
ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ‘ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್’ (ITMS) ಜಾರಿಗೊಳಿಸಲಾಗುತ್ತಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದ, ಮೊಬೈಲ್ ಬಳಸುವ ವಾಹನ ಸವಾರರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮಾ.6): ಜಿಲ್ಲಾ ಕೇಂದ್ರಗಳಲ್ಲಿರುವ ನಾಗರಿಕರೇ ಎಚ್ಚರ! ಇನ್ಮುಂದೆ ಟ್ರಾಫಿಕ್ ಪೊಲೀಸರಿಲ್ಲ ಅಂತ ಹೆಲ್ಮೆಟ್ ಇಲ್ಲದೆ, ನೀಟು ಬೆಲ್ಟ್ ಹಾಕದೆ ಹಾಗೂ ಮೊಬೈಲ್ನಲ್ಲಿ ಹರಟುತ್ತಾ ಹೇಗೆಂದರೆ ಹಾಗೆ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ. ಯಾಕೆಂದರೆ ಪೊಲೀಸರಿಲ್ಲದಿದ್ರೂ ನಿಮ್ಮ ಮೇಲೆ ಕೃತಕ ಬುದ್ಧಿ ಮತ್ತೆ (ಎಐ) ಕ್ಯಾಮೆರಾಗಳ ಕಣ್ಗಾವಲು ಇದ್ದೇ ಇರುತ್ತದೆ!
ಹೌದು, ರಾಜಧಾನಿ ‘ಬೆಂಗಳೂರು ನಗರ ಮಾದರಿ’ಯಲ್ಲೇ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಮೂಲಕ ಕಣ್ಗಾವಲಿಟ್ಟು ದಂಡ ವಿಧಿಸುವ ‘ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್’ (ಐಟಿಎಂಎಸ್) ಜಾರಿಗೊಳಿಸಲು ರಾಜ್ಯ ಪೊಲೀಸ್ ಇಲಾಖೆ ಇದೀಗ ಮುಂದಾಗಿದೆ.
ಅಪಘಾತ ಪ್ರಕರಣಗಳಲ್ಲಿ ಸಾವು-ನೋವು ಪ್ರಮಾಣ ತಗ್ಗಿಸಲು ಯೋಜಿಸಿರುವ ಇಲಾಖೆ, ನಾಗರಿಕರಲ್ಲಿ ಸಂಚಾರ ಶಿಸ್ತು ಪಾಲನೆ ರೂಢಿಗೊಳಿಸಲು ಎಲ್ಲೆಡೆ ದಂಡಾಸ್ತ್ರ ಪ್ರಯೋಗಿಸುತ್ತಿದೆ. ಇದಕ್ಕಾಗಿ ಪ್ರಸುತ್ತ ಜಿಲ್ಲಾ ಕೇಂದ್ರಗಳ ಪ್ರಮುಖ ವೃತ್ತಗಳಲ್ಲಿ ಕ್ಯಾಮೆರಾಗಳನ್ನು ಎಐ ಕ್ಯಾಮೆರಾಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಬಳಿಕ ಮುಂದಿನ ದಿನಗಳಲ್ಲಿ ಆ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಹೊಸ ಕ್ಯಾಮೆರಾ ಅಳವಡಿಸಲು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ ಯೋಜಿಸಿದೆ.
ಅಪಘಾತಗಳಿಗೆ ಕಡಿವಾಣ ಹಾಕಲು ಕ್ರಮ:
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ನಾಗರಿಕರು ಅನುಸರಿಸಿದರೆ ಅಪಘಾತಗಳಿಗೆ ಕಡಿವಾಣ ಬೀಳಲಿದೆ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗ ಕಾನೂನು ಉಲ್ಲಂಘಿಸುವವರ ಮೇಲೆ ನಿಗಾವಹಿಸಲು ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ರಸ್ತೆ ಸುರಕ್ಷತೆ ವಿಭಾಗದ ಡಿಐಜಿ ಪರಮಶುರಾಮ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬೆಂಗಳೂರು ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಐಟಿಎಂಎಸ್ ವ್ಯವಸ್ಥೆ ಇದೆ. ಈಗ ಈ ವ್ಯವಸ್ಥೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುತ್ತಿದೆ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪೊಲೀಸರೇ ಹಿಡಿದು ದಂಡ ವಿಧಿಸುವುದು ತಪ್ಪಲಿದೆ. ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಬಳ್ಳಾರಿ, ಬೆಳಗಾವಿ ಹಾಗೂ ಧಾರವಾಡ ಸೇರಿ 18 ಜಿಲ್ಲೆಗಳಲ್ಲಿ ಕ್ಯಾಮೆರಾಗಳ ಜೋಡಣೆ ಮುಗಿದಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಕ್ಯಾಮೆರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆಂದೇ ಪ್ರತಿ ಜಿಲ್ಲೆಗೆ 1.5 ಕೋಟಿ ರು. ವಿನಿಯೋಗಿಸಲಾಗುತ್ತಿದೆ ಎಂದು ಡಿಐಜಿ ಹೇಳಿದ್ದಾರೆ.
ಎಲ್ಲೆಲ್ಲಿ ಹೆಚ್ಚು ನಿಗಾ?:
ಜನ ಸಂಚಾರ ರಸ್ತೆಗಳು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಎಐ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಈ ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಭಾವಚಿತ್ರ ತೆಗೆದು ಟಿಎಂಸಿಗೆ ರವಾನಿಸಲಿದೆ. ಈ ಮಾಹಿತಿ ಆಧರಿಸಿ ವಾಹನ ಸವಾರನಿಗೆ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.