
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ರೈಲು ಹಳಿಗಳನ್ನೇ ಬಳಸಿ ಸಿಸಿಟಿವಿ ಕಣ್ತಪ್ಪಿಸಿ ಸರಣಿ ಮನೆಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹79 ಲಕ್ಷ ಮೌಲ್ಯದ 527 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಈ ಹಿಂದೆಯೂ ಇದೇ ಮಾದರಿಯ ಕೃತ್ಯಕ್ಕಾಗಿ ಬಂಧಿತನಾಗಿದ್ದನು.
ಬೆಂಗಳೂರು ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯಿಂದ ಪೊಲೀಸರು ಮತ್ತೊಮ್ಮೆ ಭಾರೀ ಪ್ರಮಾಣದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ರೈಲು ಹಳಿಗಳ ಸುತ್ತಮುತ್ತ ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಸುಮಾರು 527 ಗ್ರಾಂ ತೂಕದ ಚಿನ್ನಾಭರಣವನ್ನು (ಅಂದಾಜು ₹79 ಲಕ್ಷ ಮೌಲ್ಯ) ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಚಿಕ್ಕಬಾಣವಾರದ ಅಬ್ಬಿಗೆರೆ ನಿವಾಸಿ ಡಿ. ರಾಜ (46) ಎಂದು ಗುರುತಿಸಲಾಗಿದೆ. ಮೂಲತಃ ದಾವಣಗೆರೆ ಜಿಲ್ಲೆಯವನಾದ ಈತ, ನಗರದಲ್ಲಿ ಸಿಸಿಟಿವಿ ನಿಗಾವಳಿಯನ್ನು ತಪ್ಪಿಸಲು ವಿಶಿಷ್ಟ ರೀತಿಯಲ್ಲಿ ಕಳವು ನಡೆಸುತ್ತಿದ್ದನು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಿಂದೆಯೇ ಬಂಧನ – ಮತ್ತೆ ಚಿನ್ನ ಪತ್ತೆ
ಕೆಲ ದಿನಗಳ ಹಿಂದೆಯೇ ಇದೇ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆಗಲೂ ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಇದೀಗ ರಾಮಮೂರ್ತಿನಗರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿದ್ದ ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮತ್ತೊಮ್ಮೆ ಅರ್ಧ ಕೆಜಿ ಚಿನ್ನಾಭರಣ ಪತ್ತೆಯಾಗಿದೆ.
ರೈಲ್ವೇ ಟ್ರ್ಯಾಕ್ ಮೂಲಕ ಕಳ್ಳತನದ ಮಾಸ್ಟರ್ ಪ್ಲಾನ್
ಪೊಲೀಸರ ಪ್ರಕಾರ, ಆರೋಪಿ ರಾಜ ರೈಲು ಹಳಿಗಳನ್ನೇ ತನ್ನ ಓಡಾಟದ ಮಾರ್ಗವನ್ನಾಗಿ ಬಳಸುತ್ತಿದ್ದ. ನಗರದ ಒಳಭಾಗಗಳಲ್ಲಿ ಸಂಚರಿಸಿದರೆ ಸಿಸಿಟಿವಿಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇರುವುದರಿಂದ, ಆತ ರೈಲ್ವೇ ಟ್ರ್ಯಾಕ್‌ಗಳ ಮೇಲೆಯೇ ನಡೆದುಕೊಂಡು ಹೋಗಿ ಗುರಿ ಮನೆಗಳನ್ನು ಆಯ್ಕೆ ಮಾಡುತ್ತಿದ್ದನು.
ರೈಲು ಹಳಿಗಳ ಪಕ್ಕದ ಮನೆಗಳ ಬಾಗಿಲುಗಳನ್ನು ಮುರಿದು ಕಳವು ಕಳ್ಳತನದ ನಂತರ ಕೂಡಲೇ ಸ್ಥಳ ತೊರೆಯದೆ, ಕೆಲವು ಗಂಟೆಗಳ ಕಾಲ ಅಲ್ಲೇ ಅಡಗಿ ಕುಳಿತುಕೊಳ್ಳುವುದು ಪೊಲೀಸರು ಸಿಸಿಟಿವಿ ಟೈಮ್‌ಲೈನ್ ಪರಿಶೀಲನೆ ಮಾಡುವುದನ್ನು ತಪ್ಪಿಸಲು ಯತ್ನ ಈ ರೀತಿಯ ಚಾತುರ್ಯದಿಂದ ಹಲವು ಕಳವು ಪ್ರಕರಣಗಳನ್ನು ಈತ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಸೂಕ್ಷ್ಮ ತನಿಖೆ ಫಲಿತಾಂಶ
ಸಿಸಿಟಿವಿ ದೃಶ್ಯಗಳು ಹಾಗೂ ಸಮಯದ ಆಧಾರದ ಮೇಲೆ ಪೊಲೀಸರ ತಂಡ ತನಿಖೆ ನಡೆಸಿ, ಆರೋಪಿ ಸಂಚರಿಸಿದ ಮಾರ್ಗಗಳನ್ನು ಪತ್ತೆಹಚ್ಚಿತು. ಬಳಿಕ ಕ್ರಮಬದ್ಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ರೈಲು ಹಳಿಗಳನ್ನು ಬಳಸಿಕೊಂಡು ಕಳವು ನಡೆಸುತ್ತಿದ್ದ ಆರೋಪಿಯ ಕುತಂತ್ರವನ್ನು ಪೊಲೀಸರು ಭೇದಿಸಿ, ದೊಡ್ಡ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿರುವುದು ಗಮನಾರ್ಹವಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ರಾಮಮೂರ್ತಿನಗರ ಪೊಲೀಸರು ಇನ್ನಷ್ಟು ವಿಚಾರಣೆ ಮುಂದುವರಿಸಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.