
ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳ ಆದಾಯವನ್ನು ‘ಸಿ’ ವರ್ಗದ ದೇವಾಲಯ ಅಭಿವೃದ್ಧಿಗೆ ಬಳಸಲು ಅನುಮತಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಧಾನಸಭೆ (ಮಾ.10): ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳ ಆದಾಯವನ್ನು ‘ಸಿ’ ವರ್ಗದ ದೇವಾಲಯ ಅಭಿವೃದ್ಧಿಗೆ ಬಳಸಲು ಅನುಮತಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎ.ಬಿ.ರಮೇಶ್ ಬಂಡಿಸಿದ್ದೇಗೌಡರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 199 ಮುಜರಾಯಿ ದೇವಾಲಯಗಳಿವೆ. ಈ ಪೈಕಿ ಎ ವರ್ಗ 3, ಬಿ ವರ್ಗ 2 ಮತ್ತು ಸಿ ವರ್ಗದ 194 ದೇವಾಲಯಗಳಿವೆ. ಈ ಸಿ ವರ್ಗದ ದೇವಾಲಯಗಳಿಗೆ ವಾರ್ಷಿಕ 72 ಸಾವಿರ ರು. ತಸ್ತಿಕ್ ಮತ್ತು ವಾರ್ಷಿಕ 72 ಸಾವಿರ ವರ್ಷಾಸನ ನೀಡಲಾಗುತ್ತಿದೆ. ಈ ತಸ್ತಿಕ್ ಮತ್ತು ವರ್ಷಾಸನವು ಈ ಸಿ ವರ್ಗದ ದೇವಾಲಯಗಳ ಆದಾಯವಾಗಿದೆ ತಿಳಿಸಿದರು.
ನಿಮಿಷಾಂಬಾ ದೇವಾಲಯಕ್ಕೆ ₹8.83 ಕೋಟಿ ಆದಾಯ
ಶ್ರೀರಂಗಪಟ್ಟಣದ ಎ ವರ್ಗದ ನಿಮಿಷಾಂಬ ದೇವಾಲಯಕ್ಕೆ 2024-25ನೇ ಸಾಲಿನಲ್ಲಿ 8.83 ಕೋಟಿ ರು., ರಂಗನಾಥಸ್ವಾಮಿ ದೇವಾಲಯಕ್ಕೆ 5.15 ಕೋಟಿ ರು. ಮತ್ತು ಅಹಲ್ಯಾದೇವಿ ದೇವಾಲಯಕ್ಕೆ 1.98 ಕೋಟಿ ರು. ಆದಾಯ ಬಂದಿದೆ. ಬಿ ವರ್ಗದ ವೆಂಕಟರಮಣಸ್ವಾಮಿ ದೇವಾಲಯಕ್ಕೆ 17.25 ಲಕ್ಷ ರು. ಮತ್ತು ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯಕ್ಕೆ 10.10 ಲಕ್ಷ ರು. ಆದಾಯ ಬಂದಿದೆ ಎಂದು ಮಾಹಿತಿ ನೀಡಿದರು.
ಭಕ್ತರು ನೀಡುವ ಕಾಣಿಕೆ, ಹರಕೆ, ಸೇವೆ ಇತ್ಯಾದಿಗಳ ಮೂಲಕ ಸಂಗ್ರಹವಾಗುವ ಆದಾಯವನ್ನು ಆಯಾಯ ದೇವಾಲಯಗಳ ನಿಧಿಗೆ ಜಮೆ ಮಾಡಲಾಗುತ್ತದೆ. ಬಳಿಕ ದೇವಾಲಯದ ನಿರ್ವಹಣೆ, ನಿತ್ಯಕಟ್ಲೆ, ಹೆಚ್ಚು ಕಟ್ಲೆ, ರಥೋತ್ಸವ, ಸಿಬ್ಬಂದಿ ವೆಚ್ಚ, ಅಭಿವೃದ್ಧಿ, ಜೀರ್ಣೋದ್ಧಾರ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ಸಿನ ರಮೇಶ್ ಬಂಡಿಸಿದ್ದೇಗೌಡ, ಮುಜರಾಯಿ ದೇವಾಲಯಗಳಿಗೆ ಬರುವ ಆದಾಯವನ್ನು ಮುಜರಾಯಿಯೇತರ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮದಲ್ಲಿ ಖಾಸಗಿ ದೇವಾಲಯಗಳ ಅಭಿವೃದ್ಧಿಗೆ ಈ ಮುಜರಾಯಿ ದೇವಾಲಯಗಳ ಆದಾಯ ಬಳಸಿಕೊಳ್ಳಲು ಅವಕಾಶವಿಲ್ಲ. ಸಿ ವರ್ಗ ದೇವಾಲಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುಮತಿಸಬಹುದು ಎಂದರು.