
ಟಿ20 ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿದ್ದಾರೆ. ಆದರೆ, ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ ಈ ಪ್ರಶಸ್ತಿಗೆ ಹೆಚ್ಚು ಅರ್ಹರು ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಹಮದಾಬಾದ್: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು 96 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿದೆ. ಇದರ ಬೆನ್ನಲ್ಲೇ, ಟೂರ್ನಿಯ ಶ್ರೇಷ್ಠ ಆಟಗಾರ ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಅದ್ಭುತ ಪ್ರದರ್ಶನದಿಂದ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆದರೆ, ಈ ಪ್ರಶಸ್ತಿಗೆ ಸಂಜುಗಿಂತ ಜಸ್ಪ್ರೀತ್ ಬುಮ್ರಾ ಹೆಚ್ಚು ಅರ್ಹರು ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್
ಟೂರ್ನಿಯಲ್ಲಿ ಭಾರತ ಆಡಿದ ಒಂಬತ್ತು ಪಂದ್ಯಗಳಲ್ಲಿ ಸಂಜುಗೆ ಅವಕಾಶ ಸಿಕ್ಕಿದ್ದು ಕೇವಲ ಐದು ಪಂದ್ಯಗಳಲ್ಲಿ ಮಾತ್ರ. ಆದರೆ, ಆಡಿದ ಐದೇ ಪಂದ್ಯಗಳಲ್ಲಿ 200ರ ಸ್ಟ್ರೈಕ್ ರೇಟ್‌ನಲ್ಲಿ 321 ರನ್ ಚಚ್ಚಿದ ಸಂಜು ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸಿತ್ತು. ಟೂರ್ನಿಯ ಕೊನೆಯ ಹಂತದಲ್ಲಿ ಸಂಜು ತೋರಿದ ಈ ಬ್ಯಾಟಿಂಗ್ ಪರಾಕ್ರಮ, ಭಾರತದ ಗೆಲುವಿಗೆ ದೊಡ್ಡ ಕಾರಣವಾಯಿತು.
ಬುಮ್ರಾ ಹೋರಾಟವನ್ನು ಮರೆಯುವಂತಿಲ್ಲ
ಆದರೂ, ಟೂರ್ನಿಯುದ್ದಕ್ಕೂ ಬುಮ್ರಾ ನೀಡಿದ ಪ್ರದರ್ಶನವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಬುಮ್ರಾ 8 ಪಂದ್ಯಗಳಿಂದ 14 ವಿಕೆಟ್ ಪಡೆದು, ವರುಣ್ ಚಕ್ರವರ್ತಿ ಜೊತೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. “ಸಂಜು ಮತ್ತು ಬುಮ್ರಾ ನಡುವೆ ದೊಡ್ಡ ಸ್ಪರ್ಧೆಯೇ ಇತ್ತು. ಬುಮ್ರಾ ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ನಿರ್ಣಾಯಕ ಓವರ್‌ಗಳನ್ನು ಬೌಲ್ ಮಾಡಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಅವರಿಗಿತ್ತು. ಬುಮ್ರಾಗೆ ಹೆಚ್ಚು ಮನ್ನಣೆ ಸಿಗಬೇಕಿತ್ತು ಅನಿಸುತ್ತೆ,” ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಭಾರತದ ಪಿಚ್‌ಗಳಲ್ಲಿ ವೇಗದ ಬೌಲರ್‌ಗೆ ಬೌಲಿಂಗ್ ಮಾಡೋದು ಸುಲಭವಲ್ಲ. ಆದರೂ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಬುಮ್ರಾ ಮಾಡಿದ ಬೌಲಿಂಗ್ ಬೇರೆ ಗ್ರಹದಿಂದ ಬಂದವರ ಹಾಗೆ ಇತ್ತು ಎಂದು ಅವರು ಹೊಗಳಿದ್ದಾರೆ. 250ಕ್ಕೂ ಹೆಚ್ಚು ರನ್‌ಗಳನ್ನು ಡಿಫೆಂಡ್ ಮಾಡುವಾಗಲೂ ಬುಮ್ರಾ ಕೇವಲ 6.2 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು ನಿಜಕ್ಕೂ ವಿಶೇಷ. ಸದ್ಯಕ್ಕೆ, ಸಂಜು ಮತ್ತು ಬುಮ್ರಾ ಇಬ್ಬರೂ ಐಪಿಎಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಮುಂಬರುವ ಸವಾಲುಗಳಿಗೆ ಸಿದ್ಧರಾಗಲು ಈ ಐಪಿಎಲ್ ಸೀಸನ್ ಇಬ್ಬರಿಗೂ ಉತ್ತಮ ವೇದಿಕೆಯಾಗಲಿದೆ.
ಕೊನೆಯ ಮೂರು ಪಂದ್ಯಗಳಲ್ಲಿ ಸತತ 50+ ರನ್ ಬಾರಿಸಿದ ಸಂಜು ಸ್ಯಾಮ್ಸನ್:
ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಮುಗ್ಗರಿಸಿತ್ತು. ಹೀಗಾಗಿ ಸೆಮೀಸ್ ಪ್ರವೇಶಿಸಬೇಕಿದ್ದರೇ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಸಿಲುಕಿತ್ತು. ಆ ಬಳಿಕ ಮತ್ತೆ ತಂಡ ಕೂಡಿಕೊಂಡ ಸಂಜು ಸ್ಯಾಮ್ಸನ್ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ವೆಸ್ಟ್ ಇಂಡೀಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಜೇಯ 97 ರನ್ ಚಚ್ಚಿದ ಸಂಜು, ಆ ಬಳಿಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಹಾಗೂ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಸ್ಪೋಟಕ 89 ರನ್ ಸಿಡಿಸುವ ಮೂಲಕ ಇಂಪ್ಯಾಕ್ಟ್ ಇನ್ನಿಂಗ್ಸ್ ಕಟ್ಟಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಬುಮ್ರಾ:
ಭಾರತದ ಅತ್ಯಂತ ನಂಬಿಗಸ್ಥ ವೇಗದ ಬೌಲರ್ ಆಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು