡಿದವನ ಜೊತೆ ನಾನು ಜೀವನ ನಡೆಸಲು ಸಾಧ್ಯವಿಲ್ಲ’ ಎಂದು ಸುಷ್ಮಾ ಖಡಕ್ಕಾಗಿ ಹೇಳಿ ಮಂಟಪದಿಂದ ಹೊರನಡೆದಿದ್ದಾರೆ. ನಂಬಿಕೆಯ ಮೇಲೆ ನಿಲ್ಲಬೇಕಾದ ದಾಂಪತ್ಯದ ಅಡಿಪಾಯವೇ ಸುಳ್ಳಿನ ಮೇಲೆ ನಿರ್ಮಾಣವಾಗಲು ಹೊರಟಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ. ಸದ್ಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮದುವೆ ಅರ್ಧಕ್ಕೆ ನಿಂತು ದಿಬ್ಬಣ ವಾಪಸ್ ಹೋಗಿದೆ.