ನಂದಿನಿ ಉತ್ಪನ್ನ ‘ವಿಷ’ ಎಂದ ವೈದ್ಯೆಗೆ ಶಾಕ್: ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್! | Kmf Files Fir Against Dermatologist Dr Sharanya Padma Nandini Products Row San

ನಂದಿನಿ ಉತ್ಪನ್ನ ‘ವಿಷ’ ಎಂದ ವೈದ್ಯೆಗೆ ಶಾಕ್: ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್! | Kmf Files Fir Against Dermatologist Dr Sharanya Padma Nandini Products Row San


ಬೆಂಗಳೂರಿನ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ಅವರು ನಂದಿನಿ ಉತ್ಪನ್ನಗಳು ವಿಷಕಾರಿ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ರೀಲ್ಸ್ ಪೋಸ್ಟ್ ಮಾಡಿದ್ದರು. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಕೆಎಂಎಫ್, ತಮ್ಮ ಉತ್ಪನ್ನಗಳು ಸುರಕ್ಷಿತವೆಂದು ಹೇಳಿದೆ.

ಬೆಂಗಳೂರು (ಫೆ.19): ನಂದಿನಿ ಉತ್ಪನ್ನಗಳು ವಿಷಕಾರಿ, ಕಾಯಿಲೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಮತ್ತು ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಎಂದು ಹೇಳುವ ರೀಲ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ವಿರುದ್ಧ ಕೆಎಂಎಫ್‌ ಪೊಲೀಸ್‌ ದೂರು ದಾಖಲಿಸಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಮಾನನಷ್ಟಕರ ಎಂದು ಹೇಳಿರುವ ಕೆಎಂಎಫ್, ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಕೆಎಂಎಫ್‌ ಅನುಸರಿಸುತ್ತದೆ ಮತ್ತು ಅದರ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಹೇಳಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಏನಿದು ಘಟನೆ?

ಮಣಿಪಾಲ್ ಆಸ್ಪತ್ರೆ ಮತ್ತು ಮಾಲೂರಿನ ಬಾಲಾಜಿ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುವ ಡಾ. ಶರಣ್ಯ ಪದ್ಮ ಅವರು ಫೆಬ್ರವರಿ 8 ರಂದು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಒಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ನಂದಿನಿ ಉತ್ಪನ್ನಗಳಾದ ಕ್ರೀಮ್ ಬನ್, ಸ್ಟ್ರಾಬೆರಿ ಫ್ಲೇವರ್ಡ್ ಮಿಲ್ಕ್ ಮತ್ತು ಪಾನೀಯಗಳ ಕುರಿತು ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.

ವೈದ್ಯೆ ಮಾಡಿದ್ದ ಆರೋಪಗಳೇನು?

ನಂದಿನಿ ಉತ್ಪನ್ನಗಳು ಟಾಕ್ಸಿಕ್ ಮತ್ತು ರಾಸಾಯನಿಕಗಳಿಂದ ಕೂಡಿದ್ದು, ಇವುಗಳ ಸೇವನೆಯಿಂದ ಆಟೋಇಮ್ಯೂನ್ ಕಾಯಿಲೆಗಳು ಬರುತ್ತವೆ.ದೀರ್ಘಕಾಲದ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರುವುದು ಖಂಡಿತ.ಸ್ಟ್ರಾಬೆರಿ ಹಾಲಿನಲ್ಲಿ ನೈಸರ್ಗಿಕ ಹಣ್ಣೇ ಇಲ್ಲ, ಕೇವಲ ಕೃತಕ ಬಣ್ಣ ಮತ್ತು ಪ್ರಿಸರ್ವೇಟಿವ್ಸ್ ಇದೆ. ಇದು ಆಹಾರವಲ್ಲ, ವಿಷ.ಸರ್ಕಾರ ಮತ್ತು ಕೆಎಂಎಫ್ ಲಾಭಕ್ಕಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ” ಎಂದು ವಿಡಿಯೋದಲ್ಲಿ ವೈದ್ಯೆ ಗಂಭೀರ ಆರೋಪ ಮಾಡಿದ್ದರು.

ವೈದ್ಯೆಯ ಈ ಹೇಳಿಕೆಯನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ತೀವ್ರವಾಗಿ ಖಂಡಿಸಿತ್ತು. “ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಬಾಲ್ಯದಿಂದಲೇ ನಂದಿನಿಯೊಂದಿಗೆ ಬೆಳೆದಿರುವ ಕೋಟ್ಯಾಂತರ ಗ್ರಾಹಕರಲ್ಲಿ ಗೊಂದಲ ಮೂಡಿಸಲು ಈ ರೀತಿ ದುರುದ್ದೇಶಪೂರಿತ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಕೆಎಂಎಫ್ ತಿಳಿಸಿದೆ.

ನಂದಿನಿ ಬ್ರಾಂಡ್‌ನ ಘನತೆಗೆ ಧಕ್ಕೆ ತಂದಿರುವ ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸಿರುವ ವೈದ್ಯೆಯ ವಿರುದ್ಧ ಕೆಎಂಎಫ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *