
ತುಮಕೂರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಗಂಡ ಸತ್ತ 19 ದಿನಕ್ಕೆ ಪತ್ನಿ ಮರುಮದುವೆಯಾಗಿರುವು ಅನುಮಾನಕ್ಕೆ ಕಾರಣವಾಗಿತ್ತು.
ತುಮಕೂರು (ಮಾ.06): ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ವ್ಯಕ್ತಿಯೊಬ್ಬನ ‘ನಿಗೂಢ ಸಾವು’ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೊದಲಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ನಂಬಿಸಲಾಗಿದ್ದ ಈ ಪ್ರಕರಣ, ಈಗ ಪತ್ನಿ ಹಾಗೂ ಆಕೆಯ ಪ್ರಿಯಕರನ ಕ್ರೂರ ಕೃತ್ಯ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿದೆ.
ಸಂಶಯ ಹುಟ್ಟಿಸಿದ ಪತ್ನಿಯ ಎರಡನೇ ಮದುವೆ:
ದಾಸರಹಳ್ಳಿಯ ನಿವಾಸಿಯಾಗಿದ್ದ ವ್ಯಕ್ತಿ (ಹೆಸರು ಗೌಪ್ಯ) ಹಠಾತ್ತನೆ ಮೃತಪಟ್ಟಾಗ, ಆತನ ಪತ್ನಿ ಆಶಾ ಇದು ಹೃದಯಾಘಾತ ಎಂದು ಎಲ್ಲರನ್ನೂ ನಂಬಿಸಿದ್ದಳು. ಆದರೆ, ಗಂಡ ಸತ್ತ ಕೇವಲ 19 ದಿನಗಳಲ್ಲೇ ಆಶಾ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದು ಗ್ರಾಮಸ್ಥರಲ್ಲಿ ಮತ್ತು ಸಂಬಂಧಿಕರಲ್ಲಿ ಭಾರಿ ಸಂಶಯ ಮೂಡಿಸಿತ್ತು. ದುಃಖದಲ್ಲಿರಬೇಕಾದ ಪತ್ನಿ ಇಷ್ಟು ಬೇಗ ಹಸೆಮಣೆ ಏರಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿತು.
ಸಹೋದರಿಯ ಹಠ, ಪೊಲೀಸರ ಕಾರ್ಯಾಚರಣೆ:
ಮೃತನ ಸಹೋದರಿ ಆಶಾ ನಡವಳಿಕೆಯನ್ನು ಗಮನಿಸಿ, ತನ್ನ ತಮ್ಮನ ಸಾವು ನೈಸರ್ಗಿಕವಲ್ಲ, ಇದರಲ್ಲಿ ಯಾವುದೋ ಸಂಚಿದೆ ಎಂದು ಶಂಕೆ ವ್ಯಕ್ತಪಡಿಸಿ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತುಮಕೂರು ತಹಶಿಲ್ದಾರ್ ಸಮ್ಮುಖದಲ್ಲಿ ಹೂತಿಟ್ಟಿದ್ದ ಮೃತದೇಹವನ್ನು ಹೊರತೆಗೆದು (Exhumation) ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ:
ವೈದ್ಯಕೀಯ ತಪಾಸಣೆಯ ವರದಿ ಬರುತ್ತಿದ್ದಂತೆಯೇ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಮೃತ ವ್ಯಕ್ತಿ ಹೃದಯಾಘಾತದಿಂದ ಸತ್ತಿಲ್ಲ, ಬದಲಿಗೆ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಕುತ್ತಿಗೆಯ ಭಾಗದಲ್ಲಿ ಒತ್ತಡ ಹೇರಿರುವುದು ಮತ್ತು ಉಸಿರಾಟಕ್ಕೆ ತೊಂದರೆ ನೀಡಿರುವುದು ಕಂಡುಬಂದಿದೆ.
ದಿಂಬಿನಿಂದ ಕತ್ತು ಹಿಸುಕಿ ಹತ್ಯೆ:
ಪೊಲೀಸರು ಆಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೈಶಾಚಿಕ ಕೃತ್ಯ ಬಯಲಾಗಿದೆ. ಆಕೆಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿತ್ತು. ಈ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ, ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಅಂದು ರಾತ್ರಿ ಗಂಡ ಗಾಢ ನಿದ್ರೆಯಲ್ಲಿದ್ದಾಗ, ತಲೆ ದಿಂಬಿನಿಂದ (Pillow) ಮುಖ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಸದ್ಯ ಹೆಬ್ಬೂರು ಪೊಲೀಸರು ಪತ್ನಿ ಆಶಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂಬಂಧಿಕರ ಸಮಯಪ್ರಜ್ಞೆಯಿಂದಾಗಿ ಮುಚ್ಚಿಹೋಗಿದ್ದ ಕೊಲೆ ಪ್ರಕರಣವೊಂದು ಈಗ ಬೆಳಕಿಗೆ ಬಂದಂತಾಗಿದೆ.