
ಚಿಕ್ಕಮಗಳೂರು-ಮೈಸೂರು ಮಾರ್ಗದ ಸರ್ಕಾರಿ ಬಸ್ಸಿನಲ್ಲಿ ಮುರಿದುಬಿದ್ದಿದ್ದ ಸೀಟಿಗೆ ರೈತರೊಬ್ಬರು ತಮ್ಮ ಟವೆಲ್ ಬಳಸಿ ಆಸರೆ ಮಾಡಿಕೊಂಡು ಪ್ರಯಾಣಿಸಿದ್ದಾರೆ. ಈ ಘಟನೆಯು ಸಾರಿಗೆ ಇಲಾಖೆಯ ಬಸ್ಗಳ ಕಳಪೆ ನಿರ್ವಹಣೆ ಮತ್ತು ಶಕ್ತಿ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಚಿಕ್ಕಮಗಳೂರು (ಮಾ.13): ಸರ್ಕಾರಿ ಬಸ್ಸಿನ ಸೀಟು ಮುರಿದು ಬಿದ್ದಿದ್ದರೂ, ಎದೆಗುಂದದ ರೈತನೊಬ್ಬ ಮಾಡಿದ ಅನಾಹುತ ಐಡಿಯಾವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಮೈಸೂರು ಮಾರ್ಗದ ಬಸ್ಸಿನಲ್ಲಿ ಈ ವಿಚಿತ್ರ ಪ್ರಸಂಗ ನಡೆದಿದೆ. ಬಸ್ಸಿನ ಸೀಟು ಎಷ್ಟು ಮುರಿದಿದೆ ಎಂದರೆ ಅದರ ಮೇಲೆ ಕುಳಿತರೆ ಸೀಟು ಸಮೇತ ಕೆಳಗೆ ಕುಸಿದು ಬೀಳುವುದು ಗ್ಯಾರಂಟಿ. ಹೀಗಾಗಿ ಬಸ್ ಹತ್ತಿದ ಯಾವ ಪ್ರಯಾಣಿಕರೂ ಆ ಸೀಟಿನ ಮೇಲೆ ಕೂರುವ ಸಾಹಸ ಮಾಡಿರಲಿಲ್ಲ.
ರೈತನ ಐಡಿಯಾ ಮಸ್ತ್
ಚಿಕ್ಕಮಗಳೂರು-ಹಾಸನ ಮಾರ್ಗ ಮಧ್ಯೆ ಬಸ್ ಚಲಿಸುತ್ತಿದ್ದಾಗ ರೈತರೊಬ್ಬರು ಬಸ್ ಹತ್ತಿದ್ದಾರೆ. ಸೀಟು ಮುರಿದಿರುವುದನ್ನು ಕಂಡ ಅವರು ಬೈದುಕೊಳ್ಳದೆ, ಬೇರೆ ಸೀಟು ನೋಡದೆ ತಮ್ಮ ಬಳಿಯಿದ್ದ ಟವೆಲ್ ಅನ್ನು ಸೀಟಿನ ರಾಡ್ಗೆ ಭದ್ರವಾಗಿ ಕಟ್ಟಿ, ಅದನ್ನೇ ಆಸರೆಯಾಗಿಸಿಕೊಂಡು ಆರಾಮವಾಗಿ ಕುಳಿತು ಪ್ರಯಾಣಿಸಿದ್ದಾರೆ.
ತಾನು ಕೂರುವುದಷ್ಟೇ ಅಲ್ಲದೆ, ಮುಂದಿನ ಪ್ರಯಾಣಿಕರಿಗೂ ಅನುಕೂಲವಾಗಲಿ ಎಂದು ತಾವು ಕಟ್ಟಿದ ಟವೆಲ್ ಅನ್ನು ಬಿಚ್ಚದೆ ಹಾಗೆಯೇ ಬಿಟ್ಟು ಇಳಿದು ಹೋಗುವ ಮೂಲಕ ರೈತ ತನ್ನ ದೊಡ್ಡಗುಣ ಮೆರೆದಿದ್ದಾರೆ.
ಪ್ರಯಾಣಿಕರ ಆಕ್ರೋಶ ಮತ್ತು ವ್ಯಂಗ್ಯ:
ಈ ದೃಶ್ಯವನ್ನು ಕಂಡ ಸಹ ಪ್ರಯಾಣಿಕರು ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಪುಕ್ಕಟ್ಟೆ ಪ್ರಯಾಣವೇನೋ ಸರಿ, ಆದರೆ ಕನಿಷ್ಠ ಕುಳಿತುಕೊಳ್ಳಲು ಸೀಟುಗಳೂ ಗಟ್ಟಿ ಇಲ್ಲದಂತಾಗಿರುವುದು ಶಕ್ತಿ ಯೋಜನೆಯ ಅಡ್ಡಪರಿಣಾಮವೇ?’ ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ. ಮಗದೊಬ್ಬರು, ‘ಸೀಟುಗಳೇ ಹೀಗಿರುವಾಗ, ಇನ್ನು ಇಂಜಿನ್ ಸ್ಥಿತಿ ಹೇಗಿದೆಯೋ ಏನೋ?’ ಅಂತ ಆತಂಕ ವ್ಯಕ್ತಪಡಿಸಿದರೆ, ಇನ್ನೊಬ್ಬ ‘ಬಸ್ ಗುರಿ ತಲುಪುವವರೆಗೂ ಎಲ್ಲೂ ಕೆಟ್ಟು ನಿಲ್ಲದಿದ್ದರೆ ಅಷ್ಟೇ ಸಾಕಪ್ಪ’ ಎಂದಿದ್ದಾರೆ.
ಸದ್ಯಕ್ಕೆ ಈ ಮುರಿದ ಸೀಟು ಮತ್ತು ರೈತನ ಟವೆಲ್ ಆಸರೆಯ ಫೋಟೋಗಳು ವೈರಲ್ ಆಗುತ್ತಿದ್ದು, ಸಾರಿಗೆ ಇಲಾಖೆಯ ಬಸ್ಗಳ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.