
ಕಾನೂನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಲು ವಿನೂತನ ಉಪಾಯ ಬಳಸಿದ್ದಾನೆ. ಆತ ತನ್ನೆಲ್ಲಾ ಪೆನ್ನುಗಳ ಮೇಲೆ ಸೂಜಿಯಿಂದ ಇಡೀ ಪಠ್ಯಕ್ರಮವನ್ನು ಕೆತ್ತಿ, ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪೆನ್ನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಬುದ್ಧಿವಂತಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಯ ಸಮಯದಲ್ಲಿ ಏನೆಲ್ಲಾ ತಲೆ ಉಪಯೋಗಿಸಿ ಕಾಪಿ ಮಾಡುವ ವಿದ್ಯಾರ್ಥಿಗಳನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಕಾಪಿ ಮಾಡುವ ವಿಧಾನವನ್ನು ನೋಡಿದಾಗ ಅಬ್ಬಬ್ಬಾ ಎನ್ನಿಸುವುದು ಇದೆ. ಇದೇ ಬುದ್ಧಿಯನ್ನು ಪರೀಕ್ಷೆಗೆ ಓದಿ ಬರೆಯುವುದಕ್ಕೆ ಉಪಯೋಗಿಸಿದ್ರೆ ಸುಲಭವಾಗಿ ಟಾಪ್ 1 ಬರ್ತಿದ್ದ ಎಂದು ಎನ್ನಿಸುವುದು ಉಂಟು. ಆ ಪರಿಯ ಟ್ಯಾಲೆಂಟ್ಗಳನ್ನು ನೋಡಿ ಸುಸ್ತಾಗುವುದೂ ಉಂಟು. ಕೈ ಮೇಲೆ, ಚಿಕ್ಕ ಚೀಟಿಯಲ್ಲಿ, ತೊಡೆಯ ಮೇಲೆ, ಷರ್ಟ್ ಮೇಲೆ, ಬಟ್ಟೆ ಮೇಲೆ… ಹೀಗೆ ಎಲ್ಲೆಲ್ಲಿ ಜಾಗ ಸಿಗುತ್ತೋ ಎಲ್ಲಾ ಕಡೆ ಕಾಪಿ ಬರೆದುಕೊಂಡು ಪರೀಕ್ಷೆ ಬರೆದವರೂ ಇದ್ದಾರೆ, ಹಲವರು ತಗ್ಲಾಕ್ಕೊಂಡು ಡಿಬಾರ್ ಆದೋರೂ ಇದ್ದಾರೆ.
ಅಬ್ಬಬ್ಬಾ, ಇದೆಂಥ ನಕಲು?
ಆದರೆ, ಇವೆಲ್ಲಕ್ಕಿಂತಲೂ ಮಿಗಿಲಾದ ಘಟನೆಯೊಂದು ನಡೆದಿದೆ. ಇಲ್ಲಿ ಭಾವಿ ಕ್ರಿಮಿನಲ್ ಲಾಯರ್, ಅರ್ಥಾತ್ ಕಾನೂನು ಪರೀಕ್ಷೆಯ ವಿದ್ಯಾರ್ಥಿಯೊಬ್ಬ ಎಲ್ಲಾ ಪುಸ್ತಕಗಳ ಸಿಲೇಬಸ್ಗಳನ್ನೇ ಬರೆದುಕೊಂಡಿದ್ದ. ಅದೂ ಎಲ್ಲಿ ಅಂತೀರಾ, ಪೆನ್ನಿನ ಒಳಗೆ. ಇದನ್ನು ನೋಡಿದ ತನಿಖಾಧಿಕಾರಿಗಳೇ ಸುಸ್ತು ಬಿದ್ದು ಹೋಗಿದ್ದಾರೆ. ಪರೀಕ್ಷೆಯ ಸಮಯದಲ್ಲಿ ತನಿಖಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ ಈ ಪುಣ್ಯಾತ್ಮ. ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಈತನ ಟ್ಯಾಲೆಂಟ್ ನೋಡಿ ಪೊಲೀಸರೂ ಸುಸ್ತಾಗಿ ಹೋಗಿದ್ದಾರಂತೆ. ಅಷ್ಟಕ್ಕೂ ಈ ವಿದ್ಯಾರ್ಥಿ, ಸೂಜಿಯನ್ನು ಬಳಸಿ ಪ್ಲಾಸ್ಟಿಕ್‌ನಲ್ಲಿ ಪಠ್ಯವನ್ನು ಬರೆದಿದ್ದಾನೆ ಬಳಿಕ ಸೂಕ್ಷ್ಮ ಬರವಣಿಗೆಯನ್ನು ಗೋಚರಿಸುವಂತೆ ಮಾಡಲು ಶಾಯಿಯನ್ನು ಉಜ್ಜಿದ್ದಾನೆ ಎಂದಿದ್ದಾರೆ ಅಲ್ಲಿಯ ಪ್ರೊಫೆಸರ್ ಯೋಲಾಂಡಾ ಡಿ ಲುಚಿ.
ಸೋಷಿಯಲ್ ಮೀಡಿಯಾದಲ್ಲಿ ಶೇರ್
ಪೆನ್ ಒಳಗೆ ಚಿಕ್ಕದ್ದಾಗಿ ಸಂಪೂರ್ಣ ಸಿಲೇಬಸ್ ಬರೆದುಕೊಳ್ಳುವುದು ಕಡಿಮೆ ವಿಷಯವೇನಲ್ಲ. ಇವನೇನಾದ್ರೂ ಸಿಕ್ಕಿಬೀಳದೇ ಇದ್ದಿದ್ದರೆ ವರ್ಲ್ಡ್ ಫೇಮಸ್ ಕ್ರಿಮಿನಲ್ ಲಾಯರ್ ಆಗ್ತಿದ್ದ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು ನಡೆದಿರುವುದು ಸ್ಪೇನ್ನಲ್ಲಿ. ಮಲಗಾ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಈ ಜಾಣ್ಮೆಗೆ ಮೂಕವಿಸ್ಮಿತರಾಗಿರುವ ತನಿಖಾಧಿಕಾರಿಗಳು ಈ ಪೆನ್ಗಳ ಫೋಟೋ ಹೊಡೆದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದೀಗ ಪ್ರಪಂಚಾದ್ಯಂತ ಭಾರಿ ವೈರಲ್ ಆಗುತ್ತಿದೆ. ಎಲ್ಲಾ ಪೆನ್ಗಳನ್ನು ಸಾಕ್ಸ್ನಲ್ಲಿ ಅಡಗಿಸಿಕೊಂಡಿದ್ದ ಎನ್ನಲಾಗಿದೆ.
ಟ್ಯಾಲೆಂಟ್ಗೆ ನೆಟ್ಟಿಗರೂ ಫಿದಾ
ಇವನಿಗೆ ಬೈಯೋದು ಬಿಟ್ಟು, ನೆಟ್ಟಿಗರ ಪೈಕಿ ಹಲವರು ಈತನ ಟ್ಯಾಲೆಂಟ್ ಅನ್ನೇ ಹೊಗಳುತ್ತಿದ್ದಾರೆ. ಇಷ್ಟು ಸಿಲೇಬಸ್ ಬರೆಯಲು ಆತ ಎಷ್ಟು ಶ್ರಮ ಪಟ್ಟಿರಬಹುದು, ಆತ ಹೇಗೆಲ್ಲಾ ತಲೆ ಉಪಯೋಗಿಸಬಹುದು ಎನ್ನುತ್ತಿದ್ದಾರೆ. ಪರೀಕ್ಷೆಯಲ್ಲಿ ಪ್ರಶ್ನೆ ಬಂದಾಗ, ಆ ಪ್ರಶ್ನೆಗೆ ತಕ್ಕ ಉತ್ತರ ಎಲ್ಲಿದೆ ಎಂದು ಹುಡುಕುವುದಕ್ಕಾಗಿ ಆದರೂ ಆತನಿಗೆ ಬುದ್ಧಿ ಬೇಕಲ್ವಾ ಅಂತಿರೋ ನೆಟ್ಟಿಗರು, ಈತನನ್ನು ಬೇರೆ ಬುದ್ಧಿವಂತಿಕೆ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತು. ದೇಶಕ್ಕೆ ಬೇಕಾಗಿರುವ ಕೆಲವೊಂದು ನಿಗೂಢ ಕೆಲಸಕ್ಕೆ ಈತನನ್ನು ಉಪಯೋಗ ಪಡಿಸಿಕೊಳ್ಳಬಹುದಿತ್ತು ಎಂದೆಲ್ಲಾ ಹೇಳುತ್ತಿದ್ದಾರೆ.