
ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದವರ ಮೇಲೆ ನೆಲಮಂಗಲ ಸ್ವಾಮೀಜಿಯಿಂದ ಹಲ್ಲೆ, ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಸ್ವಾಮೀಜಿ ಕಾಲು ಹಿಡಿದರೂ ಹಿಂಬಾಲಕರ ಮೂಲಕ ಸ್ವಾಮೀಜಿ ಹಲ್ಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.
ನೆಲಮಂಗಲ(ಅ.04) ಟ್ರಾಫಿಕ್ ನಡುವೆ ಇತರರ ಪ್ರಯಾಣಕ್ಕೂ ಅಡ್ಡಿಯಾದ ಸ್ವಾಮೀಜಿ ಕಾರನ್ನು ಪ್ರಶ್ನಿಸಿದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ನಡೆದಿದೆ. ಕಿಕ್ಕಿರಿದು ತುಂಬಿದ ಟ್ರಾಫಿಕ್‌ಲ್ಲಿ ಇತರರ ಪ್ರಯಾಣಕ್ಕೂ ಅಡ್ಡಿ ಮಾಡಿದ ಕಾರಣಕ್ಕೆ ಕಾರಿನಲ್ಲಿದ್ದ ಕುಟುಂಬವೊಂದು ಪ್ರಶ್ನಿಸಿದೆ. ಇದರಿಂದ ರೊಚ್ಚಿಗೆದ್ದ ನೆಲಮಂಗಲದ ಸೋಲೂರು ಹೋಬಳಿಯ ಗೊರೂರು ಬಳಿ ಚೌಡೇಶ್ವರಿ ದೇವಸ್ಥಾನದ ಸ್ವಾಮೀಜಿಯಿಂದ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ಸ್ವಾಮೀಜಿ ಕಾಲು ಹಿಡಿದರೂ ಹಿಂಬಾಲಕರ ಮೂಲಕ ಹಲ್ಲೆ
ಸ್ವಾಮೀಜಿಯನ್ನೇ ಪ್ರಶ್ನಿಸಿದ ಕಾರಣಕ್ಕೆ ವಾಗ್ವಾದ ನಡೆದಿದ್ದು ಮಾತ್ರವಲ್ಲ ಹಲ್ಲೆಯೂ ನಡೆದಿದೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಕಾರಿನಲ್ಲಿದ್ದ ಕುಟುಂಬಸ್ಥರು ವಾಗ್ವಾದ ನಿಲ್ಲಿಸಿ ತೆರಳಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಸ್ವಾಮೀಜಿ ಬಳಿ ಪರಿ ಪರಿಯಾಗಿ ಮನವಿ ಮಾಡಿದ್ದಾರೆ. ಆದರೆ ಸ್ವಾಮೀಜಿ ತನ್ನ ಹಿಂಬಾಲಕರ ಮೂಲಕ ಕಾರಿನಲ್ಲಿದ್ದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಕಾರಿನಿಂದ ಇಳಿದ ಸ್ವಾಮೀಜಿ ನಡು ರಸ್ತೆಯಲ್ಲಿ ವಾಗ್ವಾದಕ್ಕೆ ಇಳಿದಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಕೆಲ ಹೊತ್ತುಗಳ ಕಾಲ ವಾಗ್ವಾದ, ಹಲ್ಲೆ ನಡೆದಿದೆ.
ಕಾರಿನಲ್ಲಿದ್ದ ಮೂವರ ಮೇಲೆ ಹಲ್ಲೆ ಆರೋಪ
ಸ್ವಾಮೀಜಿ ಹಿಂಬಾಲಕರು, ಕಾರಿನಲ್ಲಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಭಾರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಲ್ಲೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಭಾರಿ ಜನಸ್ತೋಮ ನೆರೆದಿದೆ. ಇತರ ವಾಹನ ಸವಾರರು ಸ್ಥಳಕ್ಕೆ ಆಗಮಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರು ಹಂತಕ್ಕೂ ಹೋಗಿತ್ತು.
ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಕುದೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಸ್ವಾಮೀಜಿ ವಿರುದ್ದ ಗಂಭೀರ ಆರೋಪಗಳು ಕೇಳಿಬಂದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಸ್ವಾಮೀಜಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.