
ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಬಳ್ಳಾರಿ (ಫೆ.23): ವಿದ್ಯಾ ದೇಗುಲವಾಗಬೇಕಿದ್ದ ಶಾಲೆಯಲ್ಲೇ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದ್ದು, ಈ ಘಟನೆಯಿಂದಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗ್ರಾಮವೊಂದರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯ ವಿವರ:
ಕಂಪ್ಲಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯ ಮೇಲೆ ಅದೇ ಶಾಲೆಯ ಶಿಕ್ಷಕ ಜಡೇಶ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಶಿಕ್ಷಕನು ಬಾಲಕಿಯ ಬಟ್ಟೆ ಬಿಚ್ಚಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಮಾಹಿತಿ ಹೊರಬರುತ್ತಿದ್ದಂತೆ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.
ರಸ್ತೆಗಿಳಿದ ಮಹಿಳಾ ಪಡೆ:
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಹಿಳೆಯರು ಶಾಲೆಯ ಮುಂದೆ ಜಮಾಯಿಸಿ ಆಕ್ರೋಶ ಹೊರಹಾಕಿದರು. “ಮಕ್ಕಳಿಗೆ ರಕ್ಷಣೆ ನೀಡಬೇಕಾದ ಶಿಕ್ಷಕನೇ ಈ ರೀತಿ ಮೃಗೀಯವಾಗಿ ವರ್ತಿಸಿದರೆ ಪೋಷಕರು ನಂಬುವುದು ಯಾರನ್ನು?” ಎಂದು ಪ್ರಶ್ನಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು. ರಸ್ತೆಯ ಮೇಲೆ ಕುಳಿತು ಕೆಲಕಾಲ ವಾಹನ ಸಂಚಾರ ತಡೆದ ಪ್ರತಿಭಟನಾಕಾರರು, ಆರೋಪಿ ಶಿಕ್ಷಕನನ್ನ ಕೂಡಲೇ ಸ್ಥಳಕ್ಕೆ ಕರೆಸಬೇಕು ಮತ್ತು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಪೊಲೀಸ್ ಭೇಟಿ ಮತ್ತು ಕ್ರಮ:
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಂಪ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಪೊಲೀಸರು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಈ ಪ್ರಕರಣವು ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗುವ ಪ್ರಕ್ರಿಯೆಯಲ್ಲಿದೆ.
ಸಾರ್ವಜನಿಕರ ಆಗ್ರಹ:
‘ಇಂತಹ ಕಾಮುಕ ಶಿಕ್ಷಕರು ಸಮಾಜಕ್ಕೆ ಕಂಟಕ. ಇವರನ್ನು ಕೇವಲ ಅಮಾನತು ಮಾಡುವುದಲ್ಲ, ಕೆಲಸದಿಂದಲೇ ವಜಾಗೊಳಿಸಿ ಜೈಲಿಗಟ್ಟಬೇಕು’ ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಭೀತಿ ಮೂಡಿಸಿದೆ.